ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು: ಎಂ.ಲಕ್ಷ್ಮಣ್‌

ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ
Last Updated 30 ಸೆಪ್ಟೆಂಬರ್ 2021, 9:48 IST
ಅಕ್ಷರ ಗಾತ್ರ

ಮೈಸೂರು: ‘ತಮಿಳುನಾಡಿಗೆ 70 ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿದೆ. ಆದರೆ, ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ 66 ಟಿಎಂಸಿ ಅಡಿ ನೀರು ಸಂಗ್ರಹವಿರುವುದರಿಂದ ಯಾವುದೇ ಕಾರಣಕ್ಕೂ ನೀರು ಹರಿಸಬಾರದು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆಗ್ರಹಿಸಿದರು.

‘ಕೆಆರ್‌ಎಸ್‌, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಆ.29ರ ವೇಳೆಗೆ 209 ಟಿಎಂಸಿ ಅಡಿ ನೀರು ಶೇಖರಣೆ ಆಗಿರಬೇಕಿತ್ತು. ಆದರೆ, 156.8 ಟಿಎಂಸಿ ಅಡಿ ನೀರಿದೆ. ಜೂನ್‌, ಜುಲೈ, ಆಗಸ್ಟ್‌ನಲ್ಲಿ ತಮಿಳುನಾಡಿಗೆ ಬಿಡಬೇಕಿರುವ ನೀರಿನ ಪ್ರಮಾಣ 86.38 ಟಿಎಂಸಿ ಅಡಿ. ಆ.29ರವರೆಗೆ 55.75 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ಬಾಕಿ 30.63 ಟಿಎಂಸಿ ಅಡಿ ನೀರು ಹರಿಸಬೇಕಿದ್ದು, ಸೆಪ್ಟೆಂಬರ್ ಕೋಟಾ 37 ಟಿಎಂಸಿ ನೀರು ಸೇರಿಸಿ 67.63 ಟಿಎಂಸಿ ಅಡಿ ನೀರು ಹರಿಸುವಂತೆ ಮಂಡಳಿ ಆದೇಶಿಸಿತ್ತು. ಈ ಪೈಕಿ ಆ.29ರಿಂದ ಸೆ.29ರವರೆಗೆ 17 ಟಿಎಂಸಿ ನೀರು ಬಿಡಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸೆ.27ರಂದು ಮಂಡಳಿ ಸಭೆ ನಡೆಸಿದ್ದು, ಬಾಕಿ ಇರುವ 50 ಹಾಗೂ ಅಕ್ಟೋಬರ್‌ ತಿಂಗಳ ಕೋಟಾ 20 ಸೇರಿ 70 ಟಿಎಂಸಿ ಅಡಿ ನೀರು ಹರಿಸುವ ನಿರ್ಣಯಕ್ಕೆ ಕರ್ನಾಟಕ ಒಪ್ಪಿಗೆ ಸೂಚಿಸಿದೆ. ಆದರೆ, ನಾಲ್ಕು ಜಲಾಶಯಗಳಲ್ಲಿ ಇಷ್ಟು ನೀರಿಲ್ಲ. ಎಲ್ಲ ನೀರನ್ನು ತಮಿಳುನಾಡಿಗೆ ಬಿಟ್ಟರೆ ಇಲ್ಲಿನ ಜನರ ಗತಿ ಏನು’ ಎಂದು ಪ್ರಶ್ನಿಸಿದರು.

‘ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ಪ್ರತಿದಿನ 1 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದೇ ರೀತಿ ಬಿಟ್ಟರೆ ಡಿಸೆಂಬರ್‌ ಒಳಗೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಒಂದು ವರ್ಷಕ್ಕೆ 40 ಟಿಎಂಸಿ ಅಡಿ ನೀರು ಬೇಕು. ನೀರಾವರಿಗಾಗಿ 110 ಟಿಎಂಸಿ ಅಡಿ ನೀರು ಬೇಕು. ಇಷ್ಟು ನೀರನ್ನು ಎಲ್ಲಿಂದ ತರುವುದು? ಹೀಗಾಗಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅ.7ರಂದು ನಡೆಯುವ ಮಂಡಳಿಯ ಸಭೆಯಲ್ಲೂ ಆಕ್ಷೇಪ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದರು.

‘ತಮಿಳುನಾಡಿನಲ್ಲಿ ಬಿಜೆಪಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ನೀರನ್ನು ಹರಿಸಲಾಗುತ್ತಿದೆ. ಇದರಲ್ಲಿ ಬಿಜೆಪಿಯ ಕೈವಾಡ ಇದೆ’ ಎಂದು ಆರೋಪಿಸಿದರು.


‘ಆರ್‌ಎಸ್‌ಎಸ್‌– ತಾಲಿಬಾನ್‌ ನಡುವೆ ಹೋಲಿಕೆ’

‘ಆರ್‌ಎಸ್‌ಎಸ್‌ ಹಾಗೂ ತಾಲಿಬಾನ್‌ ನಡುವೆ ಯಾವುದೇ ವ್ಯತ್ಯಾಸವಿಲ್ಲ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌, ‘ತಾಲಿಬಾನ್‌ ಹಾಗೂ ಆರ್‌ಎಸ್‌ಎಸ್‌ ನಡುವೆ ಇರುವ ಹೋಲಿಕೆಯ 8 ಅಂಶಗಳ ಪಟ್ಟಿ ಮಾಡಿದ್ದೇನೆ’ ಎಂದರು.

‘ಆಫ್ಘಾನಿಸ್ತಾನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹುಟ್ಟಿಕೊಂಡ ಸಂಘಟನೆ ತಾಲಿಬಾನ್‌. 1973ರಲ್ಲಿ ತಾಲಿಬಾನಿಗಳು ಬುದ್ಧ ವಿಗ್ರಹವನ್ನು ಒಡೆದರು. ಅದೇ ರೀತಿ ಆರ್‌ಎಸ್‌ಎಸ್‌ನವರು 1940ರಲ್ಲಿ ಗಯಾದಲ್ಲಿ ಬುದ್ಧ ವಿಗ್ರಹವನ್ನು ಒಡೆದರು.’

‘ತಾಲಿಬಾನಿಗಳು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದಿಲ್ಲ. ಆರ್‌ಎಸ್‌ಎಸ್‌ನವರು ಮಹಿಳೆಯರಿಗೆ ಗೌರವ ನೀಡುವುದಿಲ್ಲ. ಅಲ್ಲಿ ಯಾವುದೇ ಮಹಿಳಾ ಘಟಕ ಇಲ್ಲ, ಮಹಿಳೆಯರೂ ಇಲ್ಲ.’

‘ತಾಲಿಬಾನಿಗಳಿಗೆ ಇಸ್ಲಾಂ ಬಿಟ್ಟರೆ ಬೇರೆ ಧರ್ಮಗಳ ಬಗ್ಗೆ ಒಲವಿಲ್ಲ, ಸಹಿಸಿಕೊಳ್ಳುವುದಿಲ್ಲ. ಅದೇ ರೀತಿ ಆರ್‌ಎಸ್‌ಎಸ್‌ನವರು ಬಿಜೆಪಿಯಲ್ಲಿರುವ ಹಿಂದೂಗಳನ್ನು ಮಾತ್ರ ಪ್ರೀತಿಸುತ್ತಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರನ್ನು ದ್ವೇಷಿಸುತ್ತಾರೆ.’

‘ತಾಲಿಬಾನಿಗಳು ರಕ್ತಪಾತವನ್ನು ಇಷ್ಟಪಡುತ್ತಾರೆ. ಆರ್‌ಎಸ್‌ನವರು ರಕ್ತಪಾತವನ್ನು ಪರೋಕ್ಷವಾಗಿ ಇಷ್ಟಪಡುತ್ತಾರೆ. ತಾಲಿಬಾನಿಗಳಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಆರ್‌ಎಸ್‌ನವರಿಗೂ ನಂಬಿಕೆ ಇಲ್ಲ. ತಾಲಿಬಾನಿಗಳು ಜುಬ್ಬಾ ಪೈಜಾಮ ಹಾಕಿಕೊಂಡು ಗನ್‌ ಹಿಡಿದು ಓಡಾಡುತ್ತಾರೆ. ಅದೇ ರೀತಿ ಆರ್‌ಎಸ್‌ಎಸ್‌ನವರು ಚಡ್ಡಿ, ಟೋಪಿ, ಲಾಠಿ ಹಿಡಿದಿರುತ್ತಾರೆ. ಬಹಳಷ್ಟು ತಾಲಿಬಾನಿಗಳು ಬ್ಯಾಚುಲರ್‌ಗಳು. ಆರ್‌ಎಸ್‌ನವರೂ ಸಹ ಬ್ಯಾಚುಲರ್‌ಗಳು’ ಎಂದು ಎಂ.ಲಕ್ಷ್ಮಣ್‌ ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಅವರನ್ನು ಭಯೋತ್ಪಾದಕರೆಂದು ಕರೆದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕರ್ನಾಟಕದ ದೊಡ್ಡ ಜೋಕರ್‌. ಕಟೀಲ್‌ ಸಹ ಭಯೋತ್ಪಾದಕ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ ಎಂದು ಸದಾನಂದಗೌಡರು ಹೇಳಿದ್ದಾರೆ. ನಿಮ್ಮನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿ. ನಿಮ್ಮ ಸಿನಿಮಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ಅದಕ್ಕೆ ಹೀರೋ ನೀವೇ ಎನ್ನುವುದು ಗೊತ್ತು. ಹೀರೋಯಿನ್‌ ಯಾರೆಂಬುದರ ಬಗ್ಗೆ ಸ್ಪಷ್ಟೀಕರಣ ನೀಡಿ’ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಈಶ್ವರ್‌ ಚಕ್ಕಡಿ, ನಾಗಭೂಷಣ್‌ ತಿವಾರಿ ಇದ್ದರು.

***

ನಯವಂಚಕ ಸಿ.ಎಚ್‌.ವಿಜಯಶಂಕರ್‌ ಪಿರಿಯಾಪಟ್ಟಣದ ಟಿಕೆಟ್‌ಗಾಗಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿದ್ಧಾರೆ. ಅವರಿಗೆ ಭ್ರಮನಿರಸನ ಆಗಲಿದೆ.
–ಮಂಜುಳಾ ಮಾನಸ, ಕೆಪಿಸಿಸಿ ವಕ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT