ಸೋಮವಾರ, ಜೂನ್ 21, 2021
29 °C
ಜಮೀನಿಗಳಿಗೆ ನುಗ್ಗುವ ಆನೆಗಳು: ರೈತರು ಹೈರಾಣು

ಕಂದಕ ದಾಟಲು ಮಣ್ಣು ಜರಿಸಿದ ಕಾಡಾನೆಗಳು

ಎಂ.ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ಓಂಕಾರ ಅರಣ್ಯ ಪ್ರದೇಶದಿಂದ ತಾಲ್ಲೂಕಿನ ಹೆಡಿಯಾಲ ಅರಣ್ಯದಂಚಿನ ಗ್ರಾಮಗಳಿಗೆ ಆಹಾರ ಅರಸಿ ಬರುವ ಕಾಡಾನೆಗಳ ನಿಯಂತ್ರಣಕ್ಕೆ ನಿರ್ಮಿಸಿದ ಆನೆ ಕಂದಕ ಸರಿಯಾಗಿಲ್ಲವಾದ್ದರಿಂದ ಆನೆಗಳು ಸುಲಭವಾಗಿ ದಾಟಿ ಬಂದು, ರೈತರ ಬೆಳೆ ನಾಶಪಡಿಸುತ್ತಿವೆ.

ದ್ಯಾಪೇಗೌಡನಪುರ, ಶೆಟ್ಟಹಳ್ಳಿ, ಹಂಚಿಪುರ, ದೇವರಾಯಶೆಟ್ಟಿಪುರ, ಸಿದ್ದಯ್ಯನ ಹುಂಡಿ, ಹೊಸಪುರ ಗ್ರಾಮಗಳ ವ್ಯಾಪ್ತಿಯಲ್ಲಿ 2017-18ರ ಸಾಲಿನಲ್ಲಿ ₹ 4 ಕೋಟಿ ವೆಚ್ಚದಲ್ಲಿ 24 ಕಿ.ಮೀ. ಉದ್ದದ ಆನೆ ಕಂದಕ ನಿರ್ಮಿಸಲಾಗಿದೆ. ಕಂದಕ ನಿರ್ಮಾಣದ ಗುತ್ತಿಗೆ ಪಡೆದವರು, ನಿಯಮಗಳನ್ನು ಸರಿಯಾಗಿ ಪಾಲಿಸದ್ದರಿಂದ ಕಂದಕವಿದ್ದರೂ ಆನೆಗಳ ಉಪಟಳ ತಪ್ಪಿಲ್ಲ ಪ್ರಯೋಜನವಿಲ್ಲದಂತಾಗಿದೆ ಎಂದು ರೈತರು ದೂರಿದ್ದಾರೆ.

ಸಿದ್ದಗೌಡನ ಹುಂಡಿ ಗ್ರಾಮದ ಜಯಶಂಕರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ನಿಯಮದಂತೆ 3 ಮೀಟರ್ ಅಗಲ, 3 ಮೀ. ಆಳ ಹಾಗೂ ಕಂದಕದ ತಳದಲ್ಲಿ 1.5 ಮೀ ವಿಸ್ತೀರ್ಣದ ಕಂದಕ ನಿರ್ಮಿಸಬೇಕು, ಗುತ್ತಿಗೆದಾರರು ಕೆಲವು ಕಡೆ ಮಾತ್ರ ತೋರಿಕೆಗಾಗಿ ನಿಯಮ ಪಾಲಿಸಿದ್ದು, ಬಹುತೇಕ ಕಂದಕ ನಿರ್ಮಾಣದಲ್ಲಿ ನಿಯಮ ಪಾಲನೆಯಾಗಿಲ್ಲ. ಮನುಷ್ಯರು ಸಹ ಈ  ಕಂದಕವನ್ನು ಆರಾಮವಾಗಿ ದಾಟಬಹುದಾಗಿದೆ. ಆನೆಗಳು ಕಂದಕಕ್ಕೆ ಕಾಲಿನಿಂದ ಮಣ್ಣನ್ನು ತಳ್ಳಿ, ದಿಣ್ಣೆ ನಿರ್ಮಿಸಿಕೊಂಡು,  ಸರಾಗವಾಗಿ ದಾಟಿ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ತಿಂದು-ತುಳಿದು ನಾಶಪಡಿಸುತ್ತವೆ. ಆದ್ದರಿಂದ ಕಂದಕದ ಬದಿಯಲ್ಲಿ ರೈಲ್ವೆ ಕಂಬಿಗಳ ತಡೆಗೋಡೆ (ಬ್ಯಾರಿಕೇಟ್) ನಿರ್ಮಿಸಿ, ತಡೆಗೋಡೆಗೆ ಸೋಲಾರ್ ವಿದ್ಯುತ್ ಹರಿಸಿದರೆ ಬೆಳೆಯನ್ನು ರಕ್ಷಿಸಬಹುದು’ ಎಂದು ಮನವಿ ಮಾಡುತ್ತಾರೆ.

‘ಕಷ್ಟಪಟ್ಟು ಬೆಳೆದ ರಾಗಿ, ಜೋಳ, ಅರಿಸಿನ, ಕಬ್ಬು, ಬಾಳೆ ಬೆಳೆಗಳು ಕಾಡಾನೆಗಳ ಪಾಲಾಗುತ್ತಿದೆ. ಉಳಿದ ಅಷ್ಟೋ - ಇಷ್ಟೋ ಫಸಲಿನಿಂದ ಜೀವನ ನಡೆಸಬೇಕಾಗಿದೆ’ ಎಂದು ದ್ಯಾಪೇಗೌಡನಪುರದ ವೃಷಭೇಂದ್ರಪ್ಪ ಅಳಲು ತೋಡಿಕೊಂಡರು.

‘ಕಳೆದ 5 ವರ್ಷಗಳಿಂದ ವನ್ಯ ಪ್ರಾಣಿಗಳ ದಾಳಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಿಲ್ಲ. ಕೆಲ ವರ್ಷಗಳ ಹಿಂದೆ ಕಟಾವಿಗೆ ಬಂದಿದ್ದ 3 ಎಕರೆ ಕಬ್ಬನ್ನು ಆನೆಗಳ ದಾಳಿಯಿಂದ ಕಳೆದುಕೊಂಡ ಹೊಸಪುರ ಗ್ರಾಮದ ಪುಟ್ಟಮಾದಪ್ಪ ಬೆಳೆ ನಷ್ಟದ ಪರಿಹಾರ ನೀಡದ ಅರಣ್ಯಾಧಿಕಾರಿಗಳನ್ನು ಪ್ರಶ್ನೆ ಮಾಡಿದಕ್ಕೆ ಕುಪಿತಗೊಂಡ, ಅಧಿಕಾರಿಗಳು ಜಾಮೀನು ರಹಿತ ಮೊಕದ್ದಮೆ ದಾಖಲು ಮಾಡಿ, ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದರು. ಇದರಿಂದ ಹೆದರಿದ ರೈತರು ಪರಿಹಾರ ಕೇಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತರು ತಮ್ಮ ಸಂಕಟ ವಿವರಿಸಿದರು.

‘ವನ್ಯ ಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆ ನಷ್ಟಕ್ಕೆ ಕನಿಷ್ಠ ₹ 7.5 ಸಾವಿರ, ಗರಿಷ್ಠ ₹ 1 ಲಕ್ಷ ಪರಿಹಾರ ನೀಡಬೇಕೆಂಬ ನಿಯಮವಿದ್ದರೂ, ಅಧಿಕಾರಿಗಳ ಅಸಹಕಾರದಿಂದ ಪಾಲನೆಯಾಗುತ್ತಿಲ್ಲ’ ಎಂದು ಹಲವು ರೈತರ ಆರೋಪವಾಗಿದೆ.

‘ಕಂದಕ ನಿರ್ಮಾಣವಾಗಿ ಒಂದು ವರ್ಷ ಕಳೆದಿದೆ. ಮಳೆ ನೀರು ಹರಿದು ಕೆಲವು ಕಡೆ ಮಣ್ಣು ಕುಸಿದು ಸಮಸ್ಯೆಯಾಗಿದೆ, ನೀರು ಹರಿಯುವ ಸ್ಥಳಗಳಲ್ಲಿ 500 ಮೀ. ರೈಲ್ವೆ ಕಂಬಿ ಅಳವಡಿಸಿ, ಆನೆಗಳು ಜಮೀನುಗಳಿಗೆ ನುಗ್ಗದಂತೆ ತಡೆಯಲು ಕ್ರಮವಹಿಸಲಾಗುವುದು. ಕಂದಕ ನಿರ್ಮಾಣ ಆನೆ ತಡೆಗೆ ಶಾಶ್ವತ ಪರಿಹಾರವಲ್ಲ, ಕಾಡಿನಲ್ಲಿ ಯಥೇಚ್ಛವಾಗಿ ಮೇವಿದೆ. ರೈತರ ಜಮೀನುಗಳಿಗೆ ದಾಳಿಯಿಟ್ಟು ಅಭ್ಯಾಸವಾಗಿರುವ ಕೆಲವು ಪುಂಡಾನೆಗಳು ಕಂದಕ ದಾಟಿ ಬರುತ್ತವೆ. ಅವುಗಳನ್ನು ಮತ್ತೆ ಕಾಡಿಗೆ ಅಟ್ಟಲಾಗುತ್ತದೆ’ ಎಂದು ಓಂಕಾರ ಅರಣ್ಯ ಪ್ರದೇಶದ ಸಹಾಯಕ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು