ಶನಿವಾರ, ಫೆಬ್ರವರಿ 4, 2023
17 °C
ಹಲವೆಡೆ ಕವಿದ ಮೋಡಗಳು, ಕೆಲವೆಡೆಯಷ್ಟೇ ಅವಕಾಶ

ಖಗೋಳಾಸಕ್ತರಿಗೆ ಮೋಡ ‘ಗ್ರಹಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಟ್ಟವಾದ ಮೋಡಗಳು ಸೂರ್ಯಗ್ರಹಣಕ್ಕೆ ‘ಗ್ರಹಣ’ವಿಡಿದು ಖಗೋಳಾಸಕ್ತರಿಗೆ ನಗರದಲ್ಲಿ ನಿರಾಸೆ ತರಿಸಿದವು.

ಕೆಲವು ಭಾಗಗಳಲ್ಲಿ ಮೋಡಗಳ ಮಧ್ಯೆ ಆಗಾಗ್ಗೆ ಗ್ರಹಣವು ಸ್ಪಷ್ಟವಾಗಿಯೇ ಗೋಚರಿಸಿತು. ಆದರೆ, ಕೆಲವು ನಿಮಿಷಗಳ ತರುವಾಯ ಮತ್ತೆ ಮೋಡಗಳು ಅಡ್ಡ ಬರುತ್ತಿದ್ದವು.

ಬೆಳಿಗ್ಗೆ 8ರಿಂದ 11ರವರೆಗಿನ ಅವಧಿಯಲ್ಲಿ ಮೊದಲ 30 ನಿಮಿಷಗಳು ಮಾತ್ರ ಮೋಡಗಳಿಲ್ಲದೇ ವೀಕ್ಷಣೆ ಸಾಧ್ಯವಾಯಿತು. ನಂತರವೆಲ್ಲ ಮೋಡಗಳದ್ದೇ ಚೆಲ್ಲಾಟವಾಯಿತು. ಒಂದರ ಹಿಂದೊಂದರಂತೆ ಬರುತ್ತಿದ್ದ ಮೋಡಗಳು ಸುಲಲಿತವಾದ ಗ್ರಹಣ ವೀಕ್ಷಣೆಗೆ ಅವಕಾಶವನ್ನೇ ನೀಡಲಿಲ್ಲ.

ಇಲ್ಲಿನ ಓವಲ್ ಮೈದಾನದಲ್ಲಿ ಮೈಸೂರು ಸೈನ್ಸ್ ಫೌಂಡೇಷನ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸೌರಕನ್ನಡಕಗಳನ್ನು ನೀಡುವ ಮೂಲಕ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮೋಡಗಳಿಂದಾಗಿ ಹಲವರು ಮೊಬೈಲ್‌ನಲ್ಲಿ ‘ಇಂಡಿಯನ್‌ ಸ್ಕೈ ಮ್ಯಾಪ್‌’ ಆ್ಯಪ್‌ ಮೂಲಕ ಗ್ರಹಣ ವೀಕ್ಷಿಸಿ ತಮ್ಮ ಕುತೂಹಲವನ್ನು ತಣಿಸಿಕೊಂಡರು.

ಹೆಬ್ಬಾಳದ ನಿವಾಸಿ ಸುಷ್ಮಾ ಅವರು ತಮ್ಮ 7 ತಿಂಗಳ ಮಗುವಿನೊಡನೆ ಇಲ್ಲಿ ಗ್ರಹಣ ವೀಕ್ಷಿಸಿದ್ದು ವಿಶೇಷ ಎನಿಸಿತ್ತು. ‘ಮೂಢನಂಬಿಕೆಯನ್ನು ಬಿಡಬೇಕು. ಅಪರೂಪಕ್ಕೆ ಸಿಗುವ ಇಂತಹ ಅವಕಾಶವನ್ನು ಕಳೆದುಕೊಳ್ಳಬಾರದು’ ಎಂದು ಪ್ರತಿಕ್ರಿಯಿಸಿದರು.

ಆಯೋಜಕರು ಸೂರ್ಯಗ್ರಹಣದ ಸಮಯದಲ್ಲಿ ಬಿಸ್ಕತ್ ವಿತರಿಸುವ ಮೂಲಕ ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು ಎಂಬ ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿದ್ದು ವಿಶೇಷ ಎನಿಸಿತ್ತು. ವಿಷಯ ತಜ್ಞರು ವಿದ್ಯಾರ್ಥಿಗಳ ಗೊಂದಲ ನಿವಾರಿಸಿದರು.

ನಗರದ ಬಹುತೇಕ ಭಾಗಗಳಲ್ಲಿ ಬಂದ್‌ನಂತಹ ವಾತಾವರಣ ಕಂಡು ಬಂದಿತು. ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ರಸ್ತೆಬದಿ ಹೋಟೆಲ್‌ಗಳು ಕಾರ್ಯನಿರ್ವಹಿಸಲಿಲ್ಲ. ಗ್ರಹಣದ ನಂತರ ತರಕಾರಿ ಖರೀದಿಗೆ ಜನರು ಮುಗಿಬಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು