ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಕ್ಷಿಣ ಪದವೀಧರ ಕ್ಷೇತ್ರ: ಗೆಲುವಿಗೆ ಸಿದ್ಧತೆ’

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಅಭಿಮತ
Last Updated 14 ಮೇ 2022, 3:11 IST
ಅಕ್ಷರ ಗಾತ್ರ

ಹುಣಸೂರು: ‘ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸಿದ್ದು, ಈ ಬಾರಿ ಪಕ್ಷ ಗೆಲುವು ಸಾಧಿಸುವುದು ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪಕ್ಷ ಈ ಬಾರಿ ಸಾಮಾನ್ಯ ಕಾರ್ಯಕರ್ತರಾಗಿ ದುಡಿದ ಮೈ.ವಿ. ರವಿಶಂಕರ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು, ಇವರ ಪ್ರಾಮಾಣಿಕತೆ, ಸ್ಪಂದನೆ ಮತ್ತು ನಿಷ್ಠೆ ಈ ಮೂರು ಸಾಮಾನ್ಯ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿ ಸಂಘಟನಕಾರರಾಗಿ ಕಾರ್ಯ ನಿರ್ವಹಿಸಿದ ಇವರು, ಸಾಮಾನ್ಯ ಜನರ ನೋವು ಅರಿತು ಸ್ಪಂದಿಸಿ ಕೆಲಸ ನಿರ್ವಹಿಸಿದ ಅನುಭವಿ. ವಿಧಾನ ಪರಿಷತ್‌ನಲ್ಲಿ ಸರ್ಕಾರಿ ನೌಕರರ ಸಮಸ್ಯೆ ಚರ್ಚಿಸುವ ವ್ಯಕ್ತಿ ಅಗತ್ಯವಿದ್ದು, ಆ ಸ್ಥಾನಕ್ಕೆ ರವಿಶಂಕರ್ ಸೂಕ್ತ ವ್ಯಕ್ತಿ’ ಎಂದು ಹೇಳಿದರು.

‘ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ 1.5 ಲಕ್ಷ ಪದವೀಧರರು ನೋಂದಣಿಯಾಗಿದ್ದು, ಈ ಪೈಕಿ ಬಿಜೆಪಿ ಸದಸ್ಯರು ನೋಂದಣಿ ಮಾಡಿಸಿದ 60 ಸಾವಿರ ಪದವೀಧರರಿದ್ದಾರೆ. ಹೀಗಾಗಿ ಗೆಲುವು ನಿಶ್ಚಿತ’ ಎಂದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಿಸಲು ಹಲವು ಯೋಜನೆ ಜಾರಿಗೊಳಿಸಿ ಈವರೆಗೆ 20 ಲಕ್ಷ ಯುವಕರನ್ನು ಉದ್ಯಮಿಗಳನ್ನಾಗಿ ಮಾಡಿ ರಾಜ್ಯದಲ್ಲಿ ಯುವ ಉದ್ಯಮಿಗಳನ್ನು ಸೃಷ್ಟಿಸಲಾಗಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ವಿರೋಧ ಪಕ್ಷವನ್ನು ಸಮರ್ಪಕವಾಗಿ ನಿಭಾಯಿಸಿ ತನ್ನ ಕೆಲಸ ನಡೆಸಿದೆ’ ಎಂದು ತಿಳಿಸಿದರು.

ಪ್ರಚಾರ ಸಭೆಯಲ್ಲಿ ಮೈಸೂರು ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಯೋಗಾನಂದ ಕುಮಾರ್, ನಾಗರಾಜ್ ಮಲ್ಲಾಡಿ, ರಾಜ್ಯ ಕೃಷಿ ಮೋರ್ಚಾ ಕಾರ್ಯದರ್ಶಿ ಡಾ.ನವೀನ್ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣೇಗೌಡ, ನಗರ ಮೋರ್ಚಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿದರು.

ವೇದಿಕೆಯಲ್ಲಿ ಚಂದ್ರಶೇಖರ್, ಜಾಬಗೆರೆ ರಮೇಶ್, ಸೂರ್ಯಕುಮಾರ್ ಹಾಗೂ ಹಲವರು ಇದ್ದರು.

‘ಜಿಲ್ಲೆಯ ಐವರು ಪ್ರಭಾವಿಗಳು ಶೀಘ್ರ ಬಿಜೆಪಿಗೆ: ಸಚಿವ

ಹುಣಸೂರು: ‘ವಿಧಾನಪರಿಷತ್ ಚುನಾವಣೆ ಬಳಿಕ ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ಆಗಲಿದ್ದು 5 ರಿಂದ 6 ಜನರು ಪ್ರಮುಖರು ಬಿಜೆಪಿ ಸೇರಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ನಡೆದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳೆ ಮೈಸೂರು ಭಾಗದಲ್ಲಿ ವರಿಷ್ಠರ ಸೂಚನೆಯಂತೆ ಈಗಾಗಲೇ ಸಮಿತಿ ರಚನೆಯಾಗಿ ವಿವಿಧ ರಾಜಕೀಯ ಮುಖಂಡರ ಭೇಟಿ ಕೆಲಸ ನಡೆದಿದೆ. ಚುನಾವಣೆ ಬಳಿಕ ಎರಡನೇ ಹಂತದಲ್ಲಿ ಪಕ್ಷ ಸೇರ್ಪಡೆ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಹುಣಸೂರು ಸೇರಿದಂತೆ ಬಿಜೆಪಿ ಪಾಲು ಹೆಚ್ಚಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‌‘11 ಕ್ಷೇತ್ರದಲ್ಲಿ 3 ಸ್ಥಾನದಲ್ಲಿದ್ದೇವೆ. ಈ ಸ್ಥಾನವನ್ನು 3ರಿಂದ 6ಕ್ಕೆ ತರಬೇಕು ಎಂಬ ಸೂಚನೆ ಇದ್ದು, ಜಿ.ಟಿ. ದೇವೇಗೌಡರು ಮರಳಿ ಬಿಜೆಪಿ ಸೇರುವ ಬಗ್ಗೆ ಪ್ರಸ್ತಾಪಿಸಿ ಅವರು, ಸಮಿತಿ ರಚಿಸಿದ್ದು ನನ್ನ ಹೆಗಲಿಗೆ ಹೊಣೆ ನೀಡಿದ್ದಾರೆ. ಸಂಘಟನೆ ಮತ್ತು ಪಕ್ಷ ಸೇರ್ಪಡೆ ಕೆಲಸ ಮುಂದುವರಿಯಲಿದೆ’ ಎಂದರು.

‘ರಾಜ್ಯದಲ್ಲಿ ಎದ್ದಿರುವ ಭ್ರಷ್ಟಾಚಾರ ಕೂಗು ಈ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಸರ್ಕಾರದ ಗಮನಕ್ಕೆ ಬಂದ ನಂತರದಲ್ಲಿ ಈಗಾಗಲೇ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ’ ಎಂದರು.

‘ರಾಗಿ ಬೆಳೆಗಾರರಿಗೆ ಸಮಸ್ಯೆ ಈಗ ಬಗೆಹರಿದಿದ್ದು, ಹೊಸದಾಗಿ 4.6 ಲಕ್ಷ ಕ್ವಿಂಟಲ್ ಹೊಸದಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಸೂಚನೆ ನೀಡಲಾಗಿದೆ. ಹೀಗಾಗಿ ಸಣ್ಣ ರೈತರು ಆತಂಕಪಡಬೇಕಿಲ್ಲ. ರಾಗಿ ಖರೀದಿಸಿ ಹಣ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT