ಬುಧವಾರ, ಆಗಸ್ಟ್ 17, 2022
25 °C
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ

ಕ್ರೀಡಾ ವಿದ್ಯಾರ್ಥಿ ವೇತನ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಕ್ರೀಡಾ ವಿದ್ಯಾರ್ಥಿ ವೇತನದ ಹೆಚ್ಚಳಕ್ಕೆ ಶುಕ್ರವಾರ ನಡೆದ ವಿ.ವಿ.ಯ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದೆ.

‘2020-2021ನೇ ಸಾಲಿನಿಂದ ವಿಶ್ವವಿದ್ಯಾನಿಲಯ ಉತ್ತಮ ಕ್ರೀಡಾಪಟುಗಳಿಗೆ ನೀಡುವ ಕ್ರೀಡಾ ವಿದ್ಯಾರ್ಥಿ ವೇತನವನ್ನು ₹ 3 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಸಿಂಡಿಕೇಟ್‌ ಸದಸ್ಯ ಇ.ಸಿ.ನಿಂಗರಾಜಗೌಡ ಸಭೆಯ ಆರಂಭದಲ್ಲೇ ಸಲಹೆ ನೀಡಿದರು.

ಈ ವಿಷಯದ ಬಗ್ಗೆ ಚರ್ಚೆ ನಡೆಸಿದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಅಧ್ಯಕ್ಷತೆಯ ಸಿಂಡಿಕೇಟ್ ಸಭೆ ಅನುಮೋದನೆ ನೀಡಿತು.

‘ನೂರನೇ ಘಟಿಕೋತ್ಸವದ ನೆನಪಿಗಾಗಿ ವಿ.ವಿ.ಯ ಸಂಶೋಧನೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಪರಿಚಯಿಸಲು ಮಾನಸ-2021 ವಸ್ತು ಪ್ರದರ್ಶನ ಏರ್ಪಡಿಸಲು ಸಹ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗ ಕಾಲೇಜು: ಅನುಮೋದನೆ

ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಹಾಗೂ ಹಾಸನ ಜಿಲ್ಲೆಯ ಹೆತ್ತೂರಿನ ಪದವಿ ಕಾಲೇಜುಗಳನ್ನು ಮೈಸೂರು ವಿ.ವಿ.ಯ ಅಂಗ ಕಾಲೇಜುಗಳನ್ನಾಗಿ ಪಡೆಯಲು ಸಹ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

ಈ ಎರಡೂ ಕಾಲೇಜುಗಳನ್ನು ಮೈಸೂರು ವಿ.ವಿ. ಅಂಗ ಕಾಲೇಜುಗಳನ್ನಾಗಿ ಮಾಡಿಕೊಳ್ಳುವಂತೆ ಸರ್ಕಾರ ಪತ್ರ ಬರೆದು ಸೂಚಿಸಿತ್ತು. ಸಿಂಡಿಕೇಟ್ ಸಭೆಯಲ್ಲಿ ಈ ಪತ್ರ ಮಂಡಿಸಿ, ಚರ್ಚಿಸಿದ ಬಳಿಕ ಅನುಮೋದನೆ ನೀಡಲಾಗಿದೆ ಎಂದು ಹೇಮಂತ್‌ಕುಮಾರ್ ತಿಳಿಸಿದರು.‌

‘ಈ ಎರಡು ಕಾಲೇಜುಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕೌಶಲ ಅಭಿವೃದ್ಧಿ ಕಾಲೇಜುಗಳಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ತಜ್ಞರ ಸಮಿತಿ ರಚನೆ ಮಾಡಿ, ಈ ಕಾಲೇಜುಗಳಲ್ಲಿ ಕೌಶಲ ಕೋರ್ಸ್‌ಗಳನ್ನು ಆರಂಭಿಸುವ ಬಗ್ಗೆ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ’ ಎಂದು ಕುಲಪತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು