ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಸಾಧಕರಿಗೆ ಗೌರವ

ಲಯನ್ಸ್‌ ಕ್ಲಬ್‌ ವತಿಯಿಂದ ‘ದಕ್ಷಿಣ ಕೇಸರಿ’ ಪ್ರಶಸ್ತಿ
Last Updated 26 ಮೇ 2019, 19:40 IST
ಅಕ್ಷರ ಗಾತ್ರ

ಮೈಸೂರು: ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಸೌತ್‌ ಸಂಸ್ಥೆಯು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ‘ದಕ್ಷಿಣ ಕೇಸರಿ’ ಪ್ರಶಸ್ತಿ ನೀಡಿ ಗೌರವಿಸಿತು.

ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಅವರು ಸಾಧಕ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿದರು.

ಬಳಿಕ ಮಾತನಾಡಿದ ಲಿಂಗರಾಜ ಗಾಂಧಿ, ಇಂದು ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿವೆಯಾದರೂ ಜ್ಞಾನದ ಮಟ್ಟ ಕುಸಿಯುತ್ತಿದೆ. ಸಂಪತ್ತು ದ್ವಿಗುಣಗೊಳ್ಳುತ್ತಿದೆಯಾದರೂ ಮೌಲ್ಯಗಳು ಕುಸಿಯುತ್ತಿವೆ. ಮೌಲ್ಯಗಳು ಕುಸಿದಿರುವ ಸಮಾಜ ಮತ್ತು ದೇಶಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು.

ಮೌಲ್ಯಗಳಿಲ್ಲದಿದ್ದರೆ ಪ್ರಗತಿಯಿಲ್ಲ. ಮೌಲ್ಯವರ್ಧಿತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಶಿಕ್ಷಣದ ಮೌಲ್ಯ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ತಿಳಿಸಿದರು.

ಅವಕಾಶಗಳು ಹೆಚ್ಚು: ಎಸ್ಸೆಸ್ಸೆಲ್ಸಿ ಬಳಿಕ ಕಾಲೇಜು ಶಿಕ್ಷಣ ಮುಂದುವರಿಸುವಾಗ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಇರುತ್ತದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶಗಳು ಇವೆ. ಆದ್ದರಿಂದ ಗೊಂದಲಪಡುವ ಅಗತ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣಕ್ಕೂ ಅಭಿವೃದ್ಧಿಗೂ ಸಾಕಷ್ಟು ನಂಟು ಇದೆ. ಸಾಕ್ಷರತೆಯ ಪ್ರಮಾಣ ಹೆಚ್ಚಿದರೆ ಒಂದು ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಎಸ್ಸೆಸ್ಸೆಲ್ಸಿ ಪೂರೈಸುವುದು ಒಬ್ಬ ವಿದ್ಯಾರ್ಥಿಯ ಜೀವನದ ಮಹತ್ವದ ಘಟ್ಟಗಳಲ್ಲೊಂದು. ಮುಂದೆ ಯಾವ ದಿಕ್ಕಿನತ್ತ ಹೋಗಬೇಕು ಎಂಬುದನ್ನು ನಿರ್ಧರಿಸುವ ಸಮಯ ಇದು. ಎಸ್ಸೆಸ್ಸೆಲ್ಸಿ ಬಳಿಕ ಒಬ್ಬನ ಶೈಕ್ಷಣಿಕ ಜೀವನ ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಮಾಸ್ಟರ್ಸ್‌ ಅಥ್ಲೀಟ್‌ಗಳನ್ನು ಲಯನ್ಸ್ ಕ್ಲಬ್‌ ವತಿಯಿಂದ ಸನ್ಮಾನಿಸಲಾಯಿತು.

ಲಯನ್ಸ್‌ ಕ್ಲಬ್‌ ಡಿಸ್ಟ್ರಿಕ್ಟ್‌ ‘317 ಎ’ ಪ್ರಾಂತೀಯ ಮುಖ್ಯಸ್ಥ ಎಸ್‌.ಸುರೇಶ್‌ ಬಾಬು, ವಲಯ ಮುಖ್ಯಸ್ಥ ಜಯ ಕುಮಾರ್, ಲಯನ್ಸ್‌ ಕ್ಲಬ್‌ ಆಫ್ ಮೈಸೂರು ಸೌತ್‌ ಅಧ್ಯಕ್ಷ ಕೆ.ಕೆ.ಮೋಹನ್, ಕಾರ್ಯದರ್ಶಿ ಜಿ.ಎಸ್‌.ಸಂತೋಷ್, ಖಜಾಂಚಿ ಎಂ.ತಾತಾಜಿ, ಪ್ರಶಸ್ತಿ ಸಮಿತಿ ಮುಖ್ಯಸ್ಥ ಪಿ.ರಾಜನ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT