ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯದಲ್ಲಿ ಫಾರ್ಮಸಿ ಕಾಲೇಜು ಆರಂಭ: ಪ್ರೊ.ಜಿ.ಹೇಮಂತಕುಮಾರ್

ಮಾನಸಗಂಗೋತ್ರಿಯಲ್ಲಿ 4 ಎಕರೆ ಜಾಗ ನಿಗದಿ: ಪ್ರೊ.ಜಿ.ಹೇಮಂತಕುಮಾರ್ ಹೇಳಿಕೆ
Last Updated 1 ಜೂನ್ 2022, 10:38 IST
ಅಕ್ಷರ ಗಾತ್ರ

ಮೈಸೂರು: ‘ಫಾರ್ಮಸಿ ಕಾಲೇಜಿಗೆ 4 ಎಕರೆ ಮೀಸಲಿರಿಸಲಾಗಿದ್ದು, ಆರಂಭಕ್ಕಿದ್ದ ತೊಡಕುಗಳನ್ನು ಸುಪ್ರೀಂ ಕೋರ್ಟ್‌ ಬಗೆಹರಿಸಿದೆ. ಇದೇ ಡಿಸೆಂಬರ್‌ನಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆ ಸಿಗಲಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಬುಧವಾರ ‘ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌’ ಆಯೋಜಿಸಿದ್ದ ಎಐಸಿಟಿಇ ಪರಿಚಯಾತ್ಮಕ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ‘24 ವರ್ಷದ ನಂತರ ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್‌ಗಳು ಮತ್ತೆ ವಿಶ್ವವಿದ್ಯಾಲಯದಲ್ಲಿ ಆರಂಭವಾಗುತ್ತಿರುವುದು ಸಂತಸದ ಸಂಗತಿ’ ಎಂದರು.

‘2019ರಲ್ಲೇ ಎಂಜಿನಿಯರಿಂಗ್‌ ಹಾಗೂ ಫಾರ್ಮಸಿ ಕಾಲೇಜುಗಳನ್ನು ಆರಂಭಿಸುವ ಕುರಿತು ಘೋಷಿಸಲಾಗಿತ್ತು. ಚಾಮುಂಡಿಬೆಟ್ಟದ ತಪ್ಪಲಿನ ವಿಶ್ವವಿದ್ಯಾಲಯದ ಜಾಗದಲ್ಲಿ ಸ್ಥಳ ನಿಗದಿ ಮಾಡಲಾಗಿತ್ತು. ನಂತರದ ಬೆಳವಣಿಯಲ್ಲಿ ವಿಶ್ವವಿದ್ಯಾಲಯದ ಅಂಗಳದಲ್ಲಿ ಎರಡೂ ಕಾಲೇಜುಗಳಿಗೆ ತಲಾ ಎಕರೆ ನೀಡಲಾಯಿತು’ ಎಂದರು.

‘ಕೋವಿಡ್‌ ಸಮಯದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಎಂಜಿನಿಯರಿಂಗ್‌ ಕಾಲೇಜು ಆರಂಭಕ್ಕೆ ಅನುಮತಿ ನೀಡಲಿಲ್ಲ. ಸತತ ಪ್ರಯತ್ನದ ಫಲವಾಗಿ 2021ರಲ್ಲಿ ದೇಶದ 60 ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ, ಮೈಸೂರು ವಿಶ್ವವಿದ್ಯಾಲಯದ ಅರ್ಜಿಯನ್ನು ಪುರಸ್ಕರಿಸಲಾಯಿತು. ವಿವಿಧ ಕೋರ್ಸ್‌ಗಳಿಗೂ ಅನುಮೋದನೆ ಸಿಕ್ಕಿದ್ದು, ಹೆಮ್ಮೆಯ ವಿಚಾರ’ ಎಂದರು.

‘ಇದೀಗ ಹೋರಾಟದ ಫಲವಾಗಿ ಫಾರ್ಮಸಿ ಕಾಲೇಜು ಆರಂಭಕ್ಕಿದ್ದ ತೊಡಕನ್ನು ಮೇ 31ರಂದು ಸುಪ್ರೀಂ ಕೋರ್ಟ್‌ ನಿವಾರಿಸಿದೆ’ ಎಂದರು.

‘ಎಂಜಿನಿಯರಿಂಗ್‌ ಕಾಲೇಜಿನಲ್ಲಿ 180 ವಿದ್ಯಾರ್ಥಿಗಳಿದ್ದು, 17 ಬೋಧಕ ಸಿಬ್ಬಂದಿ ನೇಮಿಸಲಾಗಿದೆ. ಅವರಲ್ಲಿ 10 ಮಂದಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡಲು ವಿಶ್ವವಿದ್ಯಾಲಯ ಯೋಜಿತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೆಚ್ಚು ಸಿಬ್ಬಂದಿ ಇದ್ದಷ್ಟೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆಯು (ನ್ಯಾಕ್‌) ಉತ್ತಮ ಶ್ರೇಯಾಂಕವನ್ನು ನೀಡುತ್ತದೆ’ ಎಂದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ತಾಂತ್ರಿಕ ಶಿಕ್ಷಣವೂ ಮಾತೃಭಾಷೆಯಲ್ಲಿಯೂ ಸಿಗಬೇಕೆಂದು ಹೇಳುತ್ತದೆ. ಹೀಗಾಗಿ ಕಾರ್ಯಾಗಾರದಲ್ಲಿ ಭಾಷೆ, ಶಿಕ್ಷಣ, ಅಪರಾಧ ಜಾಗೃತಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಪರಿಸರ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ನಾಲ್ಕು ವರ್ಷದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪದವೀಧರರಾಗಲಿದ್ದು, ವಿಶ್ವವಿದ್ಯಾಲಯದ ರಾಯಭಾರಿಗಳಾಗಲಿದ್ದಾರೆ’ ಎಂದು ತಿಳಿಸಿದರು.

‘ಭಾಷೆ ಮತ್ತು ಸಂಸ್ಕೃತಿ’ ಕುರಿತು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ ಉಪನ್ಯಾಸ ನೀಡಿದರು.

‌ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕುಲಸಚಿವ ಪ್ರೊ.ಆರ್‌.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್‌, ವಿಶೇಷ ಅಧಿಕಾರಿ ಎಚ್‌.ಕೆ.ಚೇತನ್‌, ತಾಂತ್ರಿಕ ಶಾಲೆಯ ನಿರ್ದೇಶಕ ಡಾ.ಟಿ.ಅನಂತಪದ್ಮನಾಭ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT