ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತು

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಅರುಣ ಶಹಾಪುರ ಹೇಳಿಕೆ
Last Updated 27 ಸೆಪ್ಟೆಂಬರ್ 2020, 3:18 IST
ಅಕ್ಷರ ಗಾತ್ರ

ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಘದ ವತಿಯಿಂದ ಶನಿವಾರ ಇಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)– 2020 ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮಗುವಿಗೆ ಮೂರನೇ ವಯಸ್ಸಿನಿಂದಲೇ (ಪೂರ್ವ ಪ್ರಾಥಮಿಕ) ಶಿಕ್ಷಣ ಕೊಡುವ ಉದ್ದೇಶವನ್ನು ಶಿಕ್ಷಣ ನೀತಿ ಹೊಂದಿದೆ. ಈ ಹಿಂದೆ ಪೂರ್ವ ಪ‍್ರಾಥಮಿಕ ಶಿಕ್ಷಣವು ಸರ್ಕಾರಿ ವ್ಯವಸ್ಥೆಯೊಳಗೆ ಇರಲಿಲ್ಲ. ಅಂಗನವಾಡಿ ನಿಯಂತ್ರಣಕ್ಕೆ ಒಳಪಟ್ಟಿತ್ತು. ಅಲ್ಲಿ ಶಿಕ್ಷಣೇತರ ಚಟುವಟಿಕೆಗೆ ಒತ್ತು ನೀಡಲಾಗುತ್ತಿತ್ತು. ಶಾಲೆಗೆ ತೆರಳುವಂತೆ ಮಾಡಲು ಇನ್ನುಮುಂದೆ ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ಮಾನಸಿಕವಾಗಿ ಸಿದ್ಧಪಡಿಸಲಾಗುತ್ತದೆ. ಶಾಲೆಯಿಂದ ಹೊರಗುಳಿಯುವಿಕೆ, ಹಾಜರಾತಿ ಕಡಿಮೆಯಂತಹ ಸಮಸ್ಯೆಗಳು ನೀಗಲಿವೆ ಎಂದರು.

ಹಾಗೆಯೇ, 9ನೇ ತರಗತಿ ಯಿಂದಲೇ ಉನ್ನತ ಶಿಕ್ಷಣಕ್ಕೆ ಸಿದ್ಧತೆ ಆರಂಭಿಸುವಂತಹ ಶಿಕ್ಷಣ ಕೊಡಲಾಗುವುದು. ಪದವಿ ಶಿಕ್ಷಣದಲ್ಲಿ ಹಲವಾರು ಬದಲಾವಣೆ ಆಗಲಿವೆ. ಪದವಿಯಲ್ಲಿ ಒಂದು ವರ್ಷ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ, 2 ವರ್ಷ ಮುಗಿಸಿದವರಿಗೆ ಡಿಪ್ಲೊಮಾ, 3 ವರ್ಷ ಮುಗಿಸಿದವರಿಗೆ ಪದವಿ, ನಾಲ್ಕು ವರ್ಷ ಮುಗಿಸಿದವರಿಗೆ ಆನರ್ಸ್‌ ಪದವಿ ಸಿಗಲಿದೆ. ಒಂದು ವರ್ಷ ಪೂರೈಸಿ ವಿವಿಧ ಕಾರಣಗಳಿಂದ ಹೊರಗುಳಿದು ಮತ್ತೆ ಶಿಕ್ಷಣ ಮುಂದುವರಿಸಲು ಅವಕಾಶವಿದೆ’ ಎಂದರು.

ನೀತಿಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಆದರೆ, ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿ ದ್ದಾರೆ ಎಂದು ಚಾಟಿ ಬೀಸಿದರು.

ವಿ.ವಿ.ಯೊಂದಿಗಿನ ಸಂಯೋಜನೆ ಕೈಬಿಟ್ಟು, ಶಿಕ್ಷಣ ಸಂಸ್ಥೆಗಳಿಗೆ ಹಂತಹಂತವಾಗಿ ಶೈಕ್ಷಣಿಕ ಸ್ವಾಯತ್ತೆ ನೀಡಲು ಆದ್ಯತೆ ನೀಡಲಾಗಿದೆ. ಸ್ವಾಯತ್ತೆ ನೀಡುವ ಉದ್ದೇಶ ಶಿಕ್ಷಕರಿಗೆ ಶೈಕ್ಷಣಿಕೆ ವಿಚಾರದಲ್ಲಿ ಸ್ವಾತಂತ್ರ್ಯ ಕೊಡುವುದು. ಮೈಸೂರು ವಿ.ವಿ ಈ ವಿಚಾರವಾಗಿ ಪ್ರಾಯೋಗಿಕವಾಗಿ ಯೋಜನೆ ರೂಪಿಸ ಬೇಕು ಎಂದು ಸಲಹೆ ನೀಡಿದರು.

ಸದ್ಯ ಶಿಕ್ಷಕರ ಶಿಕ್ಷಣ ಅಧೋಗತಿ ಯಲ್ಲಿದೆ. ಹೀಗಾಗಿ, ನೀತಿಯಲ್ಲಿ ಶಿಕ್ಷಕರ ಶಿಕ್ಷಣಕ್ಕೂ ಮಹತ್ವ ಕೊಡಲಾಗಿದೆ. ಶಿಕ್ಷಕರು ಮನಸ್ಸು ಮಾಡದಿದ್ದರೆ ಶಿಕ್ಷಣ ದಲ್ಲಿ ಬದಲಾವಣೆ ಅಸಾಧ್ಯ ಎಂದರು.

ರಾಷ್ಟ್ರೀಯ ಶೈಕ್ಷಣಿಕ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ, ‘ದೇಶದ ವಿವಿಧೆಡೆಯಿಂದ 2.5 ಲಕ್ಷ ಪ್ರತಿಕ್ರಿಯೆ ಗಳು ಬಂದಿದ್ದವು. ಅವುಗಳನ್ನು ಕ್ರೋಡೀಕರಿಸಿ ಈ ನೀತಿ ರೂಪಿಸಲಾಗಿದೆ’ ಎಂದರು.

ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ ಮಾತನಾಡಿ, ‘ಶಿಕ್ಷಣ ನೀತಿಯ ಪ್ರತಿಫಲವು ಐದು ವರ್ಷಗಳ ಬಳಿಕ ಗೊತ್ತಾಗಲಿದೆ. ಈ ನೀತಿಯನ್ನು ಹಂತಹಂತವಾಗಿ ಜಾರಿ ಮಾಡುವ ಅಗತ್ಯವಿದೆ. ನಮ್ಮ ವಿದ್ಯಾರ್ಥಿಗಳು ವಿದೇಶಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗಿಳಿಯಬೇಕು’ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಆರ್‌.ಶಿವಪ್ಪ, ಕಾನೂನು ವಿಭಾಗ, ಕಾನೂನು ಶಾಲೆ ನಿರ್ದೇಶಕ ಪ್ರೊ.ಸಿ.ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT