ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮುಷ್ಕರ; 300ಕ್ಕೂ ಅಧಿಕ ಬಸ್ ಸಂಚಾರ

ಮೂವರು ಸಿಬ್ಬಂದಿ ಸೇವೆಯಿಂದ ವಜಾ, ಇನ್ನಷ್ಟು ಕನಿಷ್ಠ ಕ್ರಮದ ಎಚ್ಚರಿಕೆ
Last Updated 10 ಏಪ್ರಿಲ್ 2021, 4:16 IST
ಅಕ್ಷರ ಗಾತ್ರ

ಮೈಸೂರು: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮುಂದುವರೆದಿದ್ದು, ಶುಕ್ರವಾರ 340 ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಿವೆ. ಇದರ ಬೆನ್ನಲ್ಲೇ ಮೂವರು ಟ್ರೈನಿ ಸಿಬ್ಬಂದಿಯನ್ನು ವಜಾಗೊಳಿಸುವ ಮೂಲಕ ಕಠಿಣ ಕ್ರಮದ ಮುನ್ಸೂಚನೆಯನ್ನೂ ಅಧಿಕಾರಿಗಳು ನೀಡಿದ್ದಾರೆ.

ಒಟ್ಟು 80ಕ್ಕೂ ಅಧಿಕ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಗ್ರಾಮಾಂತರ ಘಟಕದಿಂದ ಕೆಎಸ್‌ಆರ್‌ಟಿಸಿ 30 ಬಸ್‌ಗಳು ಹಾಗೂ ನಗರ ಘಟಕದಿಂದ 13 ಬಸ್‌ಗಳು ಸಂಚಾರ ಆರಂಭಿಸಿವೆ. ಇನ್ನುಳಿದಂತೆ, ಖಾಸಗಿ ವಾಹನಗಳು ನಿಲ್ದಾಣದಿಂದಲೇ ಸೇವೆ ಮುಂದುವರಿಸಿವೆ.

ಹೊರರಾಜ್ಯದಿಂದ ಹೆಚ್ಚುವರಿ ಬಸ್‌ ಹಾಗೂ ಸಿಬ್ಬಂದಿಯನ್ನು ಕರೆಸಿ ಬಸ್‌ಗಳನ್ನು ಸಂಚಾರಕ್ಕೆ ಇಳಿಸುವ ಪ್ರಯತ್ನವನ್ನು ಖಾಸಗಿ ಬಸ್‌ ಮಾಲೀಕರು ತೀವ್ರವಾಗಿ ವಿರೋಧಿಸಿದ್ದಾರೆ. ಹೀಗಾಗಿ, ತಮಿಳುನಾಡಿನಿಂದ ಕೇವಲ 5 ಹೆಚ್ಚುವರಿ ಬಸ್‌ಗಳಷ್ಟೇ ಸಂಚಾರ ನಡೆಸಿವೆ.

ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಹೆಚ್ಚಾಗಿದ್ದರೂ ಜನರು ಸಂಚಾರಕ್ಕೆ ಮುಂದಾಗಲಿಲ್ಲ. ಹೆಚ್ಚುತ್ತಿರುವ ಕೋವಿಡ್‌, ಅನಿಶ್ಚಿತ ಪರಿಸ್ಥಿತಿ, ರಾತ್ರಿ ಕರ್ಫ್ಯೂ ಘೋಷಣೆ, ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮುಷ್ಕರವು ಪ್ರಯಾಣಿಕರು ಬಸ್‌ ಏರಲು ಹಿಂದೇಟು ಹಾಕುವಂತೆ ಮಾಡಿವೆ.

ಈ ವೇಳೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದ ತಕ್ಷಣ ಅವರಿಗೆ ಕೆಎಸ್‌ಆರ್‌ಟಿಸಿ ಬಸ್‌ ನೀಡಿ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು, ಖಾಸಗಿ ಬಸ್‌ ಮಾಲೀಕರ ಕಣ್ಣನ್ನು ಕೆಂಪಗಾಗಿಸಿತು. ‘ಮೊದಲು ನಾವು ಬಂದು ಇಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದೇವೆ. ಈಗಷ್ಟೇ ಬಂದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಸಂಚಾರಕ್ಕೆ ಬಿಡುವುದು ಯಾವ ನ್ಯಾಯ’ ಎಂದು ಏರುಧ್ವನಿಯಲ್ಲಿ ಕೆಲವು ಮಾಲೀಕರು ಪ್ರಶ್ನಿಸಿದರು.‌

ಕೆಲವೊಮ್ಮೆ ಧಿಕ್ಕಾರದ ಘೋಷಣೆಗಳನ್ನೂ ಮೊಳಗಿಸಿದರು. ಸಾಲದು ಎಂಬಂತೆ ‘ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೂ ಸೇವೆಗೆ ನಿಯೋಜಿಸಿ’ ಎಂಬ ಸವಾಲನ್ನೂ ಹಾಕಿದರು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಅಧಿಕಾರಿಗಳು ಸ್ಥಳಕ್ಕೆ ಬಂದು ಖಾಸಗಿ ಬಸ್ ಮಾಲೀಕರ ಜತೆ ಮಾತುಕತೆ ನಡೆಸಿದರು. ‘ಮೊದಲು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಆದ್ಯತೆ. ಸಿಬ್ಬಂದಿ ಕರ್ತವ್ಯಕ್ಕೆ ಬಂದಿಲ್ಲ ಎಂಬ ಒಂದೇ ಕಾರಣಕ್ಕೆ ನಿಮಗೆ ಅವಕಾಶ ನೀಡಲಾಗಿದೆ. ಹಾಗಾಗಿ, ಸಹಕರಿಸಬೇಕು’ ಎಂದು ಮನವಿ ಮಾಡಿದರು.‌ ನಂತರ ಪರಿಸ್ಥಿತಿ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT