ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರದಿಂದ ಒಕ್ಕೂಟ ವ್ಯವಸ್ಥೆ ದುರ್ಬಲ’

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಿಂದ ವಾಗ್ದಾಳಿ
Last Updated 9 ಸೆಪ್ಟೆಂಬರ್ 2020, 9:13 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರದ ಇತ್ತೀಚಿನ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಉಗ್ರನರಸಿಂಹೇಗೌಡ ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಪಾಲಿನ ಜಿಎಸ್‌ಟಿ ಪರಿಹಾರ ಮೊತ್ತ ₹ 14 ಸಾವಿರ ಕೊಡದೇ ಸಾಲ ಮಾಡಲು ಕೇಂದ್ರ ಸರ್ಕಾರ ಸೂಚಿಸಿರುವುದು ರಾಜ್ಯದ ಆರ್ಥಿಕ ಸ್ಥಿತಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರಾಜ್ಯದ ಬಿಜೆಪಿ ಸಂಸದರು ಈ ಕುರಿತು ದನಿ ಎತ್ತುತ್ತಿಲ್ಲ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ನಿಜಕ್ಕೂ ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಹ ನಡವಳಿಕೆಯಾಗಿದೆ. ಜನತಂತ್ರ ವ್ಯವಸ್ಥೆಯಲ್ಲಿ ಇದು ಅಪಾಯಕಾರಿ ಬೆಳವಣಿಗೆ ಎಂದು ಅವರು ವಿಶ್ಲೇಷಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತುಮಕೂರಿನಲ್ಲಿ ಬಹಿರಂಗವಾಗಿ ಪ್ರಧಾನಿಯವರ ಮುಂದೆಯೇ ₹ 35 ಸಾವಿರ ಕೋಟಿ ಪರಿಹಾರ ಕೊಡಿ ಎಂದು ಕೇಳಿದ್ದಕ್ಕೆ ಕೊಟ್ಟಿದ್ದು ಬರೇ ₹ 4 ಸಾವಿರ ಕೋಟಿ. ಸತತವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯವನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಹರಿಹಾಯ್ದರು.

ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪುನೀತ್ ಮಾತನಾಡಿ, ‘ರಾಜ್ಯದ 25 ಸಂಸದರು ತಮ್ಮ ಕಿವಿಯನ್ನು ಕಿವುಡಾಗಿ, ಬಾಯಿಯನ್ನು ಮೂಕವನ್ನಾಗಿಸಿಕೊಂಡಿದ್ದಾರೆ. ರಾಜ್ಯಕ್ಕೆ ಬರಬೇಕಾದ ಪಾಲು ಕೊಡಿ ಎಂದು ಅವರು ಕೇಳುತ್ತಿಲ್ಲ’ ಎಂದು ಕಿಡಿಕಾರಿದರು.

ದೇಶದಲ್ಲಿ ಶರವೇಗದಲ್ಲಿ ಉದ್ಯೋಗ ನಾಶವಾಗುತ್ತಿದೆ. ಕೆಲಸ ಕಳೆದುಕೊಂಡ ಯುವಜನರು ಕಂಗಾಲಾಗಿದ್ದಾರೆ. ಇದು ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗುತ್ತಿದೆ. ಈಗ ಇದನ್ನು ಕೊರೊನಾ ವೈರಸ್‌ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕರುಣಾಕರನ್ ಮಾತನಾಡಿ, ‘ಕಾಂಗ್ರೆಸ್ ಈಗ ವಿರೋಧ ಪಕ್ಷವಾಗಿ ಹೀನಾಯ ಸ್ಥಿತಿಗೆ ಬಂದಿದೆ. ನಾಯಕತ್ವ ಬದಲಾವಣೆಗೆ ಹೆದರಿದ ಬಿ.ಎಸ್.ಯಡಿಯೂರಪ್ಪ ಅವರೂ ಗಟ್ಟಿ ದನಿಯಲ್ಲಿ ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ಎಲ್ಲ ಚುನಾಯಿತ ಪ್ರತಿನಿಧಿಗಳೂ ಸುಮ್ಮನಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಭಿರುಚಿ ಗಣೇಶ್ ಮಾತನಾಡಿ, ‘ಹಿಂದಿನ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಿಸಲು ಯುವಜನರು ಈ ಸರ್ಕಾರ ತಂದರು. ಆದರೆ, ಈ ಸರ್ಕಾರವೂ ಜಡ್ಡುಗಟ್ಟಿದೆ. ಪರ್ಯಾಯ ವ್ಯವಸ್ಥೆ ಬೇಕಿದೆ’ ಎಂದು ಅಭಿಪ್ರಾಯಪ‍ಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT