ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ; ಅಮೃತವಿದ್ದಂತೆ’

ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ
Last Updated 14 ಆಗಸ್ಟ್ 2019, 10:47 IST
ಅಕ್ಷರ ಗಾತ್ರ

ಮೈಸೂರು: ‘ಜ್ಞಾನಕ್ಕಿಂತ ಮಿಗಿಲಾದುದು ಬೇರೊಂದಿಲ್ಲ. ಜ್ಞಾನ ಅಮೃತವಿದ್ದಂತೆ. ಸುಲಭಕ್ಕೆ ದಕ್ಕದು. ಕಷ್ಟಪಟ್ಟು ಸಂಪಾದಿಸಿದರೆ ಮಾತ್ರ ಒಲಿಯಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರತ್ನಾ ಹೇಳಿದರು.

ನಗರದ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ‘ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ‘ನೀವು ಗಳಿಸುವ ವಿದ್ಯೆ, ನಿಮ್ಮೊಳಗಿನ ಅಹಂಕಾರ ತೊಡೆದು ಹಾಕಬೇಕು’ ಎಂದು ನೆರೆದಿದ್ದ ವಿದ್ಯಾರ್ಥಿನಿಯರಿಗೆ ಕಿವಿಮಾತು ತಿಳಿಸಿದರು.

‘ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಕನಸು ಹೊಂದಬೇಕು. ಉನ್ನತ ಗುರಿ ನಿಗದಿಪಡಿಸಿಕೊಂಡು ಸಾಕಾರಕ್ಕಾಗಿ ಶ್ರಮಿಸಬೇಕು. ಗುರುವಿನ ಮಾರ್ಗದರ್ಶನದಲ್ಲಿ ಸ್ವಂತ ಸಾಮರ್ಥ್ಯ, ಬುದ್ದಿ ಗಳಿಸಿಕೊಂಡು, ಆತ್ಮವಿಶ್ವಾಸದಿಂದ ನಡೆದುಕೊಳ್ಳಬೇಕು. ಆದರ್ಶಗಳನ್ನು ತಮ್ಮ ಬದುಕಿಗೆ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

‘ಬಾಲ್ಯದಿಂದಲೇ ಕನಸು ಕಾಣುವುದನ್ನು ರೂಢಿಸಿಕೊಳ್ಳಿ. ಕುತೂಹಲದ ಗಣಿಗಳಾಗಿ. ಆಲೋಚನೆ ನಡೆಸಿ. ಕಷ್ಟಪಟ್ಟು ಕೆಲಸ ಮಾಡಿದಾಗ ಯಶಸ್ಸು ನಿಮ್ಮದಾಗಲಿದೆ’ ಎಂದು ರತ್ನಾ ತಿಳಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಮಾತನಾಡಿ ‘ಶಿಕ್ಷಣ ಅಂಕ ಗಳಿಕೆಗೆ ಸೀಮಿತವಾದುದಲ್ಲ. ಬೌದ್ಧಿಕ ಬೆಳವಣಿಗೆಗೆ ಅತ್ಯಗತ್ಯವಾದುದು. ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿಯೂ ಮಹತ್ತರ ಪಾತ್ರ ನಿಭಾಯಿಸಲಿದೆ. ಇದರ ಜತೆಗೆ ಪಠ್ಯೇತರ ಚಟುವಟಿಕೆಗಳು ಬೇಕಿವೆ’ ಎಂದು ಹೇಳಿದರು.

‘ಎಲ್ಲೆಡೆ ಹೆಣ್ಣು ಮಕ್ಕಳನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣಲಾಗುತ್ತಿದೆ. ಈ ಕೀಳರಿಮೆ ಪ್ರವೃತ್ತಿಯನ್ನು ನಿರ್ಮೂಲನೆಗೊಳಿಸಲು ಕಾಲೇಜು ಯುವತಿಯರು ಮುಂದಾಗಬೇಕಿದೆ. ಪಠ್ಯೇತರ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ, ದೈಹಿಕ ಸಾಮರ್ಥ್ಯ ಹೊಂದಿ ಸದೃಢರಾಗಬೇಕು. ಆಗ ಪುರುಷರಿಗೆ ಸರಿ ಸಮಾನವಾಗಿ ನಾವು ನಿಲ್ಲುತ್ತೇವೆ. ಇದರ ಜತೆಗೆ ನಮ್ಮ ಆರೋಗ್ಯವೂ ಉತ್ತಮವಾಗಿರಲಿದೆ. ನಮ್ಮೊಳಗಿನ ನೈತಿಕ ಬಲವೂ ಹೆಚ್ಚಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT