ಶುಕ್ರವಾರ, ಜುಲೈ 30, 2021
21 °C
ಕಸದ ಸಮಸ್ಯೆಗೆ ಸದ್ಯದಲ್ಲೇ ಮುಕ್ತಿ, 350 ಟನ್‌ ತ್ಯಾಜ್ಯ ವಿಲೇವಾರಿ ಘಟಕ

ಕೆಸರೆ, ರಾಯನಕೆರೆ ಘಟಕಕ್ಕೆ ಟೆಂಡರ್‌

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೆಸರೆ ಬಳಿ 200 ಟನ್‌, ರಾಯನಕೆರೆ ಬಳಿ 150 ಟನ್ ತ್ಯಾಜ್ಯ ವಿಲೇವಾರಿಯ ಕಾಂಪೋಸ್ಟ್‌ ಘಟಕ ನಿರ್ಮಾಣಕ್ಕೆ ಮೈಸೂರು ಮಹಾನಗರ ಪಾಲಿಕೆಯು ಟೆಂಡರ್‌ ಆಹ್ವಾನಿಸಿದ್ದು, ನಗರದ ಕಸದ ಸಮಸ್ಯೆಗೆ ಸದ್ಯದಲ್ಲೇ ಮುಕ್ತಿ ಸಿಗಲಿದೆ.

ಹಲವಾರು ವರ್ಷಗಳ ಯೋಜನೆ ಇದೀಗ ಟಿಸಿಲೊಡೆದಿದ್ದು, ಕಾರ್ಯರೂಪಕ್ಕೆ ಬಂದರೆ ವಿದ್ಯಾರಣ್ಯಪುರಂನ ಸೀವೇಜ್‌ ಫಾರಂ ತ್ಯಾಜ್ಯ ಘಟಕದ ಮೇಲಿನ ಒತ್ತಡ ತಗ್ಗಲಿದೆ. ಬೇರೆ ಕಡೆಯಿಂದ ಕಸವನ್ನು ನಮ್ಮಲ್ಲಿಗೆ ಏಕೆ ತರುತ್ತೀರಿ ಎಂದು ಸ್ಥಳೀಯ ಜನಪ್ರತಿನಿಧಿಗಳು ಪರಸ್ಪರ ಕಿತ್ತಾಡುವುದೂ ತಪ್ಪಲಿದೆ.

ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿಚಾರ ಜನಪ್ರತಿನಿಧಿಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ವಿವಾದದ ಸ್ವರೂಪ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

‘ಎರಡೂ ಘಟಕಗಳು ಕಾರ್ಯರೂಪಕ್ಕೆ ಬಂದರೆ 350 ಟನ್‌ ಕಸ ವಿಲೇವಾರಿ ಸಾಧ್ಯವಾಗಲಿದೆ. ಈಗಾಗಲೇ ಸೀವೇಜ್ ಫಾರಂನಲ್ಲಿ ನಿತ್ಯ 200 ಟನ್‌ ವಿಲೇವಾರಿ ಮಾಡಲಾಗುತ್ತಿದೆ. ಇದಲ್ಲದೇ, ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ನಿರ್ಧರಿಸಲಾಗಿದೆ. ಇಲ್ಲಿ 80 ಟನ್‌ ಕಸ ವಿಲೇವಾರಿ ಮಾಡಲು ಸಾಧ್ಯವಾಗಲಿದೆ’ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಕಸ ಸಾಗಣೆ ಸಮಸ್ಯೆ ಇದೆ. ಅಗತ್ಯ ಸಂಖ್ಯೆಯಷ್ಟು ವಾಹನಗಳು ಇಲ್ಲ. ಹೀಗಾಗಿ, ಕೆಲವೆಡೆ 2–3 ದಿನ ಕಸ ಎತ್ತಲೂ ಸಾಧ್ಯವಾಗುತ್ತಿಲ್ಲ. ಇನ್ನೂ 50 ಟನ್‌ ಕಸ ಸಾಗಿಸುವಷ್ಟು ವಾಹನಗಳ ಅಗತ್ಯವಿದೆ. ಈ ವಿಚಾರವನ್ನು ಸಭೆಗಳಲ್ಲಿ ಸಚಿವರ ಗಮನಕ್ಕೆ ತಂದಿದ್ದೇನೆ’ ಎಂದರು.

ಘಟಕಗಳ ನಿರ್ಮಾಣಕ್ಕೆ ಕೆಸರೆಯಲ್ಲಿ ₹11.32 ಕೋಟಿ ಹಾಗೂ ರಾಯನಕೆರೆಯಲ್ಲಿ ₹9.7 ಕೋಟಿ ಮೊತ್ತದ ಟೆಂಡರ್‌ ನೀಡಲಾಗುತ್ತಿದೆ. ಟೆಂಡರ್‌ ಕರೆದಿದ್ದು, ಇದೇ ತಿಂಗಳ 6ರಂದು ಬಿಡ್‌ ಪೂರ್ವಭಾವಿ ಸಭೆ ನಡೆಯಲಿದೆ. ಬಹಳ ವರ್ಷಗಳ ಕನಸು ನನಸಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ನಾಗರಾಜು ಹೇಳಿದರು.

ಸದ್ಯ ಮೈಸೂರು ನಗರದಲ್ಲಿ 400ಕ್ಕೂ ಅಧಿಕ ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 250 ಟನ್‌ ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.