ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠೇಶ್ವರ ದರ್ಶನಕ್ಕೆ ಬಂದ ಭಕ್ತಸಾಗರ

ವ್ಯಾಸ ಪೂರ್ಣಿಮೆ ಪ್ರಯುಕ್ತ ಕಪಿಲಾ ನದಿಯಲ್ಲಿ ಭಕ್ತರಿಂದ ಪುಣ್ಯಸ್ನಾನ
Last Updated 28 ಫೆಬ್ರುವರಿ 2021, 5:10 IST
ಅಕ್ಷರ ಗಾತ್ರ

ನಂಜನಗೂಡು: ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ವ್ಯಾಸ ಪೂರ್ಣಿಮೆ ಪ್ರಯುಕ್ತ ಶನಿವಾರ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ, ವಿವಿಧ ಹರಕೆಗಳನ್ನು ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು.

ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಸಂಜೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಬಂದ ಭಕ್ತರು, ದೇವಾಲಯದ ಕೈಸಾಲೆಗಳಲ್ಲಿ ರಾತ್ರಿ ತಂದಿದ್ದರು. ಶನಿವಾರ ಮುಂಜಾನೆ 4 ಗಂಟೆಗೆ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ನಂತರ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಭಕ್ತರು ತುಲಾಭಾರ, ಉರುಳುಸೇವೆ, ಈಡುಗಾಯಿ, ಹರಕೆ ಮುಡಿಸೇವೆ, ಧೂಪ, ದೀಪದ ಸೇವೆಗಳಲ್ಲಿ ಶ್ರದ್ಧೆ- ಭಕ್ತಿಗಳಿಂದ ತೊಡಗಿದ್ದರು.

ದೇವಾಲಯ ಆಗಮಿಕ ನಾಗಚಂದ್ರ ದೀಕ್ಷಿತ್ ಆಚಾರ್ಯತ್ವದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ಚಿನ್ನದ ಕೊಳಗ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆ ಶ್ರೀಕಂಠೇಶ್ವರನಿಗೆ ಪಂಚತೀರ್ಥಗಳ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಶಾಲಾನ್ಯ ಅರ್ಪಣೆ, ಕಲ್ಲು- ಸಕ್ಕರೆ, ಪೂಜೆಗಳನ್ನು ನೆರವೇರಿಸಿದ ನಂತರ ಮಹಾಮಂಗಳಾರತಿ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

‘ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸ್ಥಗಿತಗೊಳಿಸಲಾಗಿದ್ದ ಅನ್ನದಾಸೋಹ ಕೂಡಾ ಆರಂಭ ಆಗಿರುವುದರಿಂದ ದೇವಾಲಯಕ್ಕೆ ಬಂದಿದ್ದ ಭಕ್ತರಲ್ಲಿ ಸಂತೋಷ ಇಮ್ಮಡಿಗೊಂಡಿದೆ. ದಾಸೋಹ ಭವನದಲ್ಲಿ ಅನ್ನ, ಸಾಂಬಾರ್, ಪಾಯಸ, ಪಲ್ಯದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹುಣ್ಣಿಮೆ ಸೇವೆಗಳಿಂದಾಗಿ ದೇವಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆದಾಯ ಬಂದಿದೆ’ ಎಂದು ದೇವಾಲಯದ ಇಒ ರವೀಂದ್ರ ನಾಯಕ್ ತಿಳಿಸಿದರು.

ದೇವಾಲಯದಲ್ಲಿ ಪ್ರವೇಶ ಮಾಡುವಾಗ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ನಿಯಮಗಳನ್ನು ಪಾಲಿಸುವಂತೆ ಧ್ವನಿವರ್ಧಕದ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT