ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಬಗೆಗಿನ ಇತಿಹಾಸ ಮರು ರಚನೆಯಾಗಲಿ

ಕ್ಯಾಲಿಕ್ಯಾಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಕೆ.ಎನ್.ಕುರುಪ್ ಅಭಿಮತ
Last Updated 18 ಜನವರಿ 2019, 11:28 IST
ಅಕ್ಷರ ಗಾತ್ರ

ಮೈಸೂರು: ರೈತಾನುರಾಗಿದ್ದ ಟಿಪ್ಪು ಸುಲ್ತಾನ್‌ನ ಜನಪ್ರಿಯತೆ ಸಹಿಸಲಾಗದ ಬ್ರಿಟಿಷರು ಆತನನ್ನು ಮತಾಂಧ ಎಂದು ಕರೆದು ಅಪಪ್ರಚಾರ ನಡೆಸಿದರು ಎಂದು ಕ್ಯಾಲಿಕ್ಯಾಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಕೆ.ಎನ್.ಕುರುಪ್ ವಿಶ್ಲೇಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಟಿಪ್ಪು ಅಧ್ಯಯನ ಪೀಠದಿಂದ ‘ರೈತ ಮತ್ತು ಟಿಪ್ಪು ಆಡಳಿತದಲ್ಲಿ ಗ್ರಾಮೀಣ ಆರ್ಥಿಕ ಅಭಿವೃದ್ಧಿ’ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ವಿಚಾರಗೋಷ್ಠಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪು ಉತ್ತಮ ಆಡಳಿತಗಾರ ಎಂದು ಜನಮನ್ನಣೆ ಗಳಿಸಿದ್ದನು. ಇದರಿಂದ ಈ ಭಾಗದಲ್ಲಿ ಪ್ರಸಿದ್ಧನಾಗಿ ಮೇಲುಗೈ ಸಾಧಿಸಿದ್ದನು. ಯುದ್ಧದಿಂದ ಟಿಪ್ಪುವನ್ನು ಸೋಲಿಸಲಾಗದ ಬ್ರಿಟಿಷರು ಧಾರ್ಮಿಕ ಭಾವನೆಯನ್ನು ದುರ್ಬಳಕೆ ಮಾಡಿಕೊಂಡರು. ಈಸ್ಟ್‌ ಇಂಡಿಯಾ ಕಂಪೆನಿಯು ಪಿತೂರಿ ನಡೆಸಿ ಆತ ಮತಾಂಧ, ಹಿಂದೂ ದ್ವೇಷಿಯೆಂದು ಹೇಳಿ ‍ಪಿತೂರಿ ನಡೆಸಿತು. ಇದೇ ಪಿತೂರಿಯು ಇಂದಿಗೂ ಮುಂದುವರೆದಿದ್ದು, ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರು ಹಾಗೂ ಮಲಬಾರ್‌ ಪ್ರದೇಶಗಳ ರೈತರ ಅಭಿವೃದ್ಧಿಗೆ ಬೇಕಾದ ಎಲ್ಲ ಕ್ರಮಗಳನ್ನೂ ಟಿಪ್ಪು ಕೈಗೊಂಡಿದ್ದನು. ಕೇರಳ ಭಾಗದಲ್ಲಿದ್ದ ಸಾಮಾಜಿಕ ಅಸಮಾನತೆಯನ್ನು ಗುರುತಿಸಿ ಅದಕ್ಕೆ ಅಂತ್ಯ ಹಾಡಿದ್ದನು. ಇಲ್ಲದಿದ್ದರೆ, ಇಂದಿಗೂ ಈ ಸಾಮಾಜಿಕ ಪಿಡುಗುಗಳು ನಿರಂತರವಾಗಿ ಮುಂದುವರೆಯುತ್ತಿದ್ದವು. ಹಾಗಾಗಿ, ಟಿಪ್ಪುವಿನ ಕುರಿತು ಅಪಪ್ರಚಾರ ಕೊನೆಗೊಳ್ಳಬೇಕು. ಅವನ ಬಗೆಗಿನ ಇತಿಹಾಸವನ್ನು ಮರು ಬರೆಯಬೇಕು ಎಂದು ಅವರು ಹೇಳಿದರು.

ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್‌ ಅಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಇತಿಹಾಸ ಅಧ್ಯಯನವು ಬಲು ಶ್ರೇಷ್ಠವಾದ ಕ್ಷೇತ್ರ. ಆದರೆ, ಭಾರತದಲ್ಲಿ ಇತಿಹಾಸ ಬರೆದವರು ಟಿ‍ಪ್ಪುವನ್ನು ವಿವಾದಕ್ಕೆ ಸಿಲುಕಿಸಿದ್ದಾರೆ. ಟಿಪ್ಪುವಿನ ಆಡಳಿತ, ಸಾಮಾಜಿಕ, ಆರ್ಥಿಕ ಚಿಂತನೆಗಳು ಶ್ರೇಷ್ಠವಾದವು. ಹಾಗಾಗಿ, ಟಿಪ್ಪು ಅಧ್ಯಯನ ನನಗೆ ಅಚ್ಚುಮೆಚ್ಚು. ಟಿಪ್ಪು ಅಧ್ಯಯನ ಕೇಂದ್ರವು ಜವಾಬ್ದಾರಿಯಿಂದ ಕೆಲಸ ಮಾಡಲಿ. ಇಂತಹ ಮತ್ತಷ್ಟು ಕಮ್ಮಟಗಳು ನಡೆಯಲಿ’ ಎಂದು ಸಲಹೆ ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ವೈ.ಎಚ್.ನಾಯಕ್ವಾಡಿ ಅಧ್ಯಕ್ಷತೆವಹಿಸಿದ್ದರು. ಮೈಸೂರು ವಿ.ವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT