ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ನಿರಾಕರಣೆ; ಆಕ್ರೋಶ ಆಸ್ಫೋಟ

ನ.10ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅರ್ಜಿ ಸಲ್ಲಿಕೆ
Last Updated 7 ನವೆಂಬರ್ 2019, 10:01 IST
ಅಕ್ಷರ ಗಾತ್ರ

ಮೈಸೂರು: ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡದಿರುವುದನ್ನು ಖಂಡಿಸಿ, ಬುಧವಾರ ರಾತ್ರಿ ಶಾಸಕ ತನ್ವೀರ್‌ ಸೇಠ್ ನೇತೃತ್ವದಲ್ಲಿ ನಗರದ ಮುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಅನುಮತಿ ನಿರಾಕರಣೆ ವಿಷಯ ತಿಳಿಯುತ್ತಿದ್ದಂತೆ, ಮುಡಾ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಟಿಪ್ಪು ಭಾವಚಿತ್ರ ಹಿಡಿದು ಜೈಕಾರ ಕೂಗಿದರು. ಈ ಸಂದರ್ಭ ಟಿಪ್ಪು ಅಮರ್‌ ರಹೇ ಎಂಬ ಘೋಷಣೆಗಳು ಮೊಳಗಿದವು.

‘ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಗಳೇ ಗುಲಾಮರ ವರ್ತನೆ ಪ್ರದರ್ಶಿಸುವ ಮೂಲಕ ಒಂದು ಸಮಾಜದ ಜನರನ್ನು ಕೆರಳಿಸಿ, ಬೀದಿಗಿಳಿಯುವಂತೆ ಮಾಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಮಕ್ಷಮವೇ ಪ್ರತಿಭಟನಾಕಾರರು ಹರಿಹಾಯ್ದರು.

‘ಟಿಪ್ಪು ಯಾವುದೇ ಒಂದು ಪಕ್ಷ, ಜಾತಿಗೆ ಸೀಮಿತರಲ್ಲ. ಸ್ವಾತಂತ್ರ್ಯ ಸೇನಾನಿ. ಮೈಸೂರಿನ ಹೆಮ್ಮೆ. ನಾವೂ ಸಹ ಈ ಘನತೆ ಎತ್ತಿ ಹಿಡಿಯಲಿಕ್ಕಾಗಿಯೇ ಟಿಪ್ಪು ಜಯಂತಿ ಜತೆ, ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ಹಿಂದೆ ಹಾಗೂ ಮುಂದೆಯೂ ಸಹ ವಿವಿಧ ಕಾರ್ಯಕ್ರಮಗಳಿಗಾಗಿ ಬಾಡಿಗೆ ನೀಡಲಿಕ್ಕಾಗಿಯೇ ಇರುವ ಪಂಜಿನ ಕವಾಯತು ಮೈದಾನವನ್ನು ಯಾವ ಕಾರಣಕ್ಕಾಗಿ ಇದೀಗ ನೀಡುತ್ತಿಲ್ಲ ಎಂಬ ರಹಸ್ಯವನ್ನು ಬಹಿರಂಗಗೊಳಿಸಿ’ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಪ್ರತಿಭಟನಾಕಾರರ ಆಕ್ರೋಶ ಕೊಂಚ ತಣ್ಣಗಾದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಾಸ್ತವ ಚಿತ್ರಣ ಬಿಚ್ಚಿಟ್ಟರು. ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತಿತರರ ಜತೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಹೇಳಿದರು.

ಇದಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಈಗಲೇ ತೀರ್ಮಾನವಾಗಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಮತ್ತೊಮ್ಮೆ ಮನವಿ ಮಾಡಿಕೊಂಡಾಗ, ಅರ್ಧ ತಾಸಿನ ಸಮಯ ಕೋರಿದ ಪ್ರತಿಭಟನಾಕಾರರು ತನ್ವೀರ್‌ ಸೇಠ್‌ ನೇತೃತ್ವದಲ್ಲಿ ಚರ್ಚಿಸಿ, ಸಮಯ ನೀಡುವ ನಿರ್ಧಾರ ಪ್ರಕಟಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಕ್ಕೆ ಜಯಘೋಷ ಮೊಳಗಿಸಿದರು. ಶಾಸಕ ತನ್ವೀರ್‌ ಸೇಠ್‌, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬನ್ನಿಮಂಟಪದ ಮೈದಾನ ಟಿಪ್ಪು ಜಯಂತಿ ಆಚರಣೆಗೆ ದೊರೆಯುವ ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT