ಗುರುವಾರ , ಸೆಪ್ಟೆಂಬರ್ 23, 2021
21 °C
ವಾರಾಂತ್ಯ ಕರ್ಫ್ಯೂ; ಜನರ ಓಡಾಟಕ್ಕೆ ಬೀಳದ ಕಡಿವಾಣ

ಮೈಸೂರು: ನಗರದಲ್ಲಿ ವಾಣಿಜ್ಯ ವಹಿವಾಟು ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಗಡಿ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿರುವ ವಾರಾಂತ್ಯದ ಕರ್ಫ್ಯೂಗೆ ಶನಿವಾರ ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ವಾಣಿಜ್ಯ ವಹಿವಾಟು ಇಡೀ ದಿನ ಸಂಪೂರ್ಣ ಸ್ತಬ್ದವಾಗಿತ್ತು. ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರ ತನಕ ದಿನಸಿ, ತರಕಾರಿ, ಮೀನು, ಮಾಂಸ, ಹಾಲು, ಹಣ್ಣು ಒಳಗೊಂಡಂತೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅನುಮತಿ ನೀಡಲಾಗಿತ್ತು. ಮಧ್ಯಾಹ್ನದ ಬಳಿಕ ಎಲ್ಲ ಅಂಗಡಿಗಳೂ ಬಾಗಿಲು ಮುಚ್ಚಿದವು. ಹೋಟೆಲ್ ಮತ್ತು ಮದ್ಯದಂಗಡಿಗಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು.

ಕರ್ಫ್ಯೂ ಇದ್ದರೂ ಜನರ ಓಡಾಟ ಎಂದಿನಂತೆ ಇತ್ತು. ಪೊಲೀಸರು ಕೂಡಾ ಎಲ್ಲೂ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ತಡೆಯುವ ಗೋಜಿಗೆ ಹೋಗಲಿಲ್ಲ. ಸಂಜೆಯ ಬಳಿಕ ಎಲ್ಲ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸೋಮವಾರ ಬೆಳಿಗ್ಗೆ 5ರ ವರೆಗೂ ನಿರ್ಬಂಧ ಜಾರಿಯಲ್ಲಿರಲಿದೆ.

ನಗರ ಸಾರಿಗೆ ಮತ್ತು ಗ್ರಾಮಾಂತರ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ಇದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಇದರಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ಸುಗಳನ್ನು ಓಡಿಸಲಾಯಿತು. ಅರಮನೆ, ಮೃಗಾಲಯ ಒಳಗೊಂಡಂತೆ ಪ್ರಮುಖ ಪ್ರವಾಸಿ ತಾಣಗಳು ಜನರಿಲ್ಲದೆ ಭಣಗುಟ್ಟಿದವು.

ಗೊಂದಲ: ಸರ್ಕಾರ ಏಕಾಏಕಿ ವಾರಾಂತ್ಯ ಕರ್ಫ್ಯೂ ಘೋಷಿಸಿದ್ದರಿಂದ, ಸರಿಯಾದ ಮಾಹಿತಿಯಲ್ಲದೆ ಹಲವರು ಗೊಂದಲಕ್ಕೆ ಸಿಲುಕಿದ್ದು ಕಂಡುಬಂತು. ಜಿಲ್ಲಾಡಳಿತದ ವತಿಯಿಂದ ಸ್ಪಷ್ಟ ನಿರ್ದೇಶನ ಹೊರಡಿಸದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

‘ಈ ರೀತಿ ದಿಢೀರ್‌ ವಾರಾಂತ್ಯ ಕರ್ಫ್ಯೂ ಘೋಷಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಕನಿಷ್ಟ ಮೂರು ದಿನ ಮುಂಚಿತವಾಗಿ ಮಾಹಿತಿ ಕೊಡಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ: ‘ಕೋವಿಡ್‌ ನಿಯಂತ್ರಣಕ್ಕೆ ಸಾರ್ವಜನಿಕರ ಅನಗತ್ಯ ಓಡಾಟ ತಡೆಯುವುದು ವಾರಾಂತ್ಯ ಕರ್ಫ್ಯೂ ಉದ್ದೇಶವಾಗಿದೆ. ಯಾವುದೇ ವ್ಯಾಪಾರಕ್ಕೆ ತೊಂದರೆ ಆಗಬೇಕು ಎಂದು ನಿರ್ಬಂಧ ವಿಧಿಸಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ವಾಣಿಜ್ಯ ವಹಿವಾಟಿಗೆ ನಿರ್ಬಂಧವಿದ್ದು, ಉಳಿದ ಐದು ದಿನ ವ್ಯಾಪಾರಕ್ಕೆ ಅವಕಾಶವಿದೆ. ಯಾರೂ ನಿಯಮ ಉಲ್ಲಂಘಿಸುವುದು ಸರಿಯೆನಿಸದು’ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಹೇಳಿದ್ದಾರೆ.

ನಿರ್ಧಾರ ಬದಲಿಸಿದ ವರ್ತಕರ ಒಕ್ಕೂಟ: ವಾರಾಂತ್ಯ ಕರ್ಫ್ಯೂ ನಿರ್ಧಾರವನ್ನು ಧಿಕ್ಕರಿಸಿ ಭಾನುವಾರ ವಾಣಿಜ್ಯ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದ್ದ ವರ್ತಕರ ಒಕ್ಕೂಟವು, ಕೊನೆಯ ಕ್ಷಣದಲ್ಲಿ ತನ್ನ ನಿಲುವನ್ನು ಬದಲಿಸಿತು.

‘ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ನಗರ ಪೊಲೀಸ್ ಆಯುಕ್ತರು ಕರೆ ಮಾಡಿ ಆ.8ರ ಮಟ್ಟಿಗೆ ನಮ್ಮ ನಿರ್ಧಾರವನ್ನು ಹಿಂಪಡೆಯಲು ಕೋರಿರುತ್ತಾರೆ. ವಾರಾಂತ್ಯ ಲಾಕ್‌ಡೌನ್‌ನಿಂದ ಮೈಸೂರಿಗೆ ವಿನಾಯಿತಿ ನೀಡಬೇಕು ಎಂದು ಸಚಿವರು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಆದ್ದರಿಂದ ಭಾನುವಾರದ ಮಟ್ಟಿಗೆ (ಆ.8) ನಾವು ಲಾಕ್‌ಡೌನ್‌ ನಿಯಮ ಪಾಲಿಸುತ್ತೇವೆ’ ಎಂದು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬೆಳಿಗ್ಗೆ ಸಭೆ ನಡೆಸಿದ್ದ ಒಕ್ಕೂಟದ ಸದಸ್ಯರು, ಭಾನುವಾರ ಅಂಗಡಿಗಳನ್ನು ತೆರೆಯುವ ತೀರ್ಮಾನ ಕೈಗೊಂಡಿದ್ದರು. ‘ಕರ್ಫ್ಯೂ ಉಲ್ಲಂಘಿಸಿ ವ್ಯಾಪಾರ ಮಾಡುತ್ತೇವೆ. ಪೊಲೀಸರು ಪ್ರಕರಣ ದಾಖಲಿಸಿದರೂ ಹೆದರಲ್ಲ’ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದರು.

ಸಹಕಾರ ನೀಡಿ: ‘ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಸರ್ಕಾರ ಲಾಕ್‌ಡೌನ್‌ ತೀರ್ಮಾನ ತೆಗೆದುಕೊಂಡಿದೆ. ಏನಾದರೂ ಸಡಿಲಿಕೆ ಮಾಡಲು ಆಗುವುದೇ ಎಂಬುದನ್ನು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಅದುವರೆಗೆ ಎಲ್ಲರೂ ಸರ್ಕಾರದ ತೀರ್ಮಾನ ಗೌರವಿಸಬೇಕು’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ವರ್ತಕರಲ್ಲಿ ಮನವಿ ಮಾಡಿದ್ದಾರೆ.

ಅರಮನೆ ಪ್ರವೇಶ ನಿರ್ಬಂಧ: ‘ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಆ.7 ಮತ್ತು 8ರಂದು ಅರಮನೆ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ’ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಮ್ಯೂಸಿಯಂ ಬಂದ್: ‘ಮೈಸೂರು ರೈಲ್ವೆ ಮ್ಯೂಸಿಯಂ ಶನಿವಾರ ಮತ್ತು ಭಾನುವಾರ ಮುಚ್ಚಿರುತ್ತದೆ. ಮಂಗಳವಾರ (ವಾರದ ರಜೆ) ಹೊರತುಪಡಿಸಿ ವಾರದ ಇತರ ದಿನಗಳಲ್ಲಿ ಸಂದರ್ಶಕರಿಗೆ ತೆರೆದಿರುತ್ತದೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.