ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗುವುದಕ್ಕೊಂದು ಸೂರು ಕೊಡಿ: ತೃತೀಯ ಲಿಂಗಿ ವಿದ್ಯಾರ್ಥಿ

ರಾಜ್ಯದ ಪ್ರಥಮ ತೃತೀಯ ಲಿಂಗಿ ಸಂಶೋಧನಾ ವಿದ್ಯಾರ್ಥಿ ದೀಪಾ ಬುದ್ದೆ ಮನವಿ
Last Updated 4 ಮೇ 2022, 19:54 IST
ಅಕ್ಷರ ಗಾತ್ರ

ಮೈಸೂರು: ‘ತಂಗಲು ನನಗೊಂದು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಿ’ ಎಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡುತ್ತಿರುವ ತೃತೀಯ ಲಿಂಗಿ ದೀಪಾ ಬುದ್ದೆ ಬುಧವಾರ ಮನವಿ ಮಾಡಿದರು.

‘ರಾಜ್ಯದಲ್ಲಿ ಪಿಎಚ್‌.ಡಿ ಮಾಡುತ್ತಿರುವ ಮೊದಲ ತೃತೀಯ ಲಿಂಗಿ ನಾನು. ಇಲ್ಲಿ ನಮಗೆಂದು ಪ್ರತ್ಯೇಕ ವಿದ್ಯಾರ್ಥಿ ನಿಲಯ ಇಲ್ಲ. ನಿತ್ಯ ಬೆಳಿಗ್ಗೆ 8 ಗಂಟೆಗೆ ಚಾಮರಾಜನಗರದಿಂದ ಬಸ್‌ನಲ್ಲಿ ಬರಬೇಕಿದೆ. ವಾಪಸ್ ತೆರಳುವುದು ರಾತ್ರಿಯಾಗುತ್ತದೆ. ನನ್ನಂಥವರಿಗೆ ಪ್ರತ್ಯೇಕ ಸೂರು ಕೊಟ್ಟರೆ ತಂಗಲು ಅನುಕೂಲವಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ ಗ್ರಾಮದಲ್ಲಿ ಕೂಲಿ ಮಾಡುವ ದಂಪತಿಯ ಐವರು ಮಕ್ಕಳಲ್ಲಿ ದೀಪಾ ಒಬ್ಬರು. ಪಿಯು ಮುಗಿಸುವ ಹೊತ್ತಿಗೆ ಮನೆ ಬಿಟ್ಟ ಅವರು, 2015ರಲ್ಲಿ ಪದವಿ ಪಡೆದು ಕೆಲಕಾಲ ವಿದ್ಯಾಭ್ಯಾಸ ನಿಲ್ಲಿಸಿದರು. 2016ರಲ್ಲಿ ಅರ್ಜಿ ತುಂಬಲು ತೃತೀಯ ಲಿಂಗಿ ಕಾಲಂ ಬೇಕೆಂದು ಹಟ ಹಿಡಿದು, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂಬೇಡ್ಕರ್ ಅಧ್ಯಯನ ವಿಷಯದಲ್ಲಿ
ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದರು. ಶೇ 84ರಷ್ಟು ಅಂಕಗಳೊಂದಿಗೆ ಎಂ.ಎ ಪೂರೈಸಿದರು.

ವರ್ಷದಿಂದ ಪ್ರೊ.ಜೆ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮತ್ತು ಹೋರಾಟ’ ವಿಷಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದಾರೆ. ‘ಹಾಸ್ಟೆಲ್ ಸೌಕರ್ಯ ಇಲ್ಲ ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ತೊಂದರೆ ಇಲ್ಲ. ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಹೇಳಿದರು.

ಐಟಿಸಿ ಕಂಪನಿಯು ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಬುಧವಾರ ಇಲ್ಲಿ ನೀಡಿದ ಲ್ಯಾಪ್‌ಟಾಪ್‌ಅನ್ನು ದೀಪಾ, ಸಂಸದ ಪ್ರತಾಪಸಿಂಹ ಅವರಿಂದ
ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಸಿಂಡಿಕೇಟ್ ಸದಸ್ಯೆ ಚೈತ್ರಾ ನಾರಾಯಣ್, ‘ತೃತೀಯ ಲಿಂಗಿಗಳಿಗೆಂದೇ ಪ್ರತಿ ವಿಭಾಗದಲ್ಲಿ ಉಚಿತವಾಗಿ ಶಿಕ್ಷಣ ಪಡೆಯಲು ಒಂದು ಸೀಟು ಮೀಸಲಿರಿಸುವ ತೀರ್ಮಾನವನ್ನು ಸಿಂಡಿಕೇಟ್ ತೆಗೆದುಕೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT