ಶುಕ್ರವಾರ, ಡಿಸೆಂಬರ್ 3, 2021
27 °C
ಬೇಕಾಗಿದೆ ‘ಬೆಂಗಳೂರು ಮಾದರಿ’

ಉತ್ಸವದಲ್ಲಿ ಕಾಣೆಯಾದ ಪರಿಸರ ಕಾಳಜಿ; ಮರಗಳಿಗೆ ದೀಪಾಲಂಕಾರದ ಮೊಳೆ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಣ್ಣು ಕೋರೈಸುವ ದಸರಾ ದೀಪಾಲಂಕಾರ ಒಂದೆಡೆ, ಅದಕ್ಕಾಗಿ ಮೈಗೆ ಮೊಳೆ ಹೊಡೆಸಿಕೊಂಡ ಮರಗಳ ಮೌನ ರೋದನ ಇನ್ನೊಂದೆಡೆ. ಇವೆರಡರ ನಡುವೆ ಕಾಣೆಯಾದ ಪರಿಸರ ಕಾಳಜಿ.

ಇದು ಪ್ರತಿ ದಸರಾ ಉತ್ಸವದಲ್ಲೂ ಕಾಣುವ ದೃಶ್ಯಾವಳಿ. ಮೊಳೆಪೆಟ್ಟನ್ನು ಮರಗಳು ಸಹಿಸುತ್ತಲೇ ಇವೆ. ದೀಪಾಲಂಕಾರ ಹೊಳೆಯುತ್ತಲೇ ಇದೆ. ಪ್ರತಿ ಮರದಲ್ಲೂ ಹತ್ತಾರು ಮೊಳೆಗಳನ್ನು ಹೊಡೆದೇ ಅಲಂಕಾರ ಮಾಡುವ ಪದ್ಧತಿಗೆ ಈ ಬಾರಿಯೂ ತಡೆ ಇಲ್ಲ. ‘ಮೊಳೆ ಮುಕ್ತ ಮರ’ದ ಕನಸು ಈ ಬಾರಿಯೂ ಚಿಗುರೊಡೆಯಲಿಲ್ಲ. ಮರಗಳ ಮೇಲೆ ಮೊಳೆಗಳ ಮರಣ ಶಾಸನ ದಾಖಲಾಗುತ್ತಲೇ ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಳೆದ ಮಾರ್ಚ್‌ ತಿಂಗಳಿನಲ್ಲಿ ಮರಗಳಿಗೆ ಮೊಳೆ ಹೊಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ‘ಮೊಳೆ ಮುಕ್ತ ಮರ’ ಅಭಿಯಾನ ಆರಂಭಿಸಿ, ಸರ್ಕಾರೇತರ ಸಂಸ್ಥೆಗಳ ಜತೆ ಸೇರಿ ನೂರಾರು ಮರಗಳಲ್ಲಿ ಹೊಡೆಯಲಾಗಿದ್ದ ಮೊಳೆಗಳನ್ನು ಕಿತ್ತು ಹಾಕಲಾಗಿತ್ತು. ’ಮತ್ತೆ ಮೊಳೆ ಹೊಡೆಯಬಾರದು’ ಎಂದು ಸಾರ್ವಜನಿಕರಿಗೆ ಸೂಚಿಸಿತ್ತು.

ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ ಮರಗಳಿಗೆ ಮೊಳೆ ಹೊಡೆಯುವುದು ಅಪರಾಧ. ಮರಗಳಿಗೂ ಜೀವವಿದ್ದು, ಮೊಳೆಯಿಂದ ಪೆಟ್ಟು ಬೀಳುತ್ತದೆ. ಕೆಲವು ಮರಗಳು ಪೆಟ್ಟಿನ ಗಾಯವನ್ನು ತಾವೇ ವಿವಿಧ ರಾಸಾಯನಿಕಗಳನ್ನು ಹೊರಹೊಮ್ಮಿಸುವ ಮೂಲಕ ವಾಸಿ ಮಾಡಿಕೊಳ್ಳುತ್ತವೆ. ಆದರೆ, ಈ ಪ್ರಯತ್ನದಲ್ಲಿ ಮರಗಳ ಬೆಳವಣಿಗೆ ಕುಂಟುತ್ತದೆ. ಕೆಲವು ಮರಗಳು ಮೊಳೆಯಿಂದ ಉಂಟಾಗುವ ರಂಧ್ರಗಳಿಂದ ಶಿಲೀಂಧ್ರ ಸೋಂಕಿಗೆ ಒಳಗಾಗಿ, ಕ್ರಮೇಣ ಬೇರು ಸತ್ತು ನೆಲಕ್ಕುರಳುತ್ತವೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೇಂಟ್ ಫಿಲೋಮಿನಾ ಚರ್ಚ್ ಸಮೀಪ ಮರವೊಂದು ಉರುಳಿ ಬಿದ್ದು ಆಟೊ ಚಾಲಕರೊಬ್ಬರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಮೈಸೂರಿನಲ್ಲಿ ಪ್ರತಿ ವರ್ಷ ದಸರಾ ದೀಪಾಲಂಕಾರದ ವಿನ್ಯಾಸಗಳನ್ನು ಬದಲಾಯಿಸಲಾಗುತ್ತಿದೆ. ಪ್ರತಿ ಬಾರಿ ವಿನ್ಯಾಸ ಬದಲಾದಾಗಲೂ ಮೊಳೆ ಹೊಡೆಯುವ ಜಾಗ ಬದಲಾಗುತ್ತದೆ. ಅದರಿಂದ ಕೆಲವೇ ವರ್ಷಗಳಲ್ಲಿ ನೂರಾರು ಮೊಳೆಗಳು ಮರಗಳನ್ನು ಹೊಕ್ಕುತ್ತವೆ’ ಎಂದು ಅಗ್ರಹಾರದ ನಿವಾಸಿ ರಾಮಾನುಜ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು