ಸೋಮವಾರ, ಅಕ್ಟೋಬರ್ 26, 2020
28 °C
ಎಟಿಎಂ ಒಡೆದು ₹ 12.81 ಲಕ್ಷ ಕಳವು ಮಾಡಿದ್ದ ಪ್ರಕರಣ

ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎಟಿಎಂ ಒಡೆದು ಹಣ ಕಳ್ಳತನ ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ವಿಜಯನಗರ ಪೊಲೀಸರು ₹ 2.50 ಲಕ್ಷ ವಶಪಡಿಸಿಕೊಂಡಿದ್ದಾರೆ.

ಹರಿಯಾಣದ ಅನೀಸ್ (30) ಹಾಗೂ ಬರ್ಖತ್ (22) ಬಂಧಿತ ಆರೋಪಿಗಳು.

ರಾಣೆ ಮದ್ರಾಸ್ ಫ್ಯಾಕ್ಟರಿ ಮುಂಭಾಗದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕಿಗೆ ಸೇರಿದ ಎಟಿಎಂ ಮಳಿಗೆಯ ಶೆಟರ್ ಒಡೆದು ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿದ್ದರು. ಸೆ.17ರಂದು ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ₹ 12.81 ಲಕ್ಷ ಕಳವು ಮಾಡಿ ಪರಾರಿಯಾಗಿದ್ದರು.

ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ನಗರದ ಪೊಲೀಸ್ ಕಮೀಷನರ್‌ ಡಾ.ಚಂದ್ರಗುಪ್ತ, ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ತಾಂತ್ರಿಕ ಕೌಶಲ ಬಳಸಿ ಆರೋಪಿಗಳು ಹರಿಯಾಣದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿತು. ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಬಂಧಿಸಿ, ರಾಜ್ಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

‘ಆರೋಪಿಗಳು ಕಳವು ಮಾಡಿದ್ದರಲ್ಲಿ ₹ 1 ಲಕ್ಷವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದರು. ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಳಿ ಇದ್ದ ₹ 1.5 ಲಕ್ಷ ಮತ್ತು ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಬಹುಪಾಲು ಹಣ ತಲೆಮರೆಸಿಕೊಂಡಿರುವ ಆರೋಪಿಗಳ ಬಳಿಯೇ ಇರುವ ಬಗ್ಗೆ ವಿಚಾರಣೆಯಿಂದ ತಿಳಿದುಬಂದಿದ್ದು, ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಶೇಷ ಕಾರ್ಯಾಚರಣೆಯನ್ನು ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್‌ ಗೌಡ, ಗೀತಾ ಪ್ರಸನ್ನ ಹಾಗೂ ಎಸಿಪಿ ಗಳಾದ ಮರಿಯಪ್ಪ ಮತ್ತು ಶಿವಶಂಕರ್ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಹಾಗೂ ಮೇಟಗಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಮಲ್ಲೇಶ್ ಹಾಗೂ ಇತರ ಸಿಬ್ಬಂದಿ ನಡೆಸಿರುತ್ತಾರೆ.

ಕಾಣೆಯಾಗಿದ್ದ ಬಾಲಕನ ಶವ ಪತ್ತೆ

ಕೆ.ಆರ್.ನಗರ: 4 ದಿನದ ಹಿಂದೆ ಕಾಣೆಯಾಗಿದ್ದ ಬಾಲಕ ಶವ ತಾಲ್ಲೂಕಿನ ಲಾಳನಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಇಲ್ಲಿನ ಮೀನಾಕ್ಷಿ ಪುರಂ ನಿವಾಸಿ ವಿಜಯ್ ಮತ್ತು ವನಲಕ್ಷ್ಮೀ ದಂಪತಿ ಪುತ್ರ ಲಿಖಿತ್ (8) ಮೃತ ಬಾಲಕ. ಅ. 7ರಂದು ಶಾಲೆಯಿಂದ ಮನೆಗೆ ಬಂದ ಬಾಲಕ ಕೆಲ ಸಮಯದ ಬಳಿಕ ಕಾಣೆಯಾಗಿದ್ದನು. ಪ್ರಕರಣ ದಾಖಲಿಸಿ ಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ.

ಯುವ ವಿಜ್ಞಾನಿ ನಾಪತ್ತೆ

ಮೈಸೂರು: ಮೈಸೂರಿನಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಧ್ರಪ್ರದೇಶದ ಯುವ ವಿಜ್ಞಾನಿಯೊಬ್ಬರು ನಾಪತ್ತೆ ಆಗಿದ್ದಾರೆ.

‘ಇಲವಾಲದ ನ್ಯೂ ಜನತಾ ಕಾಲೊನಿಯಲ್ಲಿ ವಾಸವಿದ್ದ ಅಭಿಷೇಕ್‌ ರೆಡ್ಡಿ ಎಂಬ ವ್ಯಕ್ತಿ  ನಾಲ್ಕು  ದಿನಗಳಿಂದ ಕಾಣೆಯಾಗಿರುವ ವಿಚಾರ ಗೊತ್ತಾಗಿದೆ. ಕೆಲಸಕ್ಕೂ ಹಾಜರಾಗಿಲ್ಲ. ಇಲವಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.