ಸಂಶೋಧನೆ ಹಾಳು ಮಾಡುತ್ತಿರುವ ಯುಜಿಸಿ: ಪ್ರೊ.ಬರಗೂರು ಟೀಕೆ

7
ಡಾ.ಎಲ್‌.ಬಸವರಾಜು ಜನ್ಮ ಶತಮಾನೋತ್ಸವ

ಸಂಶೋಧನೆ ಹಾಳು ಮಾಡುತ್ತಿರುವ ಯುಜಿಸಿ: ಪ್ರೊ.ಬರಗೂರು ಟೀಕೆ

Published:
Updated:

‌ಮೈಸೂರು: ‘ಕೆಲ ತಾಂತ್ರಿಕ ಅಂಶಗಳು ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯ ಮಹತ್ವವನ್ನು, ಅನನ್ಯತೆಯನ್ನು ಹಾಳು ಮಾಡುತ್ತಿವೆ. ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನೀತಿ ನಿಯಮಗಳೇ ಕಾರಣ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.‌

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಭಾನುವಾರ ಇಲ್ಲಿ ಆಯೋಜಿಸಿದ್ದ ಸಂಶೋಧಕ ‘ಡಾ.ಎಲ್‌.ಬಸವರಾಜು ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾತ್ವಿಕ ಅಂಶಗಳಿಗಿಂತ ತಾಂತ್ರಿಕ ವಿಚಾರಗಳತ್ತ ಗಮನ ಹರಿಸುತ್ತಿರುವುದೇ ಈ ದುರಂತಕ್ಕೆ ಕಾರಣ. ಯುಜಿಸಿ ಕ್ರಮಗಳು ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯ ಮಟ್ಟವನ್ನು ಕೆಳಗಿಳಿಸುತ್ತಿವೆ. ಇದರಿಂದ ಸಂಶೋಧನೆ ಗುಣಮಟ್ಟ ಕುಸಿಯುತ್ತಿದೆ’ ಎಂದರು.

‘ಮಂದಿರ, ಮಸೀದಿಯ ಹುಟ್ಟು ಮತ್ತು ಬೆಳವಣಿಗೆಯ ಕುರಿತ ಸಂಶೋಧನೆಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಅನಾರೋಗ್ಯಕರ ಅಂಶಗಳ ಜೊತೆಯಲ್ಲಿ ಸಂಶೋಧನೆ ಎನ್ನುವ ನೆಪದಲ್ಲಿ ತಮಗೆ ಬೇಕಾದ ಅಂಶಗಳನ್ನು ಸೇರಿಸಿಕೊಂಡು ಈ ಸಮಾಜದ ಆರೋಗ್ಯವನ್ನು ಹದೆಗಡಿಸಲಾಗುತ್ತಿದೆ. ಇದರಿಂದ ನಿಜವಾದ ಸಂಶೋಧಕರು ಹಿನ್ನೆಲೆಗೆ ಸರಿಯುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಂಶೋಧನೆಗೆ ಧರ್ಮ, ಜಾತಿ, ಪಕ್ಷ, ರಾಜಕೀಯದ ಸಾಂಕ್ರಾಮಿಕ ರೋಗಗಳು ಅಂಟುಕೊಂಡಿವೆ. ಸಾಂಸ್ಕೃತಿಕ ಸಂಶೋಧನೆಯ ಜಾಗವನ್ನು ರಾಜಕೀಯ ಸಂಶೋಧನೆ ಆಕ್ರಮಿಸಿಕೊಳ್ಳುತ್ತಿರುವ ಆತಂಕ ಎದುರಾಗಿದೆ. ಇದರಿಂದ ಸಂಶೋಧನೆಯ ಪಾವಿತ್ರ್ಯ ನಾಶವಾಗುತ್ತಿದೆ’ ಎಂದು ಟೀಕಿಸಿದರು.

‘ಡಾ.ಎಲ್‌.ಬಸವರಾಜು ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗಿದರು. ಜಗತ್ತಿನ ಮೊದಲ ವಾರಸುದಾರರು ಜನಸಾಮಾನ್ಯರು ಎಂಬುದನ್ನು ಅವರು ನಂಬಿದ್ದರು. ಜನಸಾಮಾನ್ಯರ ಜೊತೆ ಸಂಬಂಧವನ್ನು ಸ್ಥಾಪಿಸದೆ ಹೋದರೆ ನಮ್ಮ ಸಾಂಸ್ಕೃತಿಕ ಫಲಿತಗಳು ವ್ಯರ್ಥವಾಗಬಹುದು ಎಂಬ ಆತಂಕ ಅವರನ್ನು ಕಾಡಿರಬಹುದು. ಅವರೊಬ್ಬ ಸಂಶೋಧಕರೂ ಹೌದು, ಸಂವಹಕರೂ ಹೌದು’ ಎಂದು ಶ್ಲಾಘಿಸಿದರು.

‘ಕಡುಬಡತನದಿಂದ ಬಂದ ವ್ಯಕ್ತಿ ದೊಡ್ಡ ವ್ಯಕ್ತಿಯಾಗಿ ಬೆಳೆಯುವುದು ಅಪರೂಪದ ಸಾಮಾಜಿಕ ಸಾಧನೆ. ಇಂಥ ಸಾಧನೆಯನ್ನು ಬಸವರಾಜು ಮಾಡಿ ತೋರಿಸಿದರು. ಅವರನ್ನು ಆರಂಭದಲ್ಲಿ ಹಸಿವು ಹಾಗೂ ಮೋಕ್ಷದ ಹಸಿವು ಕಾಡಿಸಿತು. ಆದರೆ, ಯಾರೂ ಮೋಕ್ಷದ ದಾರಿ ತೋರಿಸುವುದಿಲ್ಲ ಎಂಬುದನ್ನು ಬಹುಬೇಗನೇ ಅರಿತರು. ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಂಡರು, ಗುರು ಹುಡುಕಲು ಹೋದವರು ಗುರುವಿನ ಸ್ಥಾನದಲ್ಲಿ ನಿಂತರು’ ಎಂದು ನುಡಿದರು.

ಚಿಂತಕ ಜ.ಹೋ.ನಾರಾಯಣಸ್ವಾಮಿ ಮಾತನಾಡಿ, ‘ಬಸವರಾಜು ಅವರ ಬದುಕು ಬರಹ ಭಿನ್ನವಲ್ಲ; ಒಂದೇ. ಜನಸಾಮಾನ್ಯರನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗುವ ಅವರ ತುಡಿತ ಅದ್ಭುತ’ ಎಂದರು.

ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ, ಲೇಖಕ ಪ್ರೊ.ಕಾಳೇಗೌಡ ನಾಗವಾರ, ಹೇಮಲತಾ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !