ಶನಿವಾರ, ಏಪ್ರಿಲ್ 1, 2023
23 °C
ಸರ್ಕಾರದ ವಿರುದ್ಧ ಕಿಡಿಕಾರಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್

ತಾಕತ್ತಿದ್ದರೆ ವಾರದಲ್ಲಿ ಮೇಕೆದಾಟು ಯೋಜನೆ ಜಾರಿಗೊಳಿಸಲಿ: ವಾಟಾಳ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಾಕತ್ತು ಇದ್ದರೆ ಒಂದು ವಾರದಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಲ್ಲಿ ಸವಾಲೆಸೆದರು.

ಮೇಕೆದಾಟು ಯೋಜನೆಗೆ ಒತ್ತಾಯಿಸಿ ಇಲ್ಲಿನ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಚ್)ದಲ್ಲಿ ಬುಧವಾರ ‍ಪ್ರತಿಭಟನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.‌

ಈ ಯೋಜನೆ ಜಾರಿಯಾಗದೇ ಇರುವುದಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳು ಕಾರಣವಾಗಿವೆ. ಯಡಿಯೂರಪ್ಪ ಅವರು ಈ ಯೋಜನೆ ಕುರಿತು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದು ಸರಿಯಲ್ಲ ಎಂದು ಖಂಡಿಸಿದ ಅವರು, ಜುಲೈ 11ರಂದು ರಾಮನಗರದಲ್ಲಿ ಹೆದ್ದಾರಿ ತಡೆ ಮಾಡುವುದಾಗಿ ತಿಳಿಸಿದರು.

ಯೋಜನೆ ಜಾರಿ ಮಾಡುತ್ತೇವೆ ಎಂದು ಸುಮ್ಮನೆ ಹೇಳಿದರೆ ಸಾಲದು. ಇದಕ್ಕೆ ಎಷ್ಟು ಹಣ ಬೇಕಾಗುತ್ತದೆ, ಇದರ ನೀಲನಕಾಶೆ ಏನು ಮೊದಲಾದ ಪೂರ್ವಸಿದ್ಧತೆಗಳು ಬೇಕಾಗಿವೆ. ಯಾವುದೇ ಸಿದ್ಧತೆ ನಡೆಸದೆ ಸುಮ್ಮನೆ ಬುರುಡೆ ಬಿಡುತ್ತಿದ್ದಾರೆ ಎಂದು ಹರಿಹಾಯ್ದರು.

ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಕಾಮಗಾರಿ 6 ತಿಂಗಳ ಹಿಂದೆಯೆ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಹಣ ನೀಡಿದೆ. ನರೇಂದ್ರ ಮೋದಿ ಅವರಿಗೆ ನಿಜಕ್ಕೂ ಕರ್ನಾಟಕದ ಮೇಲೆ ಗೌರವ ಇದ್ದರೆ ಮೇಕೆದಾಟು ಯೋಜನೆಗೂ ಹಣ ನೀಡಬೇಕು ಎಂದು ಹೇಳಿದರು.

ಬಸನಗೌಡ ಪಾಟೀಲ ಯತ್ನಾಳ್ ಅವರು ಟುಸ್‌ ಪಟಾಕಿ ಇದ್ದಂತೆ. ಅವರಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಾಗುವುದಿಲ್ಲ. ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೂ ಚಿಂತೆ ಇಲ್ಲ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದಿದ್ದರೆ ಮಾತ್ರ ನಾಯಕತ್ವ ಬದಲಾವಣೆ ಮಾಡಬಹುದು ಎಂದರು.

‘ಸೈಕಲ್‌ ಜಾಥಾ ಮೊದಲು ನಾನು ಮಾಡಿದ್ದು. ಈಗ ಕಾಂಗ್ರೆಸ್ ಅದನ್ನು ಅನುಸರಿಸುತ್ತಿದೆ. ಅಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಬೆಲೆ ಏರಿಕೆ ನಿಯಂತ್ರಣಕ್ಕೆ ಬರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಾದಯಾತ್ರೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಅವರು, ‘ಯಡಿಯೂರಪ್ಪ ಆರಾಮವಾಗಿ ಕುಳಿತಿರಲಿ. ನಾನು ನಡೆದುಕೊಂಡು ಹೋಗಬೇಕಾ’ ಎಂದು ಹಾಸ್ಯಚಟಾಕಿ ಹಾರಿಸಿದರು.‌

ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು