ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು| ಹೊಲದಲ್ಲೇ ತರಕಾರಿ ಖರೀದಿ; ರೈತರು– ಗ್ರಾಹಕರಿಗಿಲ್ಲ ಲಾಭ

ಮಧ್ಯವರ್ತಿಗಳಿಗೆ ಹೆಚ್ಚುವರಿ ಆದಾಯ
Last Updated 27 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಮಾರುಕಟ್ಟೆಯಲ್ಲಿ ತರಕಾರಿ ಸಿಗದಿದ್ದರಿಂದ, ಕೊಡಗಿನ ವ್ಯಾಪಾರಿಗಳು ಗುರುವಾರ ಬೆಳೆಗಾರರ ಹೊಲಕ್ಕೆ ಹೋಗಿ ಖರೀದಿಸಿದರು.

ವಿರಾಜಪೇಟೆಯ ನಿಸಾರ್ ಅಹಮದ್ ವಾಹನವೊಂದರಲ್ಲಿ ಮೂರ್ನಾಲ್ಕು ವ್ಯಾಪಾರಿಗಳೊಂದಿಗೆ ತರಕಾರಿ ಬೆಳೆಯುವ ಮೈಸೂರು ತಾಲ್ಲೂಕಿನ ಮರಯ್ಯನಹುಂಡಿ ಗ್ರಾಮಕ್ಕೆ ತೆರಳಿ ಟೊಮೆಟೊ, ಕೋಸು ಖರೀದಿಸಿ ಮಾರಾಟಕ್ಕಾಗಿ ಕೊಂಡೊಯ್ದರು.

‘ಈ ಮುಂಚೆ ಕೇರಳದ ವ್ಯಾಪಾರಿಗಳಿಂದಲೇ ನಾವು ತರಕಾರಿ ಖರೀದಿಸುತ್ತಿದ್ದೆವು. ಕೊರೊನಾ–ಕೋವಿಡ್ 19 ಸಾಂಕ್ರಾಮಿಕ ರೋಗಉಲ್ಬಣದ ಭೀತಿಯಿಂದ ಅಂತರ ರಾಜ್ಯ–ಜಿಲ್ಲಾ ವಾಹನ ಸಂಚಾರ ನಿಷೇಧಿಸಲಾಗಿದೆ. ನಮ್ಮೆಡೆಗೆ ಇದೀಗ ಕೇರಳದ ವ್ಯಾಪಾರಿಗಳು ಬರುತ್ತಿಲ್ಲ’ ಎಂದು ವಿರಾಜಪೇಟೆಯ ನಿಸಾರ್ ಅಹಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಕಾರಿ ಖರೀದಿಗೆ ಎಂದು ಮೈಸೂರಿಗೆ ಬಂದೆವು. ಆದರೆ, ನಮಗೆ ಎಲ್ಲಿಯೂ ತರಕಾರಿ ಸಿಗಲಿಲ್ಲ. ಎಲ್ಲೆಲ್ಲಿ ತರಕಾರಿ ಬೆಳೆಯುತ್ತಾರೆ ಎಂಬ ಮಾಹಿತಿ ಪಡೆದು ರೈತರ ಹೊಲಕ್ಕೆ ಖರೀದಿಗಾಗಿ ಬಂದೆವು. ನಮಗೆ ಅಗತ್ಯವಿದ್ದಷ್ಟು ಖರೀದಿಸಿದೆವು’ ಎಂದರು.

‘ಮೈಸೂರಿನಲ್ಲಿ ಮಾರುಕಟ್ಟೆ ನಡೆಯದಿದ್ದರಿಂದ ಟೊಮೆಟೊ ಕೊಯ್ಲು ಮಾಡುವುದನ್ನೇ ಬಿಟ್ಟಿದ್ದೆವು. ಕೊಯ್ಲಿನ ಕೂಲಿಯೂ ಸಿಗುತ್ತಿರಲಿಲ್ಲ. ವಿರಾಜಪೇಟೆಯ ವ್ಯಾಪಾರಿಗಳು ಹೊಲಕ್ಕೆ ಬರುತ್ತಿದ್ದಂತೆ, ನಾವೇ ಕೊಯ್ಲು ಮಾಡಿದೆವು. 25 ಕೆ.ಜಿ. ತೂಕದ ಒಂದು ಬಾಕ್ಸ್‌ಗೆ ₹ 180 ಸಿಕ್ಕಿತ್ತು. ಪರವಾಗಿಲ್ಲ. ಒಂದಷ್ಟು ದಿನ ನಿಭಾಯಿಸಬಹುದು’ ಎಂದು ಮರಯ್ಯನಹುಂಡಿಯ ನಿಂಗಣ್ಣಸ್ವಾಮಿ ಹೇಳಿದರು.

‘ಮರಯ್ಯನಹುಂಡಿ ಸುತ್ತಮುತ್ತಲಿನ ಮಾದಹಳ್ಳಿ, ಮಾರಗೋಡನಹಳ್ಳಿ, ನುಗ್ಗಹಳ್ಳಿ, ಬೀರಿಹುಂಡಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಿದ್ದು, ಬೆಳೆಗಾರರೇ ವಿವಿಧೆಡೆಯ ವ್ಯಾಪಾರಿಗಳನ್ನು ಮೊಬೈಲ್‌ ಮೂಲಕವೇ ಸಂಪರ್ಕಿಸಿ ಖರೀದಿಗೆ ಬರುವಂತೆ ಆಹ್ವಾನಿಸುತ್ತಿದ್ದೇವೆ’ ಎನ್ನುತ್ತಾರೆ ತರಕಾರಿ ಬೆಳೆಗಾರ ಮಹೇಶ್.

‘ಕೊರೊನಾ ಕೃಷಿ ಚಟುವಟಿಕೆಗೆ ಕಂಟಕವಾಗಿ ಕಾಡುತ್ತಿದೆ. ಹೊಲದಲ್ಲಿ ಅವರೆ, ಆಲಸಂದೆ ಕೊಯ್ಲಿಗೆ ಬಂದಿದೆ. ಮಾರುಕಟ್ಟೆ ಇಲ್ಲದಿರುವುದೇ ಚಿಂತೆ ಸೃಷ್ಟಿಸಿದೆ. ಊರವರು, ನೆಂಟರಿಗೆ ಕೊಯ್ದುಕೊಂಡು ಹೋಗಲು ಬಿಟ್ಟಿದ್ದೇವೆ’ ಎಂದು ತಳೂರಿನ ರೈತ ರವಿಕುಮಾರ್ ತಿಳಿಸಿದರು.

ಗಗನಮುಖಿಯಾದ ಬೆಲೆ

‘ಮನೆ ಮುಂದೆ ಮಾರಲು ಬರುತ್ತಿದ್ದವರ ಬಳಿಯೇ ತರಕಾರಿ ಖರೀದಿಸುತ್ತಿದ್ದೆವು. ಮಾರುಕಟ್ಟೆಗಿಂತ ಕೊಂಚ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಈಗ ಏಕಾಏಕಿ ಬೆಲೆ ಹೆಚ್ಚಿಸಿದ್ದಾರೆ. ಕೆಲವೊಂದು ತರಕಾರಿ ಬೆಲೆ ಮೂರು ಪಟ್ಟು ಹೆಚ್ಚಿದೆ. ಇದನ್ನು ಪ್ರಶ್ನಿಸಿದರೆ, ನಮಗೇ ಸಿಗುತ್ತಿಲ್ಲ ಎನ್ನುತ್ತಾರೆ. ದುಬಾರಿಯಾದರೂ ಅನಿವಾರ್ಯವಾಗಿ ಖರೀದಿಸುತ್ತಿದ್ದೇವೆ’ ಎಂದು ಗೃಹಿಣಿ ಲಕ್ಷ್ಮೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT