ಶನಿವಾರ, ಜೂನ್ 12, 2021
28 °C
ನಂಜನಗೂಡು ತಾಲ್ಲೂಕಿನ ಅಳಗಂಚಿ ಬಳಿಯ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ

ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದ ಬಳಿಯಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು, ಭಾನುವಾರ ಆಯತಪ್ಪಿ ಕೆಳಗೆ ಬಿದ್ದು ಕಬ್ಬು ನುರಿಸುವ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅಮೃತ್ ಕುಮಾರ್‌ (33) ಮೃತಪಟ್ಟ ವ್ಯಕ್ತಿ. ಕಬ್ಬು ನುರಿಸುವ ಯಂತ್ರದ ಚಾವಣಿಗೆ ಅವರು ವೆಲ್ಡಿಂಗ್ ಮಾಡುತ್ತಿದ್ದರು. ಡಿವೈಎಸ್‌ಪಿ ಪ್ರಭಾಕರರಾವ್ ಶಿಂಧೆ, ಸಿಪಿಐ ಲಕ್ಷ್ಮೀಕಾಂತ್ ಕೆ.ತಳವಾರ್, ಬಿಳಿಗೆರೆ ಠಾಣೆಯ ಎಸ್‍.ಐ ಆಕಾಶ್ ಕಾರ್ಖಾನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ 8 ಗಂಟೆಯಾದರೂ ದೂರು ದಾಖಲಾಗಿಲ್ಲ ಎಂಬುದು ಗೊತ್ತಾಗಿದೆ.

ಗಾಯಗೊಂಡಿದ್ದ ಯುವಕ ಸಾವು

ನಂಜನಗೂಡು ತಾಲ್ಲೂಕಿನ ಕಳಲೆ ಗೇಟ್ ಸಮೀಪ ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಚಲುವರಾಜು (24) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟರು.

ಸಿಂಧುವಳ್ಳಿಪುರ ಬಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚೆಲುವರಾಜು ಹಾಗೂ ಭರಣಿಸ್ವಾಮಿ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ  ಗಂಭೀರವಾಗಿ ಗಾಯಗೊಂಡಿದ್ದರು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗಳ ಡಿಕ್ಕಿ: ಇಬ್ಬರ ಸಾವು

ತಿ.ನರಸೀಪುರ- ನಂಜನಗೂಡು ಮುಖ್ಯ ರಸ್ತೆಯ ಹೆಳವರಹುಂಡಿ ಗ್ರಾಮದ ಬಳಿ ಭಾನುವಾರ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಒಬ್ಬರಿಗೆ ಗಾಯವಾಗಿದೆ.

ನಂಜನಗೂಡು ತಾಲ್ಲೂಕಿನ ಹಾರೋಪುರ ಗ್ರಾಮದ ನಾಗಶೆಟ್ಟಿ (31) ಸ್ಥಳದಲ್ಲೇ ಮೃತಪಟ್ಟರೆ, ಕಿರುಗುಂದ ಗ್ರಾಮದ ಮಹದೇವ (35) ಎಂಬಾತ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಭಾನುವಾರ ಸಂಜೆ ಮಹದೇವ ತಿ.ನರಸೀಪುರದಿಂದ ನಂಜನಗೂಡು ಕಡೆಗೆ ಹೋಗುತ್ತಿದ್ದರು. ಮತ್ತೊಂದು ಬೈಕ್‌ನಲ್ಲಿ ನಾಗಶೆಟ್ಟಿ ಮತ್ತು ಮಂಟೇಶೆಟ್ಟಿ ಎಂಬುವವರು ತಿ.ನರಸೀಪುರಕ್ಕೆ ಬರುವಾಗ ಹೆಳವರಹುಂಡಿ ಸಮೀಪ ಅಪಘಾತವಾಗಿದೆ.

ಈ ಸಂಬಂಧ ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಂ.ಆರ್.ಲವ ಭೇಟಿ ನೀಡಿ ಪರಿಶೀಲಿಸಿದರು.

ನಿವೃತ್ತ ಶಿಕ್ಷಕನಿಗೆ ಚಪ್ಪಲಿ ಏಟು

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿಯಲ್ಲಿ ನಿವೃತ್ತ ಶಿಕ್ಷಕರಿಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದಿದ್ದಾನೆ.

ವಿಜಯ್ ಎಂಬುವರೇ ಚಪ್ಪಲಿಯಿಂದ ಹೊಡೆತ ತಿಂದವರು. ಬಿಳಿಕೆರೆಯ ರಮೇಶ್ ಎಂಬಾತನೇ ನಿವೃತ್ತ ಶಿಕ್ಷಕರಿಗೆ ಚಪ್ಪಲಿಯಿಂದ ಥಳಿಸಿದವ.

‘ನಿವೃತ್ತ ಶಿಕ್ಷಕ ವಿಜಯ್ ತಾವಿರುವ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಬಡಾವಣೆಯ ಅಭಿವೃದ್ಧಿಗೆ ಶ್ರಮಿಸಿದವ ನಾನು. ನನಗೆ ಹೇಳದೆ ಸ್ವಾತಂತ್ರ್ಯೋತ್ಸವ ಆಯೋಜಿಸಿದ್ದೀರಿ ಎಂದು ರಮೇಶ್‌ ಎಂಬಾತ ಚಪ್ಪಲಿಯಿಂದ ನಿವೃತ್ತ ಶಿಕ್ಷಕರಿಗೆ ಥಳಿಸಿದ್ದಾನೆ ಎಂಬ ದೂರು ದಾಖಲಾಗಿದೆ’ ಎಂದು ಬಿಳಿಕೆರೆ ಪೊಲೀಸರು ತಿಳಿಸಿದರು.

ಮಹಿಳೆ ಶವ ಪತ್ತೆ

ತಿ.ನರಸೀಪುರ: ಕಾವೇರಿ ನದಿಯಲ್ಲಿ ಭಾನುವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಮಹಿಳೆಗೆ ಸುಮಾರು 60 ವರ್ಷ ವಯಸ್ಸಾಗಿದ್ದು, ಹಸಿರು, ನೀಲಿ ಮಿಶ್ರಿತ ಸೀರೆ ಧರಿಸಿದ್ದಾರೆ. ವಾರಸುದಾರರು ಪಟ್ಟಣ ಪೊಲೀಸ್ ಠಾಣೆ (ದೂ: 08227 - 261227) ಸಂಪರ್ಕಿಸಲು
ಕೋರಲಾಗಿದೆ.‌ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.