ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಕಾರ್ಯ‍ಪಡೆ ರಚನೆ: ಬೋನಿಗೆ ಬಿದ್ದವು 69 ಚಿರತೆ!

ಚಿರತೆ ಕಾರ್ಯ‍ಪಡೆ ರಚನೆಯಾಗಿ ಫೆ.1ಕ್ಕೆ ವರ್ಷ:
Published 26 ಜನವರಿ 2024, 7:27 IST
Last Updated 26 ಜನವರಿ 2024, 7:27 IST
ಅಕ್ಷರ ಗಾತ್ರ

ಮೈಸೂರು: ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾದ್ದರಿಂದ 2023ರ ಫೆ.1ರಂದು ರಾಜ್ಯ ಸರ್ಕಾರ ಚಿರತೆ ಕಾರ್ಯಪಡೆ ರಚಿಸಿತ್ತು. ವರ್ಷದಲ್ಲಿ 69 ಚಿರತೆಗಳು ಕಾರ್ಯಪಡೆಯ ವ್ಯೂಹಕ್ಕೆ ಬಿದ್ದಿವೆ.

ವನ್ಯಜೀವಿ–ಮಾನವ ಸಂಘರ್ಷ ತಡೆಯಲ್ಲಿ ಕಾರ್ಯಪಡೆಯ ಕಾರ್ಯ ಗಮನಾರ್ಹ. ತಿ.ನರಸೀಪುರ ತಾಲ್ಲೂಕಿನಲ್ಲಿ ಕಳೆದ ವರ್ಷಾರಂಭದಲ್ಲಿಯೇ ಚಿರತೆಯೊಂದು ಮೂವರನ್ನು ಕೊಂದಿದ್ದರಿಂದ ಅರಣ್ಯ ಇಲಾಖೆಯ ಮೈಸೂರು ವೃತ್ತದಲ್ಲಿ ಟಾಸ್ಕ್‌ಫೋರ್ಸ್ ರೂಪುಗೊಂಡಿತು.

ವರ್ಷದ ಹಾದಿಯಲ್ಲಿ ಎರಡೂ ಜಿಲ್ಲೆಗಳಲ್ಲಿ 837 ದೂರುಗಳನ್ನು ಕಾರ್ಯಪಡೆಯು ಪರಿಶೀಲಿಸಿದೆ. ಡಿಸಿಎಫ್‌ ನೇತೃತ್ವದ ಎಸಿಎಫ್‌ ಹಾಗೂ ಆರ್‌ಎಫ್‌ಒಗಳು, ನಾಲ್ಕು ತಂಡಗಳ ತಲಾ ಇಬ್ಬರು ಗಸ್ತು ಪಾಲಕರು, 10 ಹೊರಗುತ್ತಿಗೆ ನೌಕರರು ವರ್ಷವಿಡೀ ದುಡಿದಿದ್ದಾರೆ. 69 ಚಿರತೆಗಳನ್ನೂ ಸುರಕ್ಷಿತ ಪ್ರದೇಶಕ್ಕೆ ಇಲಾಖೆಯು ಬಿಟ್ಟು ಬಂದು ಹೆಸರು ಮಾಡಿದೆ.

ದೂರುಗಳ ಮಳೆ: ಚಿರತೆ ಕಾಣಿಸಿಕೊಂಡ ಬಗ್ಗೆ ರೈತರು ಹಾಗೂ ನಾಗರಿಕರಿಂದ ದೂರುಗಳ ಸುರಿಮಳೆಯೇ ಬಂದಿದೆ. ಮೈಸೂರು ಅರಣ್ಯ ವೃತ್ತದಲ್ಲಿ ಕಾರ್ಯಪಡೆಗೆ ಕಳೆದ ವರ್ಷ 837 ದೂರುಗಳು ಬಂದಿವೆ. ಮೈಸೂರು ಜಿಲ್ಲೆಯಲ್ಲಿ 661 ದೂರು ಬಂದಿದ್ದರೆ, ಮಂಡ್ಯ ಜಿಲ್ಲೆಯಿಂದ 176 ದೂರುಗಳು ಬಂದಿದ್ದವು. 

ಜಿಲ್ಲೆಯಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಮೈಸೂರು ನಗರ ಹಾಗೂ ತಾಲ್ಲೂಕಿನಲ್ಲಿಯೇ ಹೆಚ್ಚು ದೂರುಗಳು (337) ಕಾರ್ಯಪಡೆಗೆ ಬಂದಿರುವುದೇ ಅಚ್ಚರಿ. ನಗರೀಕರಣವೇ ಅದಕ್ಕೆ ಕಾರಣ ಎನ್ನಲಾಗಿದೆ. 

ಕುರುಚಲು ಕಾಡುಗಳಾಗಿದ್ದ ನಿವೇಶನಗಳಲ್ಲಿ ಮನೆಗಳು ಎದ್ದಿರುವುದರಿಂದ, ಚಾಮುಂಡಿ ಬೆಟ್ಟದ ಸುತ್ತ ಬಡಾವಣೆಗಳ ನಿರ್ಮಾಣ ಹಾಗೂ ತೋಟ, ಫಾರ್ಮ್‌ಹೌಸ್‌ಗಳ ಹೆಚ್ಚಳದಿಂದಲೂ ಚಿರತೆಗಳು ಹೆಚ್ಚು ಕಾಣಿಸಿಕೊಂಡಿವೆ. ಎಚ್‌.ಡಿ.ಕೋಟೆ 29, ಪಿರಿಯಾಪಟ್ಟಣದಲ್ಲಿ (13) ಅತಿ ಕಡಿಮೆ ದೂರುಗಳು ಇಲಾಖೆಗೆ ಬಂದಿವೆ.

ಮಂಡ್ಯ ಜಿಲ್ಲೆಯಲ್ಲಿ ಪಾಂಡವಪುರ ತಾಲ್ಲೂಕಿನಿಂದ (56) ಹೆಚ್ಚು ದೂರುಗಳು ಇಲಾಖೆಗೆ ಬಂದಿದ್ದರೆ, ಅತಿಕಡಿಮೆ ನಾಗಮಂಗಲ ಹಾಗೂ ಶ್ರೀರಂಗಪಟ್ಟಣದಿಂದ (ತಲಾ 7) ಬಂದಿವೆ. ಮೈಸೂರು ವೃತ್ತವಲ್ಲದೇ ಚಾಮರಾಜನಗರದ ಕೊಳ್ಳೇಗಾಲ (6), ಶಿವಮೊಗ್ಗ (3) ಹಾಗೂ ಹಾಸನ (1) ದೂರುಗಳನ್ನು ಆಧರಿಸಿ ಕಾರ್ಯಾಚರಣೆಯನ್ನು ನಡೆಸಿರುವುದು ವಿಶೇಷ.

24 ಗಂಟೆ ಕಾರ್ಯನಿರ್ವಹಣೆ: ಕಾರ್ಯಪಡೆಯ ನಿಯಂತ್ರಣ ಕೊಠಡಿ ದಿನದ 24 ಗಂಟೆ ಕಾರ್ಯನಿರ್ವಹಿಸಿದೆ. ಟಾಸ್ಕ್‌ಫೋರ್ಸ್‌ನಲ್ಲಿ 40 ಸಿಬ್ಬಂದಿ ಇದ್ದು, ಸಂಘರ್ಷ ವಲಯ ಆಧರಿಸಿ 4 ಬೇಸ್‌ ಕ್ಯಾಂಪ್‌ಗಳನ್ನು ತಿ.ನರಸೀಪುರ, ಮಂಡ್ಯ, ಕೆ.ಆರ್.ಪೇಟೆ ಹಾಗೂ ಮೈಸೂರಿನಲ್ಲಿ ಇಲಾಖೆಯು ಸ್ಥಾಪಿಸಿದೆ. ಕಾರ್ಯಪಡೆ 24 ಗಂಟೆ ಸಹಾಯವಾಣಿ (ಮೊ.ಸಂ. 94819 96026) ತೆರೆದಿದೆ.

ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸೆರೆಯಾದ ಚಿರತೆ
ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸೆರೆಯಾದ ಚಿರತೆ

‘ಸೆರೆ ಹಿಡಿದ 69 ಚಿರತೆಗಳ ಚರ್ಮದೊಳಗೆ ಮೈಕ್ರೊಚಿಪ್‌ ಅಳವಡಿಸಿ, ಕಿವಿಯ ಬಳಿ ‘V’ ಆಕಾರ ಕತ್ತರಿಸಿ ರಾಷ್ಟ್ರೀಯ ಉದ್ಯಾನ, ದಟ್ಟ ಅರಣ್ಯದ ಮಧ್ಯೆ ಬಿಡಲಾಗಿದೆ. ಅವು ವಾಪಸ್‌ ಬಂದರೂ ಸೆರೆಯಾಗಿದ್ದ ಚಿರತೆ ಎಂಬುದು ಗೊತ್ತಾಗಿದೆ’ ಎಂದು ಡಿಸಿಎಫ್‌ ಬಸವರಾಜ್‌ ‘‍‍ಪ್ರಜಾವಾಣಿ’ಗೆ ತಿಳಿಸಿದರು.

ಕೆ.ಎನ್‌.ಬಸವರಾಜು
ಕೆ.ಎನ್‌.ಬಸವರಾಜು

‘ಚಿರತೆ ಸೆರೆ ಕಾರ್ಯಾಚರಣೆ ಜೊತೆಗೆ ಆನೆಗಳು ನಾಡಿಗೆ ಬಂದಾಗ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯದಲ್ಲೂ ಕಾರ್ಯಪಡೆ ಭಾಗಿಯಾಗಿದೆ. 5 ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಕಾರ್ಯನಿರ್ವಹಿಸಿದೆ’ ಎಂದು ಮಾಹಿತಿ ನೀಡಿದರು. 

ತಿ.ನರಸೀಪುರದ ಮುಸುವಿನಕೊಪ್ಪಲಿನಲ್ಲಿ ಸೆರೆಯಾದ ಜೋಡಿ ಚಿರತೆಗಳು
ತಿ.ನರಸೀಪುರದ ಮುಸುವಿನಕೊಪ್ಪಲಿನಲ್ಲಿ ಸೆರೆಯಾದ ಜೋಡಿ ಚಿರತೆಗಳು

‘4 ಪ್ರತ್ಯೇಕ ಪ್ರಕರಣಗಳಲ್ಲಿ ತಾಯಿ ಚಿರತೆಯಿಂದ ಬೇರ್ಪಟ್ಟ 8 ಚಿರತೆ ಮರಿಗಳನ್ನು ರಕ್ಷಿಸಿ ತಾಯಿ ಮಡಿಲಿಗೆ ಸೇರಿಸಿದ್ದು ಸವಾಲಿನದ್ದಾಗಿತ್ತು’ ಎಂದರು.

ಸೆರೆ ಕಾರ್ಯಾಚರಣೆ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಚಿರತೆ ಟಾಸ್ಟ್‌ಫೋರ್ಸ್‌ ಮಾಡುತ್ತಿದೆ
ಬಸವರಾಜ್ ಡಿಸಿಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT