ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ– ಚಹಾ ಬೆಲೆಯೂ ಹೆಚ್ಚಳ

Published 3 ಆಗಸ್ಟ್ 2023, 6:07 IST
Last Updated 3 ಆಗಸ್ಟ್ 2023, 6:07 IST
ಅಕ್ಷರ ಗಾತ್ರ

ಮೈಸೂರು: ಹಾಲು– ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಾಗಿದ್ದರಿಂದ ಬುಧವಾರ ಖರೀದಿಗೆ ಬಂದ ಗ್ರಾಹಕರು ಗೊಂದಲಕ್ಕೀಡಾದರು. ಚಿಲ್ಲರೆಯೊಂದಿಗೆ ಬಾರದವರು ಮಳಿಗೆ ಮಾಲೀಕರಿಗೆ ಪ್ರಶ್ನೆಗಳ ಮಳೆಗೈದರು. ಹೋಟೆಲ್‌ಗಳಲ್ಲಿ ಚಹಾ– ಕಾಫಿ ದರ ಹೆಚ್ಚಾಗಿ ಆಸ್ವಾದಕ್ಕಿಂತಲೂ ಚಿಲ್ಲರೆ ಹೊಂದಿಸುತ್ತಿದ್ದದ್ದು ಕಂಡು ಬಂತು.

‘ದಿನಸಿ, ತರಕಾರಿ ಬೆಲೆಗಳು ಏರುತ್ತಿವೆ. ಟೊಮೆಟೊ ದರ ಕೆ.ಜಿಗೆ ₹ 100 ಇದೆ. ಇದೀಗ ಹಾಲಿನ ದರವೂ ಹೆಚ್ಚಾಗಿದೆ. ಮಕ್ಕಳಿಗೆ ಹಾಲು ಕೊಡಬೇಕಲ್ಲವೇ? ₹ 5 ಹೆಚ್ಚಿಸಿದ್ದರೂ ಕೊಳ್ಳಲೇ ಬೇಕು. ಲೀಟರ್ ಹಾಲಿಗೆ ಇದೀಗ ₹ 3 ಹೆಚ್ಚಾಗಿದೆ’ ಎಂದು ವಿಶ್ವೇಶ್ವರನಗರದ ನಿವಾಸಿ ಭಾವನಾ ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡರು.

‘ಅರ್ಧ ಲೀಟರ್‌ ಹಾಲು ₹ 20 ಇದ್ದದ್ದು, ₹ 22ಕ್ಕೆ ಹೆಚ್ಚಾಗಿದೆ. ಸ್ಪೆಷಲ್‌ ಹಾಲು ₹ 23ರಿಂದ ₹ 25 ಆಗಿದೆ. ಲೀಟರ್‌ ಹಾಲು ₹39ರಿಂದ ₹ 42 ಆಗಿದೆ. ಗ್ರಾಹಕರಿಂದ ಬೆಳಿಗ್ಗೆಯಿಂದಲೂ ಚಿಲ್ಲರೆ ಹೊಂದಿಸಬೇಕಿದೆ. ಯಾರೇನೂ ಕೊಳ್ಳದೇ ಹೋಗುತ್ತಿಲ್ಲ. ನಿತ್ಯದ ಗ್ರಾಹಕರು ಬಂದೇ ಬರುತ್ತಿದ್ದಾರೆ’ ಎಂದು ವಿದ್ಯಾರಣ್ಯಪುರಂನ ಚಾಮುಂಡಿವನದ ನಂದಿನಿ ಹಾಲಿನ ಬೂತ್‌ ಮಾಲೀಕ ವಿಜಯ್‌ ಹೇಳಿದರು.

ಎಷ್ಟೇ ಹೆಚ್ಚಳ ಮಾಡಿದರೂ ಹಾಲು ಕೊಳ್ಳಲೇಬೇಕು. ಅರ್ಧ ಲೀಟರ್‌ ಹಾಲಿಗೆ ₹ 2 ಹೆಚ್ಚಿಸಲಾಗಿದೆ. ಈ ಬಗ್ಗೆ ಮೊದಲೇ ತಿಳಿಸಬೇಕಿತ್ತು.
ಪೂನಂ, ವಿದ್ಯಾರಣ್ಯಪುರಂ

‘ಲೀಟರ್‌ ಹಾಲಿಗೆ ₹ 3 ಹೆಚ್ಚಾಗುತ್ತದೆ ಎಂದು ಹೇಳಿದ್ದರು. ಅರ್ಧ ಲೀಟರ್‌ ಹಾಲಿಗೆ ₹ 2 ಹೆಚ್ಚಾಗಿದೆ. ಗ್ರಾಹಕರಿಗೆ ವಿವರವಾಗಿ ತಿಳಿಸಿಲ್ಲ. ಒಂದೂವರೆ ರೂಪಾಯಿ ಕೊರತೆ ಆಗುವುದರಿಂದ, 10 ಮಿ.ಲೀ ಹಾಲನ್ನು ಹೆಚ್ಚು ನೀಡಲಾಗುತ್ತಿದೆ. ಹೀಗಾಗಿಯೇ ₹ 22 ಆಗಿದೆ. ಅದನ್ನು ಗ್ರಾಹಕರಿಗೆ ತಿಳಿಸುತ್ತಿದ್ದೇವೆ’ ಎಂದರು.

ಕಮಿಷನ್‌ ಕಡಿಮೆ

‘ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ನಮಗೆ ಕಮಿಷನ್‌ ಕೂಡ ಹೆಚ್ಚಿಸಬೇಕು. ಆದರೆ, ಈಗಲೂ ಶೇ 5ರಷ್ಟು ಕಮಿಷನ್‌ ಮಾತ್ರ ಸಿಗುತ್ತಿದೆ. 20 ಪೈಸೆ ಕಮಿಷನ್‌ನಿಂದ ಏನು ಮಾಡಲು ಸಾಧ್ಯ’ ಎಂದು ವಿಜಯ್ ಪ್ರಶ್ನಿಸಿದರು.

ಹಾಲು ಹೆಚ್ಚಳಗೊಂಡಿದ್ದು ಜನಸಾಮಾನ್ಯರಿಗೆ ಸ್ವಲ್ಪ ಹೊರೆಯಾಗಿದೆ. ತಿಂಗಳಿಗೆ ಹಾಲು– ಮೊಸರು ಕೊಳ್ಳಲು ₹ 2 ಸಾವಿರ ಬೇಕಾಗುತ್ತದೆ.
ನವೀನ್ ಚಾಮುಂಡಿಪುರಂ

‘ಖಾಸಗಿ ಕಂಪನಿಗಳ ಹಾಲು ಮಾರಾಟದಲ್ಲಿ ₹ 5ರಿಂದ ₹ 6 ಕಮಿಷನ್‌ ಸಿಗುತ್ತದೆ. ನಂದಿನಿ ಹಾಲು ಮಾರಾಟದಲ್ಲಿ ₹ 2.20 ಮಾತ್ರ ಸಿಗುತ್ತಿದೆ. 30 ವರ್ಷದಿಂದಲೂ ದರ ಏರಿಕೆಯಾದಾಗೆಲ್ಲ 20 ಪೈಸೆ ಕಮಿಷನ್‌ ಹೆಚ್ಚಿಸುತ್ತಾ ಬಂದಿದ್ದಾರಷ್ಟೇ. ಆಗ ಲೀಟರ್ ಹಾಲಿಗೆ ₹ 20 ಇತ್ತು. ಇಂದು ₹ 42 ಆಗಿದೆ. ನಮ್ಮ ಕಮಿಷನ್‌ ಶೇ 5ರಷ್ಟು ಮಾತ್ರವೇ ಇದೆ’ ಎಂದರು.

ಚಹಾ, ಕಾಫಿ ದರ ದುಬಾರಿ: ‘ಹಾಲಿನ ದರ ಏರಿಕೆ ಆಗಿರುವುದರಿಂದ ಚಹಾ– ಕಾಫಿ ದರವು ಶೇ 10ರಿಂದ ಶೇ 15ರಷ್ಟು ಏರಿಕೆಯಾಗಿತ್ತು. ಚಾಮರಾಜಮೊಹಲ್ಲಾದ ಕಾಫಿ ಹೌಸ್‌ನಲ್ಲಿ ₹ 20 ಬೆಲ್ಲದ ಕಾಫಿ ₹ 25ಕ್ಕೆ ಹೆಚ್ಚಳಗೊಂಡಿತ್ತು. ಹೋಟೆಲ್‌ಗಳಲ್ಲಿ ಚಹಾ ದರವು ₹ 10ರಿಂದ ₹ 12ಗೆ ಜಿಗಿದಿತ್ತು. ಕಾಫಿ ಹೀರಲು ಬಂದವರೆಲ್ಲ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದು ಕಂಡು ಬಂತು.

ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಮಾರಾಟಗಾರರಿಗೆ ನೀಡುವ ಕಮಿಷನ್ ಪ್ರಮಾಣವನ್ನು ಮೈಮುಲ್‌ ಹೆಚ್ಚು ನೀಡಬೇಕು.
ವಿಜಯ್‌, ನಂದಿನಿ ಮಳಿಗೆದಾರ

8.5 ಲಕ್ಷ ಲೀಟರ್‌ ಹಾಲು ಮಾರಾಟ

‘ರಾಜ್ಯದಾದ್ಯಂತ ಹಾಲಿನ ದರ ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮ ಬೀರಿಲ್ಲ. ವರ್ಷದಿಂದ ವರ್ಷಕ್ಕೆ ನಂದಿನಿ ಹಾಲು ಹಾಗೂ ಉತ್ಪನ್ನಗಳ ಮಾರಾಟ ಹೆಚ್ಚಿದೆ’ ಎಂದು ಮೈಮುಲ್‌ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘2022ರ ಆಗಸ್ಟ್‌ನಲ್ಲಿ 7.8 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿತ್ತು. ಇದೀಗ 8.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ಲೀಟರ್ ಹಾಲಿಗೆ ₹ 3 ಹೆಚ್ಚಾಗಿದೆ. ಅರ್ಧ ಲೀಟರ್‌ ₹ 2 ಹೆಚ್ಚಿಸಲಾಗಿದೆ. ₹1.5 ಮಾಡಿದರೆ ಚಿಲ್ಲರೆ ಸಮಸ್ಯೆಯಾಗುತ್ತದೆ. ಹೀಗಾಗಿ 50 ಪೈಸೆಗೆ 10 ಮಿ.ಲೀ ಅನ್ನು ಅರ್ಧಲೀಟರ್‌ ಹಾಲಿಗೆ ಸೇರಿಸಲಾಗಿದೆ. ಅದರಿಂದ ಮಳಿಗೆದಾರರ ಚಿಲ್ಲರೆ ಸಮಸ್ಯೆ ಬಗೆಹರಿದಿದೆ’ ಎಂದರು. ‘ಶೇ 5ರಷ್ಟು ಕಮಿಷನ್‌ ಮಾರಾಟಗಾರರಿಗೆ ಸಿಗುತ್ತಿದೆ. ಮೊದಲಿನಿಂದಲೂ ನಿಯಮಾವಳಿಯಂತೆ ನೀಡಲಾಗುತ್ತಿದೆ. 15 ಪೈಸೆಯಷ್ಟು ಕಮಿಷನ್ ಸಿಗುತ್ತಿದೆ’ ಎಂದು ತಿಳಿಸಿದರು.

ನಂದಿನಿ ದರ ಮಾಹಿತಿ
ನಂದಿನಿ ದರ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT