ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಅಯೂಬ್‌ ಪದಗ್ರಹಣ

Published 2 ಮಾರ್ಚ್ 2024, 13:23 IST
Last Updated 2 ಮಾರ್ಚ್ 2024, 13:23 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ(ಕೆಇಎ)ದ ನೂತನ ಅಧ್ಯಕ್ಷರಾಗಿ ಮಾಜಿ ಮೇಯರ್‌ ಅಯೂಬ್‌ ಖಾನ್‌ ಶನಿವಾರ ಅಧಿಕಾರ ಸ್ವೀಕರಿಸಿದರು.

ಅವರನ್ನು ಶಾಸಕರಾದ ತನ್ವೀರ್‌ ಸೇಠ್ ಹಾಗೂ ಕೆ.ಹರೀಶ್‌ಗೌಡ ಅಭಿನಂದಿಸಿದರು. ವಿಧಾನಪರಿಷತ್‌ ಸದಸ್ಯ ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಕೂಡ ಪಾಲ್ಗೊಂಡು ಅಭಿನಂದಿಸಿದ್ದು ಅಚ್ಚರಿಗೆ ಕಾರಣವಾಯಿತು.

ಪ್ರಾಧಿಕಾರದ ಸಿಇಒ ರಾಜೇಶ್‌ ಗೌಡ, ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಜಿ ಮೇಯರ್ ಆರೀಫ್ ಹುಸೇನ್‌, ಮುಖಂಡರಾದ ಬಿ.ಎಂ. ರಾಮು, ಎನ್.ಆರ್. ನಾಗೇಶ್, ಯೋಗೇಶ್ ಉಪ್ಪಾರ್, ಗೋಪಿ ಪಾಲ್ಗೊಂಡಿದ್ದರು.

ಅಯೂಬ್ ಅವರನ್ನು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‌ರಾಂ ಅವರ ಮೊಮ್ಮಗ ಹಾಗೂ ಎಐಸಿಸಿ ವಕ್ತಾರ ಅನ್ಸುಲ್ ಅವಿಜಿತ್ ಮತ್ತು ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಅಭಿನಂದಿಸಿದರು.

ಸರ್ಕಾರದಿಂದ ಗುರುವಾರ ಪ್ರಕಟವಾಗಿದ್ದ ಮೊದಲ ಪಟ್ಟಿಯಲ್ಲಿ ಅಯೂಬ್‌ ಅವರಿಗೆ ‘ಮೈಲ್ಯಾಕ್‌’ (ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ) ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರಿಕೊಂಡು ಕೆಲವೇ ಗಂಟೆಗಳಲ್ಲಿ ಆದೇಶ ಬದಲಾವಣೆ ಮಾಡಿಸಿಕೊಂಡು, ಕೆಇಎ ಅಧ್ಯಕ್ಷ ಗಾದಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

‘ಅಭಿವೃದ್ಧಿಗೆ ಆದ್ಯತೆ’

ವಸ್ತುಪ್ರದರ್ಶನ ಪ್ರಾಧಿಕಾರದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಅಯೂಬ್‌ ಖಾನ್ ಹೇಳಿದರು. ‘ನನಗೆ ಮೊದಲಿನಿಂದಲೂ ಪ್ರವಾಸೋದ್ಯಮದ ವಿಚಾರದಲ್ಲಿ ಆಸಕ್ತಿ ಇದೆ. ಪ್ರಾಧಿಕಾರದಿಂದ ವಸ್ತುಪ್ರದರ್ಶನ ಆಯೋಜಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದೇವೆ. ಪ್ರವಾಸಿಗರು ಬರದಿದ್ದರೆ ನಗರ ಸತ್ತು ಹೋದಂತಾಗುತ್ತದೆ. ಆದ್ದರಿಂದ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಮಾಡಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT