ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ಕೋಮು, ಅನ್ಯ ಧರ್ಮೀಯ ಎಂಬ ಪದಗಳು ‘ಮನುಷ್ಯ ದ್ವೇಷಿ’: ರಹಮತ್‌ ತರೀಕೆರೆ

‘ವಚನ ಸಾಹಿತ್ಯದಲ್ಲಿ ಆಧ್ಯಾತ್ಮಿಕತೆ ಮತ್ತು ಲೌಕಿಕತೆ’ ಕುರಿತ ಗೋಷ್ಠಿ
Published 9 ಮಾರ್ಚ್ 2024, 15:48 IST
Last Updated 9 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ಮೈಸೂರು: ‘ಈಚಿನ ದಿನಗಳಲ್ಲಿ ಅನ್ಯ ಕೋಮು, ಅನ್ಯ ಧರ್ಮೀಯ ಎನ್ನುವ ಶಬ್ದಗಳ ಬಳಕೆ ಹೆಚ್ಚಿದ್ದು, ಇವು ಮನುಷ್ಯ ದ್ವೇಷಿ ಪದಗಳಾಗಿವೆ’ ಎಂದು ಲೇಖಕ ರಹಮತ್‌ ತರೀಕೆರೆ ಹೇಳಿದರು.

ರಂಗಾಯಣದಲ್ಲಿ ನಡೆದಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶನಿವಾರ ‘ವಚನ ಚಳವಳಿಯ ಸಮಕಾಲೀನ ವ್ಯಾಖ್ಯಾನ’ ವಿಚಾರ ಸಂಕಿರಣದಲ್ಲಿ ‘ವಚನ ಸಾಹಿತ್ಯದಲ್ಲಿ ಆಧ್ಯಾತ್ಮಿಕತೆ ಮತ್ತು ಲೌಕಿಕತೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಭಿವೃದ್ಧಿ ಕಲ್ಪನೆಯ ಹೆಸರಿನಲ್ಲಿ ಅಲ್ಪಸಂಖ್ಯಾತರು, ಮಹಿಳೆಯರು, ಆದಿವಾಸಿಗಳನ್ನು ಸಮಾಜದಿಂದ ಹೊರಗಿಡುವ ಸಂಚು ನಡೆದಿದೆ’ ಎಂದು ದೂರಿದರು.

‘ಇವ ಯಾರವ ಎನ್ನುವವರಿಂದ ದೇಶ ಕಟ್ಟಲು ಆಗದು. ಬಹುಭಾಷಿಕ ಸಮುದಾಯಗಳಲ್ಲಿ ಭಿನ್ನಮತ ಸಹಜ. ಅದನ್ನು ದ್ವೇಷ ಇಲ್ಲದೇ ಬಗೆಹರಿಸುವುದೇ ನಿಜವಾದ ಪ್ರಜಾಪ್ರಭುತ್ವ. ಕರ್ನಾಟಕ ಸಂಸ್ಕೃತಿಯ ಆತ್ಮ ಇರುವುದು ಸಂಬಂಧಗಳನ್ನು ಹುಡುಕುವುದರಲ್ಲಿ. ಫ್ಯಾಸಿಸ್ಟ್‌ಗಳ ನೀತಿಗಳಲ್ಲಿ ಭಿನ್ನಮತಕ್ಕೆ ಅವಕಾಶ ಇಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶ ಇದೆ’ ಎಂದು ವಿವರಿಸಿದರು.

‘ನಡೆ– ನುಡಿ ಒಂದೇ ಆಗಿರುವುದು ಶರಣರ ವಿಶೇಷ. ನಮ್ಮ ನಡೆ–ನುಡಿ ನಡುವಿನ ವ್ಯತ್ಯಾಸವೇ ನಮ್ಮ ಅಧ್ಯಾತ್ಮದ ಬಹುದೊಡ್ಡ ಕಂದಕ ಎಂದು ಅಂಬೇಡ್ಕರ್‌ ಸಹ ಹೇಳಿದ್ದಾರೆ’ ಎಂದು ನೆನೆದರು.

‘ಬಸವಣ್ಣರನ್ನು ವಿಶ್ವಗುರು ಎಂದು ಸರ್ಕಾರವು ಘೋಷಿಸಿರುವುದು ಶರಣ ಸಂಸ್ಕೃತಿಗೆ ಕೊಟ್ಟ ಗೌರವ ಎಂದು ಭಾವಿಸಬೇಕು. ನಾಡಿನ ಎಲ್ಲ ಚಳವಳಿಗಳು ಪಲ್ಲಟದಲ್ಲಿ ನಂಬಿಕೆ ಇಟ್ಟಿವೆ. ಇಡೀ ಶರಣ ಚಳವಳಿಯಲ್ಲಿ ರೂಪಾಂತರ ತತ್ವವಿದೆ.‌ ಬಹುತ್ವದ ಈ ತತ್ವ ನಾಡಿಗೆ ಮಾದರಿ‌’ ಎಂದು ವಿವರಿಸಿದರು.

ವಿಷಯ ಮಂಡನೆ ಮಾಡಿದ ಬರಹಗಾರ ಎಸ್. ನಟರಾಜ ಬೂದಾಳು ‘ಈಚಿನ ಸಮಾಜದಲ್ಲಿ ಭಕ್ತಿ, ರಾಷ್ಟ್ರಭಕ್ತಿಯ ಅಭಿನಯ ಹೆಚ್ಚಾಗಿದೆ. ಇಡೀ ಭಾರತವೇ ದೊಡ್ಡ ರಂಗಭೂಮಿ ಆಗಿ ಬದಲಾಗಿದೆ. ವಾಸ್ತವ ಏನು ಎಂಬುದು ಕಂಡುಕೊಳ್ಳುವುದೇ ಸವಾಲಾಗಿದೆ’ ಎಂದರು.

ವಚನಗಳು ನಮ್ಮ ಸಮಾಜಕ್ಕೆ ಔಷಧ. ವಚನಕಾರರು ವೈದ್ಯರಿದ್ದ ಹಾಗೆ. ಇವುಗಳನ್ನು ಬಳಸಿಕೊಳ್ಳುವುದನ್ನು ಕಲಿಯಬೇಕಿದೆ.
–ಎಸ್‌. ನಟರಾಜ ಬೂದಾಳು, ಲೇಖಕ

‘ಸಂವಿಧಾನವಾಗಲಿ, ಬಸವ ತತ್ವವಾಗಲಿ ನಮ್ಮ ಜೀವನ ಸಂವಿಧಾನವಾಗಿ ಮಾರ್ಪಾಡು ಆಗದಿರುವುದು ವಿಷಾದದ ಸಂಗತಿ. ಅಂಬೇಡ್ಕರ್ ರಾಜಕೀಯ ಸಂವಿಧಾನದ ಜೊತೆಗೆ, ಪ್ರಾಯೋಗಿಕವಾದ ಆಧ್ಯಾತ್ಮಿಕತೆ ಒಳಗೊಂಡ ಸಾಂಸ್ಕೃತಿಕ ಸಂವಿಧಾನವನ್ನೂ ನೀಡಿದ್ದು, ಅದರ ಅಧ್ಯಯನದ ಅಗತ್ಯವಿದೆ. ವಚನಕಾರರು ಗುರು ಮಾತ್ರ ದೈವ ಎಂದು ಸ್ವೀಕರಿಸಿದ್ದರು. ಹೀಗಾಗಿ ಇವೆಲ್ಲ ದೈವ ಮಾರ್ಗಗಳತ್ತ, ಗುರು ಮಾರ್ಗಗಳು’ ಎಂದು ವಿವರಿಸಿದರು.

ಪ್ರತಿಸ್ಪಂದನೆ ನೀಡಿದ ಲೇಖಕ ಎಲ್‌.ಎನ್‌. ಮುಕುಂದ ರಾಜು, ‘ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಕಳೆದುಕೊಳ್ಳುವ ಸಾಧ್ಯವಿದ್ದು, ಅದರ ಬಗ್ಗೆ ಎಚ್ಚರಿಕೆಯ ಅಗತ್ಯವಿದೆ’ ಎಂದು ಎಚ್ಚರಿಸಿದರು.

ಪ್ರಾಧ್ಯಾಪಕಿ ಲತಾ ಮೈಸೂರು ಮಾತನಾಡಿ, ‘ಸಾಮುದಾಯಿಕ‌ ಆತ್ಮಾವಲೋಕನಕ್ಕೆ ಅನುಭವ ಮಂಟಪ‌ ವೇದಿಕೆ ಆಗಿತ್ತು.‌ ತನ್ನನ್ನು‌ ತಾನು‌ ಅರಿತು ಸರಿಪಡಿಸಿಕೊಂಡವನು ಮಾತ್ರ ಸಮಾಜವನ್ನು ತಿದ್ದಬಲ್ಲ ಎಂಬ ಆತ್ಮೋದ್ಧಾರದ ನೀತಿ‌ ಶರಣರದ್ದಾಗಿತ್ತು’ ಎಂದು ವಿವರಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT