ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ಗೆ ಸಂಭ್ರಮದ ಸ್ವಾಗತ

Published 14 ಮಾರ್ಚ್ 2024, 15:35 IST
Last Updated 14 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಗುರುವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟರು. ಈ ಸಂದರ್ಭ ಕಾರ್ಯಕರ್ತರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಪಕ್ಷದ ಕಚೇರಿಯತ್ತ ಬರುತ್ತಲೇ ಅವರಿಗೆ ಹೂವಿನ ಮಳೆಗರೆದು ಸ್ವಾಗತ ಕೋರಲಾಯಿತು. ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರು. ಕಾರ್ಯಕರ್ತರು ಯದುವೀರ್ ಪರ ಘೋಷಣೆ ಕೂಗಿದರು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಯದುವೀರ್, ತಾವು ರಾಜಕೀಯದತ್ತ ಹೆಜ್ಜೆ ಇಡಲು ಕಾರಣ ಹಾಗೂ ಚುನಾವಣೆ ಎದುರಿಸಲು ಬೇಕಾದ ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡರು.

‘ಮೈಸೂರು ಅರಸನಾಗಿ ಪಟ್ಟಾಭಿಷೇಕವಾದ ನಂತರ ಕಳೆದ ಒಂಭತ್ತು ವರ್ಷದಿಂದ ಇಲ್ಲಿನ ಜನರ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತ ಬಂದಿದ್ದೆ. ಕಳೆದ ಒಂದು ವರ್ಷದಿಂದ ರಾಜಕೀಯದ ಕಡೆಗೆ ಮನಸ್ಸು ತುಡಿದಿತ್ತು. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದಾದರೆ ಸಾರ್ವಜನಿಕವಾಗಿ ಅಧಿಕಾರ ಇರಬೇಕು. ಈಗ ಅವಕಾಶ ಸಿಕ್ಕಿದ ಕಾರಣ ರಾಜಕೀಯಕ್ಕೆ ಬಂದಿದ್ದೇನೆ. ಅದಕ್ಕೆ ನಮ್ಮ ಕುಟುಂಬದವರ ಸಹಕಾರವೂ ಇದೆ’ ಎಂದರು.

ಮಹಾರಾಜರು ಎನ್ನುವುದು ಒಂದು ನಂಬಿಕೆ ಅಷ್ಟೇ. ದೇವರು ಹಾಗೂ ಸಂವಿಧಾನದ ಪ್ರಕಾರ ಎಲ್ಲ ಪ್ರಜೆಗಳೂ ಒಂದೇ. ನಿಜವಾದ ಅಧಿಕಾರ ಬೇಕು ಎಂದಾದರೆ ನಾವು ರಾಜಕೀಯಕ್ಕೆ ಬರಲೇಬೇಕು.
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಬಿಜೆಪಿ ಅಭ್ಯರ್ಥಿ

‘ಮೈಸೂರು–ಕೊಡಗು ಕ್ಷೇತ್ರದ ಅಭಿವೃದ್ಧಿಗೆ ಅನೇಕರು ಅಡಿಪಾಯ ಹಾಕಿದ್ದಾರೆ. ಅದನ್ನು ಮುಂದುವರಿಸಿ, ನನ್ನದೇ ಆದ ಯೋಜನೆಗಳನ್ನು ರೂಪಿಸುತ್ತೇನೆ. ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ಮುನ್ನಡೆಯುತ್ತೇನೆ. ಕ್ಷೇತ್ರದಲ್ಲಿ ಯಾವುದೇ ಸವಾಲು ಇರಲಿ, ಅದನ್ನು ಸಕಾರಾತ್ಮಕವಾಗಿ ಎದುರಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯದಲ್ಲಿನ ಟೀಕೆ–ಟಿಪ್ಪಣಿಗಳನ್ನು ಎದುರಿಸಲು ಹೇಗೆ ಸಿದ್ಧರಾಗಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ ಸಾಂಬಾರಿನಲ್ಲಿ ಮೆಣಸಿನಕಾಯಿ ಸಿಕ್ಕ ಹಾಗೇ ರಾಜಕೀಯದಲ್ಲಿ ಟೀಕೆ ಸಹಜ. ಅದೆಲ್ಲವನ್ನೂ ಸಕಾರಾತ್ಮಕವಾಗಿ ಎದುರಿಸುತ್ತೇನೆ ’ ಎಂದರು. ‘ಟಿಕೆಟ್‌ ಪಡೆಯಲು ಯಾರಿಂದಲೂ ಪ್ರಭಾವ ಬೀರಿಲ್ಲ. ಬಿಜೆಪಿ ಅಭಿವೃದ್ಧಿ ಕಾರ್ಯಗಳು ಹಾಗೂ ನನ್ನ ನಂಬಿಕೆ– ದೃಷ್ಟಿಕೋನ ಒಂದೇ ಆದ ಕಾರಣಕ್ಕೆ ಬಿಜೆಪಿ ಸೇರಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

‘ಎಲ್ಲ ಕ್ಷೇತ್ರದಂತೆಯೇ ರಾಜಕೀಯದಲ್ಲಿಯೂ ಅನೇಕ ಸವಾಲುಗಳು ಇವೆ. ಆದರೆ ಅದನ್ನು ಕಷ್ಟ ಎಂದು ಭಾವಿಸಿ ಹಿಂದೆ ಸರಿಯುವುದಿಲ್ಲ. ಹಿರಿಯರಿಂದ ರಾಜಕೀಯ ಅನುಭವ ಪಡೆಯುತ್ತೇನೆ. ಎ.ಸಿ. ಕೋಣೆ ಬಿಟ್ಟು ಬರುವುದು ಕಷ್ಟದ ವಿಷಯವೇನಲ್ಲ. ರಾಜಕೀಯ ಸೇವೆಗೆ ಬರುವಾಗ ಕೆಲವು ಸವಾಲು–ಕಷ್ಟಗಳಿಗೆ ಒಡ್ಡಿಕೊಳ್ಳಲೇ ಬೇಕಾಗುತ್ತದೆ. ಅದೆಲ್ಲದಕ್ಕೂ ಸಿದ್ಧನಿದ್ದೇನೆ’ ಎಂದರು.

ಪ್ರವಾಸೋದ್ಯಮಕ್ಕೆ ಒತ್ತು
ಮೈಸೂರಿನ ಅಭಿವೃದ್ಧಿಗೆ ತಮ್ಮ ಯೋಜನೆಗಳ ಕುರಿತು ಪ್ರತಿಕ್ರಿಯಿಸಿದ ಯದುವೀರ್‌, ನಮ್ಮ ಪೂರ್ವಜರ ಕೊಡುಗೆಗಳಿಂದ ಮೈಸೂರು ಇಷ್ಟು ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಿದೆ. ಜೊತೆಗೆ ನನ್ನದೂ ಒಂದಿಷ್ಟು ಕನಸುಗಳಿವೆ. ಇಡೀ ದಕ್ಷಿಣ ಭಾರತಕ್ಕೆ ಮೈಸೂರು ಪ್ರವಾಸೋದ್ಯಮದ ಕೇಂದ್ರವಾಗಬೇಕು. ಮೈಸೂರು ಹೆಸರಿನಲ್ಲಿ ಅನೇಕ ಬ್ರಾಂಡ್‌ಗಳಿದ್ದು, ಅದೆಲ್ಲವನ್ನೂ ಪ್ರೋತ್ಸಾಹಿಸಲಾಗುವುದು. ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಶ್ರಮಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT