ಮೈಸೂರು: ‘ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭೂಕಬಳಿಕೆಯ ಪಕ್ಷಿನೋಟ’ ಎಂಬ ಶೀರ್ಷಿಕೆಯಲ್ಲಿ 2023ರ ಫೆಬ್ರುವರಿಯಲ್ಲಿ ನೀಡಿದ್ದ ಜಾಹೀರಾತಿನ ಪ್ರತಿಯನ್ನು ದೊಡ್ಡ ಫ್ಲೆಕ್ಸ್ ಮಾಡಿ ನಗರದ ವಿವಿಧೆಡೆ ಪ್ರದರ್ಶಿಸಿದವರು ಬಿಜೆಪಿಯವರೇ ಹೊರತು ನಾವಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫ್ಲೆಕ್ಸ್‌ನ ಕೆಳಭಾಗದಲ್ಲಿ ಕಾಂಗ್ರೆಸ್ ಪ್ರಕಟಣೆ ಎಂದು ಹಾಕಿ ಕಿಡಿ ಹೊತ್ತಿಸುವ ಕೆಲಸ ಮಾಡಿದ್ದಾರೆ. ನಮಗೂ– ಅದಕ್ಕೂ ಸಂಬಂಧವಿಲ್ಲ. ನಾವಾಗಿದ್ದರೆ ಫೋಟೊ ಸಹಿತ ಹಾಕುತ್ತಿದ್ದೆವು. ಆದರೆ, ಅದರಲ್ಲಿರುವ ಅಷ್ಟೂ ವಿಷಯಗಳು ಸತ್ಯ’ ಎಂದರು.
‘ವಿಷಯ ಇರುವುದು ಆ ಜಾಹೀರಾತನ್ನು ನೀಡಿದವರು ಯಾರು ಎನ್ನುವುದು? ಅದನ್ನು ಬಿಜೆಪಿಯವರು ಮಾಧ್ಯಮಗಳಿಗೆ ನೀಡಿದ್ದರು. ಅದಕ್ಕೆ ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಉತ್ತರ ಕೊಡಬೇಕು. ಆ ಜಾಹೀರಾತಿನಲ್ಲಿರುವಂತೆ, ಅವರ ಕುಟುಂಬದವರು 30 ನಿವೇಶನ ಪಡೆದಿರುವ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.
‘ಬಿಜೆಪಿ, ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ನಡೆದ ವಿವಿಧ ಹಗರಣಗಳ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ಇದರಿಂದ ನಡುಕ ಉಂಟಾಗಿರುವುದರಿಂದಾಗಿಯೇ ಆ ಪಕ್ಷದವರು ಪಾದಯಾತ್ರೆ ಮಾಡಿದ್ದಾರೆ. ಅವರಿಗೆ ಹೇಗೆ ಪ್ರತ್ಯುತ್ತರ ಕೊಡಬೇಕು ಎನ್ನುವುದು ನಮಗೆ ಗೊತ್ತಿದೆ’ ಎಂದರು.