ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಎಪಿಎಂಸಿ, ಲಾಟರಿಯಲ್ಲಿ ಒಲಿದ ಅದೃಷ್ಟ

ಅಧ್ಯಕ್ಷರಾಗಿ ಬಸವರಾಜು ಆಯ್ಕೆ
Last Updated 26 ಜೂನ್ 2020, 14:30 IST
ಅಕ್ಷರ ಗಾತ್ರ

ಮೈಸೂರು: ಭಾರಿ ಕುತೂಹಲ ಹಾಗೂ ಪೈಪೋಟಿಗೆ ಕಾರಣವಾಗಿದ್ದ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುಕ್ಕಾಣಿ ಮತ್ತೆ ಕಾಂಗ್ರೆಸ್ ಪಾಲಾಗಿದೆ.

ಲಾಟರಿ ಮೂಲಕ ಒಲಿದ ಅದೃಷ್ಟದಲ್ಲಿ ಈ ಪಕ್ಷದ ಬೆಂಬಲಿತ ಅಭ್ಯರ್ಥಿ ಬಸವರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ನಾಗರಾಜು ಚುನಾಯಿತರಾಗಿದ್ದಾರೆ.

ಇದರೊಂದಿಗೆ ಮತ್ತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಣ ಮೇಲುಗೈ ಸಾಧಿಸಿದೆ. ಎಂಪಿಎಂಸಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಡೆಸಿದ ಪ್ರಯತ್ನದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಬಣ ವಿಫಲವಾಗಿದೆ.

ಪ್ರತಿಷ್ಠೆಯ ಕಣವಾಗಿದ್ದ ಚುನಾವಣೆಯಲ್ಲಿ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಬಸವರಾಜು ಹಾಗೂ ಜೆಡಿಎಸ್‌ ಬೆಂಬಲಿತ ಕೋಟೆಹುಂಡಿ ಮಹಾದೇವು ಸ್ಪರ್ಧಿಸಿದ್ದರು. ಇಬ್ಬರೂ ತಲಾ ಎಂಟು ಮತ ಪಡೆದಿದ್ದರಿಂದ ಫಲಿತಾಂಶ ಸಮಬಲವಾಯಿತು. ಸದಸ್ಯರ ಒಪ್ಪಿಗೆ ಮೇರೆಗೆ ಚುನಾವಣಾಧಿಕಾರಿಯೂ ಆದ ಮೈಸೂರು ತಾಲ್ಲೂಕು ತಹಶೀಲ್ದಾರ್‌ ರಕ್ಷಿತ್‌, ಲಾಟರಿ ಮೊರೆ ಹೋಗಲು ನಿರ್ಧರಿಸಿದರು. ಈ ಅಗ್ನಿಪರೀಕ್ಷೆಯಲ್ಲಿ ‌ಬಸವರಾಜು ಅದೃಷ್ಟ ಖುಲಾಯಿಸಿತು.

ಕಾಂಗ್ರೆಸ್ ಬೆಂಬಲಿತ ಆರು ಸದಸ್ಯರು ಹಾಗೂ ಸರ್ಕಾರ ನಾಮನಿರ್ದೇಶಿತ ಇಬ್ಬರು ಬಸವರಾಜು ಪರ ಮತ ಚಲಾಯಿಸಿರುವುದು ಗೊತ್ತಾಗಿದೆ. ಮಹಾದೇವು ಪರ ಜೆಡಿಎಸ್ ಬೆಂಬಲಿತ ಆರು ಸದಸ್ಯರು, ವರ್ತಕರ ಸಂಘದ ಸದಸ್ಯ ಹಾಗೂ ನಾಮನಿರ್ದೇಶಿತ ಸದಸ್ಯರೊಬ್ಬರು ‌ಮತ ಹಾಕಿರುವುದು ತಿಳಿದುಬಂದಿದೆ.

ಬಸವರಾಜು ಆಯ್ಕೆಯಾದ ವಿಚಾರ ಹೊರಬರುತ್ತಿದ್ದಂತೆ ನೂರಾರು ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಹಾಗೂ ಕಾಂಗ್ರೆಸ್‌ ಬೆಂಬಲಿತ ಆನಂದ್‌ ಕಣಕ್ಕಿಳಿದಿದ್ದರು. ಇಲ್ಲೂ ಸಮಬಲವಾಗಿ ಲಾಟರಿಯಲ್ಲಿ ನಾಗರಾಜು ಗೆದ್ದರು.

ರೈತರ ಪರ ಹೋರಾಟ: ‘ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ಅಲ್ಲದೇ, ಕೆ.ಮರೀಗೌಡ, ಹರೀಶ್‌ ಗೌಡ ಅವರ ಪ್ರಯತ್ನವೂ ದೊಡ್ಡದು. ಜೊತೆಗೆ ಅದೃಷ್ಟವೂ ನನ್ನ ಪರವಿತ್ತು’ ಎಂದು ಬಸವರಾಜು ಪ್ರತಿಕ್ರಿಯಿಸಿದರು.

‘ರೈತಾಪಿ ವರ್ಗದ ಪರ ಹೋರಾಟ ನಡೆಸುತ್ತೇನೆ. ಅವರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಡುತ್ತೇನೆ. ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

ಬೇಸರವಾಗಿದೆ: ‘ಚುನಾವಣೆ ಫಲಿತಾಂಶ ಬೇಸರ ತರಿಸಿದೆ. ಜಿ.ಟಿ.ದೇವೇಗೌಡ ಬಹಳ ಪ್ರಯತ್ನ ಹಾಕಿದ್ದರು. ಬಿಜೆಪಿಯವರು ಕೂಡ ನಮಗೆ ಬೆಂಬಲ ವ್ಯಕ್ತಪಡಿಸಿದ್ದರು. ನಾಮನಿರ್ದೇಶಿತ ಸದಸ್ಯರೊಂದಿಗೂ ಮಾತನಾಡಿದ್ದೆವು. ಕೊನೆ ಗಳಿಗೆಯಲ್ಲಿ ಏನೋ ವ್ಯತ್ಯಾಸವಾಗಿದೆ’ ಎಂದು ಉಪಾಧ್ಯಕ್ಷ ನಾಗರಾಜು ತಿಳಿಸಿದರು.

ಸುಸೂತ್ರ ಚುನಾವಣೆ: ‘ಎಲ್ಲವೂ ಸುಸೂತ್ರವಾಗಿ ನಡೆಯಿತು. ಬೆಳಿಗ್ಗೆ 10.30ಕ್ಕೆ ಸಭೆ ನಡೆಸುವ ಮೂಲಕ ಪ್ರಕ್ರಿಯೆ ಆರಂಭಿಸಲಾಯಿತು. ಗುಪ್ತ ಮತದಾನದ ಮೂಲಕ ಚುನಾವಣೆ ನಡೆಸಲಾಯಿತು’ ಎಂದು ಚುನಾವಣಾಧಿಕಾರಿ ರಕ್ಷಿತ್‌ ಹೇಳಿದರು.

ಮೈಸೂರು ಎಪಿಎಂಸಿ ಸದಸ್ಯರ ಬಲಾಬಲ

6; ಕಾಂಗ್ರೆಸ್‌ ಬೆಂಬಲಿತ ಸದಸ್ಯರು

6; ಜೆಡಿಎಸ್‌ ಬೆಂಬಲಿತ ಸದಸ್ಯರು

3; ನಾಮನಿರ್ದೇಶಿತ ಸದಸ್ಯರು

1; ವರ್ತಕರ ಸಂಘದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT