ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಾ: 27 ಎಕರೆ ಕಬಳಿಸಲು ಸಂಚು!

Published 22 ಮೇ 2023, 5:47 IST
Last Updated 22 ಮೇ 2023, 5:47 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಗೆ ಸೇರಿರುವ ದಟ್ಟಗಳ್ಳಿಯಲ್ಲಿನ 27 ಎಕರೆ ಜಮೀನು ಕಬಳಿಸಲು ಸಂಚು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಅಕ್ರಮವನ್ನು ತಡೆಯಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ಸ.ನಂ. 27/1, 27/2 ಹಾಗೂ ಇನ್ನಿತರ ಜಮೀನುಗಳ ಬಗ್ಗೆ ಯಾವುದೇ ನಡಾವಳಿ ಕೈಗೊಳ್ಳದೆ, ಮೇ 22ರಂದು ದಾಖಲೆಗಳೊಂದಿಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮುಡಾ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌ ಅವರಿಗೆ ಸೂಚಿಸಿದ್ದಾರೆ.

ದಟ್ಟಗಳ್ಳಿ ಸರ್ವೆ ನಂ.27/1, 27/2, 27/3, 27/4, 29/1ಎ, 32, 38/1, 38/2, 41/2ರ ಒಟ್ಟು 27 ಎಕರೆ 34 ಗುಂಟೆ ಜಮೀನಿಗೆ ಸಂಬಂಧಿಸಿದ ಪ್ರಕರಣವಿದು. ಈ ಜಮೀನುಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಮಾರ್ಚ್‌ 21ರಂದು ಪ್ರಾಧಿಕಾರದ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡಿದೆ ಹಾಗೂ ಇದರ ಸದುಪಯೋಗ ಪಡೆದ 3ನೇ ವ್ಯಕ್ತಿಯು ಹೈಕೋರ್ಟ್‌ ಆದೇಶ ಪಡೆದು ಕೋಟ್ಯಂತರ ರೂಪಾಯಿ ಬೆಲೆಬಾಳುವ ಸ್ವತ್ತನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಮತ್ತು ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ವಕೀಲ ಎಚ್.ಎಂ.ಮುರಳೀಧರ ಅವರು ಮೇ 12ರಂದು ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ. ಇದನ್ನು ಆಧರಿಸಿ ಜಿಲ್ಲಾಧಿಕಾರಿಯು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಪ್ರಾಧಿಕಾರದ ಮಾರ್ಚ್‌ 21ರ ಸಭೆಯ ನಿರ್ಣಯ ಈವರೆಗೂ ಸ್ವೀಕೃತ ವಾಗಿಲ್ಲ. ಇದಲ್ಲದೆ, ನಿರ್ಣಯವನ್ನು ಸ್ಥಿರೀಕರಣಗೊಳಿಸುವ ಕುರಿತು ಪ್ರಾಧಿಕಾರದಲ್ಲಿ ಸಭೆ ನಡೆದಿಲ್ಲ. ಮಿಗಿಲಾಗಿ, ವಕೀಲರು ಆರೋಪಿಸಿರುವ ಪ್ರಕಾರ ಮಾರ್ಚ್‌ 21ರಂದು ನಿರ್ಣಯ ಕೈಗೊಂಡಿಲ್ಲ. ವಸ್ತುಸ್ಥಿತಿ ಹೀಗಿದ್ದಾಗ್ಯೂ, ಸದಸ್ಯರ ಗಮನಕ್ಕೆ ಸಲ್ಲಿಸದೇ ನೀವು ನೇರವಾಗಿ ಹೈಕೋರ್ಟ್‌ಗೆ ಸಲ್ಲಿಸಲು ಕಾರಣವೇನು, ಅಂತಹ ಅನಿವಾರ್ಯತೆ ಏನಿತ್ತು, ಯಾರ ಆದೇಶ ಹಾಗೂ ಸ್ಥಿರೀಕರಣವಾಗದ ನಡಾವಳಿಯನ್ನು ಯಾವ ಆಧಾರಲ್ಲಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆಯುಕ್ತರನ್ನು ಕೇಳಿದ್ದಾರೆ.

‘ಈ ಜಾಗ ಪ್ರಾಧಿಕಾರದ ಸ್ವತ್ತಾಗಿದ್ದು, ಈ ಸ್ವತ್ತನ್ನು ಸಂರಕ್ಷಿಸುವುದು ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದ್ದರೂ ನಗರದ ಹೃದಯ ಭಾಗದಲ್ಲಿರುವ 27 ಎಕರೆ ಪ್ರದೇಶವನ್ನು ಮನಸೋಇಚ್ಛೆ ನಿರ್ವಹಿಸುತ್ತಿರುವುದು ಮತ್ತು ಪ್ರಾಧಿಕಾರದ ಸ್ಥಿರೀಕರಣವಾಗದ ನಿರ್ಣಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಹಾಗೂ ಪ್ರಕರಣದಲ್ಲಿ ಮುಂದುವರಿದಿರುವ ನಡಾವಳಿಗಳನ್ನು ಗಮನಿಸಿದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ’ ಎಂದು ಹೇಳಿದ್ದಾರೆ.

‘ಈ ಪ್ರಕರಣದಲ್ಲಿ ಯಾವುದೇ ನಡಾವಳಿ ಕೈಗೊಳ್ಳದೆ ಸ್ಥಗಿತಗೊಳಿಸಿ ದಾಖಲೆ, ಲಿಖಿತ ವಿವರಣೆಗಳೊಂದಿಗೆ ಹಾಜರಾಗಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT