ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವುತರ ‘ಬೆದರಿಕೆ’ ನಡುವೆಯೇ ‘ಬಿಡಾರ’ಕ್ಕೆ ಸಿದ್ಧತೆ

ಅರಮನೆ ಆವರಣದಲ್ಲಿ ಶೆಡ್ ನಿರ್ಮಾಣ ಪ್ರಕ್ರಿಯೆ ಆರಂಭ
Last Updated 1 ಆಗಸ್ಟ್ 2022, 16:42 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಯು ಲಿಖಿತವಾಗಿ ಭರವಸೆ ನೀಡುವವರೆಗೆ ದಸರಾ ಕೆಲಸದಲ್ಲಿ ಭಾಗವಹಿಸುವುದಿಲ್ಲ’ ಎಂದು ಮಾವುತರು ಹಾಗೂ ಕಾವಾಡಿಗರು ಬೆದರಿಕೆ ಹಾಕಿರುವ ನಡುವೆಯೇ, ಇಲ್ಲಿನ ಅರಮನೆ ಆವರಣದಲ್ಲಿ ಅವರಿಗಾಗಿ ಬಿಡಾರಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನಿಗದಿಯಂತೆ, ಆ.7ರಂದು ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ಆ.10ರಂದು ಅರಮನೆ ಆವರಣದಲ್ಲಿ ಬರಮಾಡಿಕೊಳ್ಳಲಾಗುತ್ತದೆ. ದಸರೆಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ‘ಜಂಬೂಸವಾರಿ’ಯಲ್ಲಿ ಭಾಗವಹಿಸಲಿರುವ ಆನೆಗಳೊಂದಿಗೆ ಬಂದು ತಂಗಲಿರುವ ಮಾವುತರು, ಕಾವಾಡಿಗಳು, ಅವರ ಕುಟುಂಬದವರು ಹಾಗೂ ಮಕ್ಕಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಈ ಬಾರಿ 15 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳನ್ನು ನೋಡಿಕೊಳ್ಳುವವರು ಹಾಗೂ ಕುಟುಂಬದವರು ಇಲ್ಲಿ ಬಿಡಾರ ಹೂಡಲಿದ್ದಾರೆ. ಆನೆಗಳಿಗೆ ಆಹಾರ ಪದಾರ್ಥ ತಯಾರಿಸುವುದು, ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಟೆಂಟ್‌ ಶಾಲೆ ನಡೆಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಣ್ಣ ಗ್ರಂಥಾಲಯ ಮತ್ತು ಆಯುರ್ವೇದ ಚಿಕಿತ್ಸಾಲಯವೂ ಅಲ್ಲಿರಲಿದೆ.

ಅರಣ್ಯ ಇಲಾಖೆಯಿಂದ ನಿಯೋಜಿಸಲಾದ, ಸಿಬ್ಬಂದಿಯು ತಾತ್ಕಾಲಿಕ ಶೆಡ್‌ಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 40 ಶೆಡ್‌ಗಳನ್ನು ಈ ಬಾರಿ ಹಾಕಲಾಗುತ್ತಿದೆ.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷಗಳು ದಸರೆಯನ್ನು ಸರಳವಾಗಿ ಅಂದರೆ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಸಲಾಗಿತ್ತು. ಆಗ, ಮಾವುತರು ಹಾಗೂ ಕಾವಾಡಿಗಳಿಗಷ್ಟೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅವರ ಕುಟುಂಬದವರು ಬಂದಿರಲಿಲ್ಲ. ಈ ಬಾರಿ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿರುವುದರಿಂದ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ, ಮಾವುತರು ಹಾಗೂ ಕಾವಾಡಿಗಳ ಜತೆಗೆ ಕುಟುಂಬದವರೂ ಬರಲಿದ್ದಾರೆ. 40 ಕುಟುಂಬಗಳ 150 ಮಂದಿ ಬರುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಬಿಡಾರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕೆ ಬೇಕಾದ ಸಾಮಗ್ರಿಗಳನ್ನು ಅರಮನೆ ಆವರಣಕ್ಕೆ ತರಲಾಗಿದೆ.

ಆ ಪ್ರದೇಶದಲ್ಲಿ, ಸುರಕ್ಷತೆಯ ದೃಷ್ಟಿಯಿಂದಾಗಿ ಹೆಚ್ಚುವರಿಯಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಕ್ಕೆ ಯೋಜಿಸಲಾಗಿದೆ.

‘ಮಾವುತರು–ಕಾವಾಡಿಗಳು ಹಾಗೂ ಕುಟುಂಬದವರು ತಂಗಲು ಬೇಕಾದ ಶೆಡ್‌ಗಳನ್ನು ಅರಣ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಅಲ್ಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದು, ಶೌಚಾಲಯಗಳು, ಆನೆಗಳನ್ನು ತೊಳೆಯುವುದಕ್ಕೆ ಬೇಕಾದ ನೀರು ಮೊದಲಾದ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಅರಮನೆ ಮಂಡಳಿಯಿಂದ ಕಲ್ಪಿಸಲಾಗುವುದು. ಜತೆಗೆ, ಉದ್ಯಾನವನ್ನು ನಿರ್ವಹಿಸುವ ಕಾರ್ಯವೂ ಆರಂಭವಾಗಿದೆ’ ಎಂದು ಮಂಡಳಿಯ ಉಪನಿರ್ದೇಶಕ ಟಿ.ಎನ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT