ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಕಾಯಂ ಉದ್ಯೋಗಕ್ಕೆ ರೈತರ ಆಗ್ರಹ

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭ
Published 7 ಫೆಬ್ರುವರಿ 2024, 14:33 IST
Last Updated 7 ಫೆಬ್ರುವರಿ 2024, 14:33 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ಕಾಯಂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಜನಾಂದೋಲನ ಮಹಾಮೈತ್ರಿ ಹಾಗೂ ರೈತ ಸಂಘದ ನೇತೃತ್ವದಲ್ಲಿ ರೈತರು ಕಾರ್ಖಾನೆ ಮುಂಭಾಗ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಜನಾಂದೋಲನ ಮಹಾಮೈತ್ರಿ ಸಂಘಟನೆಯ ಜಿಲ್ಲಾ ಸಂಚಾಲಕ ಉಗ್ರ ನರಸಿಂಹೇಗೌಡ ಮಾತನಾಡಿ, ‘1992ರಲ್ಲಿ ಈ ಭಾಗದ ರೈತರ 400 ಎಕರೆ ಭೂಮಿಯನ್ನು ಕಾರ್ಖಾನೆ ಸ್ಥಾಪಿಸಲು ಪಡೆದ ಕಾರ್ಖಾನೆ ಆಡಳಿತ ಮಂಡಳಿ ಭೂಮಿ ಕಳೆದುಕೊಂಡ ರೈತರಿಗೆ ಕಾಯಂ ಉದ್ಯೋಗ ನೀಡುವ ಭರವಸೆ ನೀಡಿತ್ತು. ರೈತರ ಮಕ್ಕಳು ಕಳೆದ 14 ವರ್ಷಗಳಿಂದ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ ಸೌಲಭ್ಯಗಳನ್ನು ನೀಡುತ್ತಿಲ್ಲ’ ಎಂದು ದೂರಿದರು.

‘ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಡಿಸೆಂಬರ್‌ನಲ್ಲಿ ಕಾಯಂ ಉದ್ಯೋಗ ನೀಡುವ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಹೀಗಾಗಿ ನಮಗೆ ನ್ಯಾಯ ಸಿಗುವವರೆಗೆ ಕಾರ್ಖಾನೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕರಾದ ಆಕಾಶ್ ಕುಮಾರ್, ನಂಜುಂಡ, ಮಹೇಶ್, ಕೆ. ಪುನೀತ್, ರಾಜು, ಶ್ರೀಕಂಠ, ಮಂಜುನಾಥ್, ಬಸವಣ್ಣ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT