ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಶೀಟರ್‌ಗೆ ರಾಜ್ಯೋತ್ಸವ ಪುರಸ್ಕಾರ!

ಪೂರ್ವಾಪರ ಪರಿಶೀಲಿಸದೇ ನೀಡಿದ್ದಕ್ಕೆ ಆಕ್ರೋಶ ವ್ಯಕ್ತ; ಹಿಂಪಡೆದ ಜಿಲ್ಲಾಡಳಿತ
Published 22 ನವೆಂಬರ್ 2023, 22:35 IST
Last Updated 22 ನವೆಂಬರ್ 2023, 22:35 IST
ಅಕ್ಷರ ಗಾತ್ರ

ಮೈಸೂರು: ರೌಡಿಶೀಟರ್, ಕಾಂಗ್ರೆಸ್‌ ಮುಖಂಡ ಎಂ.ಕೆ. ಅಶೋಕ ಅವರಿಗೆ ನೀಡಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಪುರಸ್ಕಾರವನ್ನು ಜಿಲ್ಲಾಡಳಿತ ಬುಧವಾರ ಹಿಂಪಡೆದಿದೆ.

ಈ ವರ್ಷ ನ.1ರಂದು ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ 55 ಮಂದಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪುರಸ್ಕಾರ ನೀಡಿತ್ತು. ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪ್ರದಾನ ಮಾಡಿದ್ದರು. ಸಮಾಜ ಸೇವೆ ವಿಭಾಗದಲ್ಲಿ ಇಲ್ಲಿನ ಜನನಿ ಸೇವಾ ಟ್ರಸ್ಟ್‌ನ ಅಶೋಕ್‌ ಅವರಿಗೂ ಪ್ರಶಸ್ತಿ ದೊರೆತಿತ್ತು. ಮುನ್ನಾದಿನ 50 ಮಂದಿಗೆ ಪುರಸ್ಕಾರ ಘೋಷಿಸಲಾಗಿತ್ತು. ಕಾರ್ಯಕ್ರಮದ ದಿನದಂದು ಮತ್ತೆ ಐವರನ್ನು ಪಟ್ಟಿಗೆ ಸೇರಿಸಲಾಗಿತ್ತು.

ಅಶೋಕ್‌ ವಿರುದ್ಧ ಇಲ್ಲಿನ ಲಷ್ಕರ್ ಹಾಗೂ ದೇವರಾಜ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ರೌಡಿಶೀಟ್‌ ತೆರೆದಿದ್ದಾರೆ. ಹೀಗಿದ್ದೂ ಪೂರ್ವಾಪರ ವಿಚಾರಿಸದೇ ಅವರನ್ನು ಪರಿಗಣಿಸಿದ ಜಿಲ್ಲಾಡಳಿತದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪುರಸ್ಕಾರಕ್ಕೆ ಆಯ್ಕೆಗೆ ಪ್ರತ್ಯೇಕ ಉಪಸಮಿತಿಯೇ ಇದೆ. ಹಿರಿಯ ಅಧಿಕಾರಿಗಳು ಈ ಸಮಿತಿಯಲ್ಲಿ ಇದ್ದಾರೆ. ಪ್ರಶಸ್ತಿ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡುವುದು ಈ ಸಮಿತಿಯ ಜವಾಬ್ದಾರಿ. ಹೀಗಿದ್ದೂ, ಪರಿಶೀಲಿಸದೇ ಪುರಸ್ಕಾರ ನೀಡಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, 22 ದಿನಗಳ ಬಳಿಕ ವಾಪಸ್ ಪಡೆದಿದೆ. ‘ಸನ್ಮಾನಿತರ ಆಯ್ಕೆ ಹಿನ್ನೆಲೆಯ ಕುರಿತು ಪೊಲೀಸರಿಂದ ಮಾಹಿತಿ ಪಡೆಯಬೇಕಿತ್ತು. ಆದರೆ, ಕಾಲಾವಕಾಶದ ಕೊರತೆಯಿಂದ ಈ ಅಚಾತುರ್ಯವಾಗಿದೆ’ ಎಂದು ಸಬೂಬು ನೀಡಿದೆ.

ಸನ್ಮಾನ ಸಂದರ್ಭದಲ್ಲಿ ನೀಡಲಾದ ಪ್ರಮಾಣಪತ್ರ ಹಾಗೂ ಫಲಕವನ್ನು ಕೂಡಲೇ ಹಾಜರಾಗಿ ಹಿಂತಿರುಗಿಸುವಂತೆ ಅಶೋಕ ಅವರಿಗೆ ಸನ್ಮಾನ ಉಪ ಸಮಿತಿಯ ಸದಸ್ಯ ಕಾರ್ಯದರ್ಶಿ ಎಂ.ಡಿ. ಸುದರ್ಶನ್‌ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT