ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌.ಆರ್‌.ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮ

30ನೇ ವಾರ್ಡ್‌ನಲ್ಲಿ ‘ಬೂತ್‌ ಅಭಿಯಾನ’ ಉದ್ಘಾಟಿಸಿದ ಸಚಿವ ಎಸ್‌.ಟಿ.ಸೋಮಶೇಖರ್‌
Last Updated 4 ಜನವರಿ 2023, 16:28 IST
ಅಕ್ಷರ ಗಾತ್ರ

ಮೈಸೂರು: ‘ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ, ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಬೂತ್‌ ಮಟ್ಟದ ಕಾರ್ಯಕರ್ತರ ಪರಿಶ್ರಮ ಅತ್ಯಗತ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ನರಸಿಂಹರಾಜ ಕ್ಷೇತ್ರದ ಕ್ಯಾತಮಾರನಹಳ್ಳಿ 30ನೇ ವಾರ್ಡ್‌ನಲ್ಲಿ ‘ಬಿಜೆಪಿ ಬೂತ್‌ ವಿಜಯ ಅಭಿಯಾನ’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರ ನಿರಂತರ ಶ್ರಮ ಅಗತ್ಯ. ಇದಕ್ಕಾಗಿಯೇ ಬಿಜೆಪಿ ಬೂತ್‌ ಪ್ರಮುಖರನ್ನು ಗೌರವಿಸುವ ಅಭಿಯಾನ, ಸರ್ಕಾರದ ಅಭಿವೃದ್ಧಿ ಯೋಜನೆ ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದೆ‘ ಎಂದು ಅವರು ತಿಳಿಸಿದರು.

ಇಲ್ಲಿಯ 10 ಬೂತ್‌ಗಳ ಅಧ್ಯಕ್ಷರ ಮನೆಗೆ ಫಲಕ, ಪಕ್ಷದ ಬಾವುಟ ಸ್ಥಾಪಿಸುವ ಪ್ರಕ್ರಿಯೆಗೆ ಅಲ್ಲಿ ಅವರು ಸಾಂಕೇತಿಕ ಚಾಲನೆ ನೀಡಿದರು. ಕುಮಾರ್‌ ಹಾಗೂ ಮಂಜುನಾಥ್‌ ಅವರ ಮನೆಗಳಲ್ಲಿ ಫಲಕ, ಪತಾಕೆ ಸ್ಥಾಪಿಸಿ, ‘ಪಕ್ಷ ಸಂಘಟನೆಗಾಗಿ ಬೂತ್‌ ಮಟ್ಟದ ತಲಾ 12 ಮಂದಿ ಸದಸ್ಯರ ಸಮಿತಿ ಹೆಚ್ಚು ಶ್ರಮ ವಹಿಸಬೇಕು. ರಾಜ್ಯ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು’ ಎಂದು ತಿಳಿಸಿದರು.

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಹುಲ್‌ ಮುಂದೆ ತಲೆ ತಗ್ಗಿಸಲ್ವೇ?: ಕಾಂಗ್ರೆಸ್‌ ಪಕ್ಷದ ಮುಖಂಡರು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಹಾಗೂ ನಾಯಕರ ವಿರುದ್ಧ ನಿರಂತರ ಘನತೆಗೆ ಸಲ್ಲದ ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಅಗ್ಗದ ಟೀಕೆ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್‌ ನಾಯಕರು, ಪ್ರಧಾನಿ ಮೋದಿ ಮುಂದೆ ಅಗತ್ಯ ಗೌರವ ನೀಡಿ, ಗಾಂಭೀರ್ಯದಿಂದ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮುಂದೆ ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ತಲೆಬಗ್ಗಿಸಿ ನಿಲ್ಲುತ್ತಿಲ್ಲವೇ, ನಾವು ನೋಡಿಲ್ಲವೇ? ಪ್ರಾಯದಲ್ಲಿ ಇವರಿಗಿಂತ ಸಣ್ಣವರಾಗಿದ್ದರೂ ರಾಹುಲ್‌ ಮುಂದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಧೈರ್ಯ ಇದೆಯೇ’ ಎಂದು ಸಚಿವ ಸೋಮಶೇಖರ್‌ ಪ್ರಶ್ನಿಸಿದರು.

ಬೂಸ್ಟರ್‌ ಡೋಸ್‌ ತಗೊಳ್ಳಲಿ: ‘ಕೋವಿಡ್‌ಗೆ ಮುನ್ನ ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದರು. ಎರಡು ಬಾರಿ ಕೋವಿಡ್‌ ಬಾಧಿಸಿದ ಬಳಿಕ ಏನೇನೋ ಮಾತನಾಡುತ್ತಿದ್ದಾರೆ. ಇಂಜೆಕ್ಷನ್‌ ತಗೊಳ್ಳಿ ಎಂದಿದ್ದೆ. ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳಲಿ. ಬೇಕಿದ್ದರೆ ಸಚಿವ ಡಾ. ಸುಧಾಕರ್‌ ಅವರಲ್ಲಿ ಹೇಳಿ ಸಿದ್ದಾಮಯ್ಯ ಅವರ ಮನೆಗೇ ಬೂಸ್ಟರ್‌ ಡೋಸ್‌ ತಲುಪಿಸುತ್ತೇನೆ’ ಎಂದು ಸೋಮಶೇಖರ್‌ ಕಟಕಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, 30ನೇ ವಾರ್ಡ್‌ ಪಾಲಿಕೆ ಸದಸ್ಯೆ ಉಷಾ ನಾರಾಯಣಪ್ಪ ಲೋಲಪ್ಪ, ಬಿಜೆಪಿ ನಗರ ಘಡಕದ ಅಧ್ಯಕ್ಷ ಶ್ರೀವತ್ಸ, ಮಂಡಲ ಅಧ್ಯಕ್ಷ ಭಾನುಪ್ರಕಾಶ್‌, ಮಂಜುನಾಥ್‌, ಸೋಮಸುಂದರ್‌, ಗಿರಿಧರ್‌, ನಾರಾಯಣಪ್ಪ, ಪಕ್ಷದ ಕಾರ್ಯಕರ್ತರು, ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT