ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ಪ್ರಸಾದ್ ಅವರನ್ನು ಎಳೆದು ತಂದಿದ್ದ ‘ಚುನಾವಣಾ ರಾಜಕಾರಣ’!

Published 29 ಏಪ್ರಿಲ್ 2024, 13:19 IST
Last Updated 29 ಏಪ್ರಿಲ್ 2024, 13:19 IST
ಅಕ್ಷರ ಗಾತ್ರ

ಮೈಸೂರು: ಐದು ದಶಕಗಳವರೆಗೆ ಚುನಾವಣಾ ರಾಜಕಾರಣ ಮಾಡಿದ ಶ್ರೀನಿವಾಸ ಪ್ರಸಾದ್ ಈ ಭಾಗದಲ್ಲಿ ಎಲ್ಲ ವರ್ಗದವರ ಪ್ರೀತಿಗೆ ಭಾಜನವಾಗಿದ್ದರು.

ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುವುದಾಗಿ ಅವರು ಮೂರು ಬಾರಿ ಘೋಷಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶ ಅವರನ್ನು ಚುನಾವಣೆಯತ್ತ ಎಳೆದು ತಂದಿತ್ತು. ಕೊನೆಗೆ, ಇದೇ ವರ್ಷದ ಮಾರ್ಚ್‌ 17ರಂದು ನಿವೃತ್ತಿ ಘೋಷಿಸಿದ್ದರು. ವಯೋಸಹಜ ಅನಾರೋಗ್ಯ ಅವರನ್ನು ಬಾಧಿಸಿತ್ತು.

ಅಳಿಯಂದಿರಿಗೆ ಟಿಕೆಟ್ ಬಯಸಿದ್ದರು:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಅವರ ಅಳಿಯಂದಿರಾದ ಬಿ.ಹರ್ಷವರ್ಧನ್ ಅಥವಾ ಡಾ.ಮೋಹನ್‌ ಇಬ್ಬರಲ್ಲಿ ಒಬ್ಬರಿಗೆ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ, ಸಿಗಲಿಲ್ಲ. ಇದರಿಂದ ಬೇಸರಗೊಂಡಿದ್ದರು. ತಮ್ಮ ಮನೆಗೆ ಬಂದಿದ್ದ ಬಿಜೆಪಿ ನಾಯಕರ ಬಳಿ, ‘ಹರ್ಷವರ್ಧನ್‌ ಅವರನ್ನು ನೋಡಿಕೊಳ್ರಪ್ಪಾ’ ಎಂದು ಕೋರಿಕೊಂಡಿದ್ದರು.

ಸಿದ್ದರಾಮಯ್ಯಗೆ ಬೆಂಬಲ:

2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ ಅವರನ್ನು ಪ್ರಸಾದ್ ಬೆಂಬಲಿಸಿದರು.

2008ರಲ್ಲಿ ನಿವೃತ್ತಿಯಾಗುವ ಮನಸ್ಸು ಬದಲಿಸಿ ನಂಜನಗೂಡು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2013ರಲ್ಲಿ ಪುನಾರಾಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. 2017ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಎದುರು ಸೋತಾಗ, ಚುನಾವಣಾ ರಾಜಕಾರಣದಿಂದ ದೂರ ಇರುವುದಾಗಿ ಘೋಷಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸದೇ ಅಳಿಯ ಬಿ. ಹರ್ಷವರ್ಧನ್ ಅವರನ್ನು ನಂಜನಗೂಡಿನಿಂದ ಕಣಕ್ಕಿಳಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಬಿಜೆಪಿ ವರಿಷ್ಠರ ಒತ್ತಾಯದ ಮೇರೆಗೆ ಚಾಮರಾಜ ನಗರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಅಂಬೇಡ್ಕರ್ ತತ್ವಗಳಲ್ಲಿ ನಂಬಿಕೆ ಇಟ್ಟು ಪಾಲಿಸುತ್ತಿದ್ದರು. ಕಾಂಗ್ರೆಸ್, ಲೋಕಶಕ್ತಿ, ಜೆಡಿಯು, ಸಮತಾ, ಜೆಡಿಎಸ್, ಮತ್ತೆ ಕಾಂಗ್ರೆಸ್, ಬಿಜೆಪಿ ಹೀಗೆ... ಪಕ್ಷಾಂತರ ಮಾಡಿದ್ದರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ತಿರುಗಿ ಬೀಳುತ್ತಿದ್ದರು. ಬದನವಾಳು- ಉಮ್ಮತ್ತೂರು ಗಲಭೆಯ ಸಂದರ್ಭದಲ್ಲಿ ನೊಂದವರ ಪರ ಹೋರಾಡಿ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಓದು, ಅಧ್ಯಯನದಲ್ಲಿ ತೀವ್ರ ಆಸಕ್ತಿ ಅವರಿಗಿತ್ತು. ಗೌತಮ ಬುದ್ಧ, ಅಂಬೇಡ್ಕರ್ ಬಗ್ಗೆ ಓದಿಕೊಂಡಿದ್ದರು. ಅಶೋಕ ಸ್ಪೋರ್ಟ್ಸ್‌ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಸಿದ್ದಾರ್ಥ ಎಜುಕೇಷನ್ ಸೊಸೈಟಿ, ಬಿ.ಆರ್. ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌, ಅಶೋಕಪುರಂ ಸರ್ಕಾರಿ ಪ್ರಾಥಮಿಕ ಶಾಲಾ ಶ್ರೇಯೋಭಿವೃದ್ಧಿ ಸಮಿತಿಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದರು. ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾಗಿದ್ದರು. ಬೌದ್ಧ ಧರ್ಮದ ಬಗ್ಗೆ ಅಪಾರ ಒಲವು ಹೊಂದಿದ್ದರು.

ಅಮೆರಿಕ, ರಷ್ಯಾ, ಸೌತ್ ಈಸ್ಟ್ ದೇಶಗಳಿಗೆ ಪ್ರವಾಸ ಮಾಡಿದ್ದರು.

ಪಡೆದಿದ್ದ ಸ್ಥಾನಗಳು

* 1977-78– ಯುವ ಜನತಾ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ

* 1980- ಮೊದಲ ಬಾರಿ ಲೋಕಸಭೆಗೆ ಆಯ್ಕೆ, ಸಭೆಯ ಮುಂದೆ ಮಂಡಿಸಿದ ವಿಧೇಯಕಗಳ ಸಮಿತಿ ಸದಸ್ಯ, ಖಾಸಗಿ ನಿರ್ಣಯಗಳ ಸಮಿತಿ ಸದಸ್ಯ

* 1984- ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ

* 1984- 2ನೇ ಬಾರಿಗೆ ಲೋಕಸಭೆಗೆ ಆಯ್ಕೆ. ಹಕ್ಕುಬಾಧ್ಯತಾ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕ ಸಚಿವಾಲಯ ಸಮಲೋಚಮಾ ಸಮಿತಿ ಸದಸ್ಯ

* 1986- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

* 1989- 3ನೇ ಬಾರಿಗೆ ಲೋಕಸಭೆಗೆ ಆಯ್ಕೆ, ಸಾರ್ವಜನಿಕ ಉದ್ದಿಮೆ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕ ಸಮಾಲೋಚನಾ ಸಮಿತಿ ಸದಸ್ಯ

* 1991- 4ನೇ ಬಾರಿಗೆ ಲೋಕಸಭೆಗೆ ಆಯ್ಕೆ. ಅಂದಾಜು ಸಮಿತಿ, ಪ.ಜಾತಿ ಮತ್ತು ಬುಡಕಟ್ಟುಗಳ ಸಮಿತಿ, ಉಕ್ಕು ಮತ್ತು ಗಣಿ ಸಚಿವಾಲಯ ಸಮಾಲೋಚಾ ಸಮಿತಿ ಸದಸ್ಯ

* 1996, 1998- ಲೋಕಸಭಾ ಚುನಾವಣೆಯಲ್ಲಿ ಸೋಲು

* 1999- 5ನೇ ಬಾರಿಗೆ ಲೋಕಸಭೆಗೆ ಜೆಡಿಯು ಟಿಕೆಟ್ ಮೇಲೆ ಆಯ್ಕೆ. ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರಾಜ್ಯ ಸಚಿವ

* 2008, 2013- ಸತತ ಎರಡು ಬಾರಿ ನಂಜನಗೂಡಿನಿಂದ ವಿಧಾನಸಭೆಗೆ ಆಯ್ಕೆ. 2ನೇ ಬಾರಿಗೆ ಗೆದ್ದಾಗ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

* 2017- ಸಂಪುಟದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿ ಸೇರ್ಪಡೆ, ನಂಜನಗೂಡು ಉಪ ಚುನಾವಣೆಯಲ್ಲಿ ಸೋಲು.

* 2019- 6ನೇ ಬಾರಿಗೆ ಲೋಕಸಭೆಗೆ ಬಿಜೆಪಿ ಟಿಕೆಟ್ ಮೇಲೆ ಆಯ್ಕೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ, ಅರ್ಜಿಗಳ ಸಮಿತಿ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT