ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ವಿಮಾ ಆಸ್ಪತ್ರೆಗೆ ಬೇಕಿದೆ ‘ಚಿಕಿತ್ಸೆ’

ತಿ.ನರಸೀಪುರ: ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಚಿಕಿತ್ಸಾಲಯ; ಸಿಬ್ಬಂದಿ ಕೊರತೆ
Last Updated 20 ಜೂನ್ 2022, 4:01 IST
ಅಕ್ಷರ ಗಾತ್ರ

ತಿ.ನರಸೀಪುರ: ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ತಾಲ್ಲೂಕು ಕೇಂದ್ರದಲ್ಲಿರುವ ಕಾರ್ಮಿಕ ವಿಮಾ ಚಿಕಿತ್ಸಾಲಯ ಮೇಲ್ದರ್ಜೆಗೇರಿಸಿ ಅಗತ್ಯ ಮೂಲಸೌಲಭ್ಯ ಒದಗಿಸುವ ಅಗತ್ಯವಿದೆ.

ಪಟ್ಟಣದ ಜೋಡಿ ರಸ್ತೆಯ ಕೆಎಸ್ಐಸಿ ಆವರಣದಲ್ಲಿ ಬಾಡಿಗೆ ಕಟ್ಟಡದಲ್ಲಿ ವಿಮಾ ಚಿಕಿತ್ಸಾಲಯವಿದೆ. ಪ್ರತಿ ದಿನ 35ರಿಂದ 50 ರೋಗಿಗಳು ಕಾರ್ಮಿಕ ವಿಮಾ ಚಿಕಿತ್ಸಾಲಯಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಅನೇಕರು ಇಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ವಿಮಾ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಆದರೆ, ಇಲ್ಲಿ ಕಾಯಂ ವೈದ್ಯರಿಲ್ಲ. ಚಿಕಿತ್ಸಾಲಯಕ್ಕೆ ಸ್ವಂತ ಕಟ್ಟಡವೂ ಇಲ್ಲದಾಗಿದೆ. ಮತ್ತೊಂದೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್‌ಗಳು, ಸೌರ ವಿದ್ಯುತ್ ಘಟಕ, ಸುಗಂಧ ತಯಾರಿಕಾ ಕಾರ್ಖಾನೆ, ಸಮೀಪದ ತಾಯೂರಿನಲ್ಲಿ ಗ್ಲೂಕೋ ಕಾರ್ಖಾನೆ ಹಾಗೂ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು, ಇತರೆ ಸಂಸ್ಥೆಗಳ ಸಹಸ್ರಾರು ನೌಕರರು ಪ್ರತಿ ತಿಂಗಳು ಕಾರ್ಮಿಕರ ವಿಮಾ ನಿಧಿಗೆ ಹಣ ಪಾವತಿಸುತ್ತಿದ್ದಾರೆ. ನೌಕರರು ಮಾತ್ರವಲ್ಲದೇ ಅವರ ಕುಟುಂಬಕ್ಕೂ ವೈದ್ಯಕೀಯ ಚಿಕಿತ್ಸಾ ಸೌಲಭ್ಯವಿರುವುದರಿಂದ ಸುಮಾರು 40 ಸಾವಿರ ಮಂದಿಗೆ ಚಿಕಿತ್ಸಾ ಸೌಲಭ್ಯ ಸಿಗಬೇಕಿದೆ.

ಕಾಯಂ ವೈದ್ಯರಿಲ್ಲದ ಕಾರಣ ಪಾಳಿ ಆಧಾರದ ಮೇಲೆ ಜಿಲ್ಲಾ ಕಾರ್ಮಿಕರ ಆಸ್ಪತ್ರೆಯಿಂದ ವೈದ್ಯರನ್ನು ನಿಯೋಜಿಸಲಾಗುತ್ತಿದೆ. ಆ ವೈದ್ಯರು ಬಂದು ಇಲ್ಲಿ ಕರ್ತವ್ಯ ಮಾಡುತ್ತಿದ್ದಾರೆ.

‘ಚಿಕಿತ್ಸಾಲಯದಲ್ಲಿ ಕಾಯಂ ವೈದ್ಯರನ್ನು ನೇಮಕ ಮಾಡಬೇಕು. ಅಲ್ಲದೇ ರಕ್ತದೊತ್ತಡ, ಮಧುಮೇಹಕ್ಕೆ ಸಕಾಲಕ್ಕೆ ಔಷಧ ಸಿಗಬೇಕು. ಔಷಧಗಳು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹೆಚ್ಚಿನ ಚಿಕಿತ್ಸಾ ಪರೀಕ್ಷೆಗಳು ಹಾಗೂ ಸೌಲಭ್ಯಗಳು ಸಿಗಬೇಕಾದರೆ ಚಿಕಿತ್ಸಾಲಯ ಮೇಲ್ದರ್ಜೆಗೇರಬೇಕು’ಎಂದು ಕಾರ್ಮಿಕ ಸೋಮಶೇಖರ್ಆಗ್ರಹಿಸುತ್ತಾರೆ.

‘ಪ್ರಸ್ತುತ ಇರುವ ಚಿಕಿತ್ಸಾಲಯಕ್ಕೆ ಸೂಕ್ತ ಕಟ್ಟಡವನ್ನು ಬಾಡಿಗೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಪರಿಹರಿಸಲು ಪ್ರಸ್ತಾವನೆ ಕಳುಹಿಸಿದ್ದೇವೆ. ಸ್ವಂತ ಕಟ್ಟಡ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡಬೇಕು. ನಿರ್ವಹಣೆ ಮಾತ್ರ ರಾಜ್ಯ ಸರ್ಕಾರ ಮಾಡುತ್ತದೆ. ಸ್ವಂತ ಕಟ್ಟಡಕ್ಕೂ ಪ್ರಸ್ತಾವನೆ ನೀಡಿದ್ದೇವೆ’ ಎಂದು ಚಿಕಿತ್ಸಾಲಯದ ಮೇಲ್ವಿಚಾರಣೆ ವಹಿಸಿಕೊಂಡಿರುವ ವೈದ್ಯಾಧಿಕಾರಿ ಡಾ.ಶಿವಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT