ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಿತ್ತೊಗೆಯಿರಿ: ‘ಮುಖ್ಯಮಂತ್ರಿ’ ಚಂದ್ರು

Published 24 ಏಪ್ರಿಲ್ 2024, 16:19 IST
Last Updated 24 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಮೈಸೂರು: ‘ಬಹುತ್ವ ಭಾರತ ಉಳಿಸಿಕೊಳ್ಳಲು, ಭ್ರಷ್ಟಾಚಾರ ನಿರತ, ಬೆಲೆಯೇರಿಕೆ ತಡೆಯದ ಬಿಜೆಪಿ ಸರ್ಕಾರವನ್ನು ಜನರು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮನವಿ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಭದ್ರತೆಯನ್ನೇ ಚುನಾವಣೆ ವಿಷಯವಾಗಿ ಬಳಸಿಕೊಳ್ಳುವ ಬಿಜೆಪಿ ಅವಧಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಅನ್ಯಾಯವಾಗಿ ಸತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಯೋಧರನ್ನು ನೇಮಕ ಮಾಡುವ ಕಳಪೆ ಯೋಜನೆ ‘ಅಗ್ನಿವೀರ್‌’ ಜಾರಿ ಮಾಡಲಾಗಿದೆ’ ಎಂದು ಹರಿಹಾಯ್ದರು.

‘ಬಿಲ್ಕಿಸ್ ಬಾನು ಎಂಬ ಗರ್ಭಿಣಿಯನ್ನು ಅತ್ಯಾಚಾರ ಮಾಡಿದವರಿಗೆ ಕ್ಷಮಾದಾನ ಕೊಡಿಸಿದ್ದ ಬಿಜೆಪಿ, ರಾಜ್ಯದಲ್ಲಿ ತಾನು ಮಹಿಳೆಯ ರಕ್ಷಕ ಎಂಬಂತೆ ಹಾರಾಡುತ್ತಿದೆ. ನೋಟು ಅಮಾನ್ಯೀಕರಣ, ಚುನಾವಣೆ ಬಾಂಡ್ ಹಗರಣ ಮೂಲಕ ದೇಶವನ್ನೇ ಸಂಕಷ್ಟಕ್ಕೆ ದೂಡಿ, ಲೀಗಲ್ ಭ್ರಷ್ಟಾಚಾರ ನಡೆಸಿದೆ’ ಎಂದು ದೂರಿದರು.

‘ದೆಹಲಿ‌ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಲ್ಲಿರಿಸಿ, ಮಧುಮೇಹ ಸಮಸ್ಯೆಗೆ ಇನ್ಸುಲಿನ್ ಕೂಡ ನೀಡದೇ ಶೋಷಿಸಲಾಗುತ್ತಿದೆ. ಇಂಥ ರಾಕ್ಷಸ ಪ್ರವೃತ್ತಿಯ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿ ಇರಬೇಕೇ ಅಥವಾ ಬೇಡವೇ ಎಂದು ತೀರ್ಮಾನಿಸುವ ತುರ್ತು ಈ ಚುನಾವಣೆ’ ಎಂದರು.

‘ಯದುವೀರ್ ಒಡೆಯರ್ ಅವರು ತಮ್ಮ ರಾಜಸ್ಥಾನದ ಮಾವನ ಸಮಸ್ಯೆಗೋ ಅಥವಾ ಇಲ್ಲಿನ ಆಸ್ತಿ ವ್ಯಾಜ್ಯದ ಒತ್ತಡಕ್ಕೋ ಅಭ್ಯರ್ಥಿಯಾಗಿ ಇಳಿದಿದ್ದಾರೆ ಎನ್ನಿಸುತ್ತದೆ. ಇವರಿಂದ ಜಿಲ್ಲೆಯ ಜನ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಅಭ್ಯರ್ಥಿ, ಜನರ ಕಷ್ಟಕ್ಕೆ ಸ್ಪಂದಿಸುವ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಜನರು ಬಲ ನೀಡಬೇಕು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಆಮ್ ಅದ್ಮಿ‌ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಮಾಲವಿಕ ಗುಬ್ಬಿವಾಣಿ, ಸೋಸಲೆ ಸಿದ್ದರಾಜು, ಜಿಲ್ಲಾ ಘಟಕದ ಅಧ್ಯಕ್ಷ ಎಲ್.ರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT