ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ದೂರ: ತಜ್ಞ ವೈದ್ಯರ ಸಲಹೆ

‘ಪ್ರಜಾವಾಣಿ’ ಫೋನ್‌ಇನ್‌ ಕಾರ್ಯಕ್ರಮ
Last Updated 3 ಫೆಬ್ರುವರಿ 2023, 9:06 IST
ಅಕ್ಷರ ಗಾತ್ರ

ಮೈಸೂರು: ಬದಲಾದ ಜೀವನಶೈಲಿಯ ಕಾರಣದಿಂದಾಗಿ ವಿವಿಧ ರೀತಿಯ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರೂ ಈ ತೊಂದರೆಗೆ ತುತ್ತಾಗುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಮತ್ತು ಕ್ಯಾನ್ಸರ್‌ಕಾರಕ ಜಂಕ್‌ಫುಡ್‌ಗಳಿಂದ ದೂರವಿರುವುದರಿಂದ ಸಮಸ್ಯೆಯಿಂದ ಪಾರಾಗಬಹುದು.

‘ಪ್ರಜಾವಾಣಿ’ ಕಚೇರಿಯಲ್ಲಿ ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು ನೀಡಿದ ಪ್ರಮುಖ ಸಲಹೆಗಳಿವು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ‘ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯ ಸೀನಿಯರ್ ಕನ್ಸಲ್ಟಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಅವಿನಾಶ್ ಸಿ.ಬಿ., ಕನ್ಸಲ್ಟಂಟ್ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ಚೈತ್ರಾ ಕಟಕೋಳ್ ಮತ್ತು ಸರ್ಜಿಕಲ್ ಆಂಕಾಲಜಿಸ್ಟ್ ಡಾ.ನಿಶ್ಚಲ್‌ರಾಜ್, ಜಿಲ್ಲೆಯ ವಿವಿಧೆಡೆಯ ಓದುಗರಿಂದ ಬಂದ ಕರೆಗಳಿಗೆ ಸಮಾಧಾನದಿಂದ ಉತ್ತರಿಸಿದರು.

ಈ ರೋಗ ಬರಲು ಕಾರಣಗಳೇನು, ಲಕ್ಷಣಗಳೇನು, ಆಗುವ ತೊಂದರೆಗಳೇನು, ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಬರುತ್ತದೆಯೇ, ಕ್ಯಾನ್ಸರ್‌ ರೋಗಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳಾವುವು, ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ... ಮೊದಲಾದ ಪ್ರಶ್ನೆಗಳಿಗೆ ಮಾಹಿತಿಪೂರ್ಣ ಉತ್ತರಗಳನ್ನು ನೀಡಿದರು. ಆತಂಕ ನಿವಾರಿಸುವ ಪ್ರಯತ್ನ ಮಾಡಿದರು. ನಿರ್ದಿಷ್ಟ ಪ್ರಶ್ನೆಗಳಿಗೆ ತಜ್ಞ ವೈದ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಿದರು.

ಹೆಚ್ಚಿನ ಕರೆಗಳು ಮಹಿಳೆಯರಿಂದ ಬಂದವು, ಅವು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಪ್ರಶ್ನೆಗಳೇ ಆಗಿದ್ದವು. ಇದು ಜಿಲ್ಲೆಯಲ್ಲಿ ಸ್ತನ ಕ್ಯಾನ್ಸರ್‌ ಸಮಸ್ಯೆ ಹೆಚ್ಚುತ್ತಿರುವುದನ್ನು ತೆರೆದಿಟ್ಟಿತು.

‘ಪೋಷಕರಿಗೆ ಈ ರೋಗ ಬಂದಿತ್ತು, ನಮಗೂ ಬರಬಹುದೇ?’ ಎಂಬ ದುಗುಡವನ್ನೂ ಹಲವರು ತೋಡಿಕೊಂಡರು. ‘ನಿರ್ದಿಷ್ಟ ಪರೀಕ್ಷೆಗೆ ಒಳಗಾಗುವುದರಿಂದ ಅನುಮಾನ ಪರಿಹರಿಸಿಕೊಳ್ಳಬಹುದು’ ಎಂಬ ಸಲಹೆಯು ವೈದ್ಯರಿಂದ ಬಂತು.

‘ಮಾನವನ ದೇಹದಲ್ಲಿ ಎಷ್ಟು ಅಂಗಗಳಿವೆಯೋ ಅದಕ್ಕೆಲ್ಲದಕ್ಕೂ ಸಂಬಂಧಿಸಿದ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. 1ರಿಂದ 3ನೇ ಹಂತದಲ್ಲಿದ್ದರೆ ಅತ್ಯಾಧುನಿಕ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಪರಿಹರಿಸಲು ಸಾಧ್ಯವಿದೆ. ಆದರೆ, 4ನೇ ಹಂತಕ್ಕೆ ಹೋಗಿದ್ದರೆ, ಗುಣಪಡಿಸುವುದು ಕಷ್ಟ. ಆದರೆ, ಚಿಕಿತ್ಸೆ ನೀಡುತ್ತಾ ನಿರ್ವಹಿಸಬಹುದು. 4ರಿಂದ 5 ವರ್ಷದವರೆಗೆ ಬದುಕುಳಿದವರೂ ಇದ್ದಾರೆ. ಹೀಗಾಗಿಯೇ, ಆರಂಭಿಕ ಹಂತದಲ್ಲಿಯೇ ಸಮಸ್ಯೆಯನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಗಂಭೀರ ಸ್ಥಿತಿ ತಲುಪುವುದನ್ನು ತಡೆಯಬಹುದು. ಆತಂಕಕ್ಕೆ ಒಳಗಾಗದೇ, ತಜ್ಞ ವೈದ್ಯರನ್ನು ಕಾಣಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಚಿಕಿತ್ಸೆ ಹೊಂದುವುದಕ್ಕೂ ಅವಕಾಶವಿದೆ’ ಎಂದು ವೈದ್ಯರು ಸಲಹೆ ನೀಡಿದರು.

‘ಕ್ಯಾನ್ಸರ್‌ ಬಗ್ಗೆ ಮಹಿಳೆಯರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ತಜ್ಞ ವೈದ್ಯರನ್ನು ಸಂದರ್ಶಿಸಬೇಕು. ಎಲ್ಲದಕ್ಕೂ ಚಿಕಿತ್ಸೆ ಲಭ್ಯವಿದೆ. ನಿರ್ದಿಷ್ಟ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಯು ತೀವ್ರಗೊಳ್ಳುವುದನ್ನು ತಪ್ಪಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT