ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು

Last Updated 12 ಸೆಪ್ಟೆಂಬರ್ 2018, 5:57 IST
ಅಕ್ಷರ ಗಾತ್ರ

ಹಂಪಾಪುರ (ಎಚ್‌.ಡಿ.ಕೋಟೆ): ಗೌರಿ ಗಣೇಶನ ಹಬ್ಬದಲ್ಲಿ ತವರು ಮನೆಯಿಂದ ಮಹಿಳೆಯರಿಗೆ ಬಾಗಿನ ಅರ್ಪಿಸುವ ಸಂಪ್ರದಾಯ ಇರುವುದರಿಂದ ಬಿದಿರಿನ ಮೊರಕ್ಕೆ ಬೇಡಿಕೆ ಹೆಚ್ಚಿದೆ.

ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ಅನೇಕರು ಮೊರಗಳನ್ನು ಖರೀದಿಸಿದರು. ಇತರೆ ದಿನಗಳಲ್ಲಿ ಮೊರಗಳನ್ನು ಕೇಳುವವರೇ ಇರುವುದಿಲ್ಲ. ಆ ವೇಳೆ ಒಂದು ಜೊತೆಗೆ ₹80 ಬೆಲೆ ಇರುತ್ತದೆ. ಆದರೆ, ಹಬ್ಬದ ಅಂಗವಾಗಿ ವ್ಯಾಪಾರಿಗಳು ಬೆಲೆ ಏರಿಸಿದ್ದು ₹100 ರಿಂದ ₹120 ಕೊಟ್ಟು ಖರೀದಿಸಿದರು.

‘ಇತ್ತೀಚಿನ ದಿನಗಳಲ್ಲಿ ದವಸ ಧಾನ್ಯಗಳನ್ನು ಕೇರಲು ಪ್ಲಾಸ್ಟಿಕ್‌ ಮೊರಗಳ ಬಳಕೆ ಹೆಚ್ಚಿದ್ದರೂ ಗೌರಿಹಬ್ಬದಲ್ಲಿ ಮಾತ್ರ ಬಿದಿರಿನ ಮೊರಕ್ಕೆ ಬೇಡಿಕೆ ಇರುತ್ತದೆ. ಬಿದಿರಿನ ಮೊರದಲ್ಲಿ ಬಾಗಿನ ನೀಡುವುದರಿಂದ ಮಗಳು ಮುತ್ತೈದೆಯಾಗಿ ಧೀರ್ಘಕಾಲ ಬಾಳಿ ಬದುಕುತ್ತಾಳೆ. ಅವರ ದಾಂಪತ್ಯ ಗಟ್ಟಿಯಾಗಿರುತ್ತದೆ ಎನ್ನುವ ನಂಬಿಕೆ ಇರುವುದರಿಂದ ಬೇಡಿಕೆ ಹೆಚ್ಚಿರುತ್ತದೆ’ ಎನ್ನುತ್ತಾರೆ ಮೊರದ ತಯಾರಕಿ ಗೌರಮ್ಮ.

‘ಬಿದಿರು ಬೆಳೆಯುವ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಒಂದು ಬಿದಿರಿಗೆ ₹200ರಿಂದ ₹ 250 ಕೊಟ್ಟು ಖರೀದಿಸುತ್ತೇವೆ. ಒಂದರಲ್ಲಿ ಆರರಿಂದ ಏಳು ಮೊರಗಳನ್ನು ತಯಾರಿಸುತ್ತೇವೆ. ಹಬ್ಬದ ವೇಳೆಯಲ್ಲಿ ಸ್ವಲ್ಪ ಕಾಸು ನೋಡುತ್ತೇವೆ’ ಎಂದು ಅವರು ಹೇಳುತ್ತಾರೆ.

ಹಿಂದೆ ತಾಲ್ಲೂಕಿನ ಜಿ.ಎಂ.ಹಳ್ಳಿ, ಸಿದ್ದಾಪುರ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊರ ತಯಾರಿಸುತ್ತಿದ್ದರು. ಇಂದು ಆ ಗ್ರಾಮಗಳಲ್ಲಿ ಬಿದಿರಿನ ಮೊರ ತಯಾರಕರೇ ಇಲ್ಲವಾಗಿದ್ದಾರೆ. ಪ್ಲಾಸ್ಟಿಕ್ ಮೊರದ ಹಾವಳಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬಿದಿರಿನ ಮೊರ ತಯಾರಕರು ಕಸುಬನ್ನು ತೊರೆಯುತ್ತಿದ್ದಾರೆ. ಗೌರಿ ಹಬ್ಬದಲ್ಲಷ್ಟೇ ಅವುಗಳಿಗೆ ಬೇಡಿಕೆ ಇರುವುದರಿಂದ ಕೆಲ ಮಂದಿ ಮಾತ್ರ ಸಿದ್ಧಪಡಿಸುತ್ತಾರೆ. ಹೀಗೇ ಆದರೆ ಸಾಂಪ್ರದಾಯಿಕ ಕಸುಬು ಮೂಲೆಗುಂಪಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್‌.

ಬಾಗಿನದಲ್ಲಿ ಏನೆಲ್ಲಾ ಇರಬೇಕು

ಇಂದು ಗೌರಿವ್ರತ.ಹೆಣ್ಣು ಮಕ್ಕಳಿಗೆ ಸಕಲ ಸೌಭಾಗ್ಯ ನೀಡುವವಳು ಗೌರಿ.ತಾವರೆ, ಜಾಜಿ, ಮಲ್ಲಿಗೆ, ಗೌರಿ ಹೂ, ಕೇದಿಗೆ ಹೂ, ಬಿಲ್ವ ಪತ್ರೆ, ತುಳಸಿ, ದೊಡ್ಡ ಪತ್ರೆ, ದವನ ಸೇರಿದಂತೆ ಹಲವು ಪತ್ರೆಗಳು ಗೌರಿಪೂಜೆಗೆ ಶ್ರೇಷ್ಠ. ಪೂಜೆಯ ನಂತರ ಮತ್ತೈದೆಯರಿಗೆ ಬಾಗಿನ ಸಮರ್ಪಣೆ ಮಾಡುವುದು ಗೌರಿ ಹಬ್ಬದ ವಿಶೇಷ.

ತವರಿನಿಂದ ಬಂದ ಹೆಣ್ಣುಮಕ್ಕಳಿಗೆ ನೀಡುವ ಸಂಪತ್ತೇ ಬಾಗಿನ. ಇದರಲ್ಲಿ ಅರಿಶಿನ, ಸಿಂಧೂರ, ಕನ್ನಡಿ, ಚಾಚಣಿಕೆ, ಕಾಡಿಗೆ, ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಕಡಲೆಬೇಳೆ, ವೀಳ್ಯದ ಎಲೆ, ಅಡಿಕೆ, ತೆಂಗಿನಕಾಯಿ,‌ ಐದು ರೀತಿಯ ಹಣ್ಣು, ಬೆಲ್ಲ, ಬಳೆ, ವಸ್ತ್ರ ಇರುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಬಾಗಿನಲ್ಲಿರುವ ವಸ್ತುಗಳು ಬದಲಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT