ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕೈಪಿಡಿ: ಶಿಕ್ಷಕರಿಗೆ ಮಾತ್ರ ವಿತರಣೆ

Published 1 ಫೆಬ್ರುವರಿ 2024, 6:07 IST
Last Updated 1 ಫೆಬ್ರುವರಿ 2024, 6:07 IST
ಅಕ್ಷರ ಗಾತ್ರ

ಮೈಸೂರು/ ಹುಣಸೂರು: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯನ್ನು ಟಾಪ್‌ 5ರೊಳಗೆ ತರಲು ಶಾಲಾ ಶಿಕ್ಷಣ ಇಲಾಖೆಯು ಮುಂದಾಗಿದೆ. 

ವಿದ್ಯಾರ್ಥಿಗಳ ವಿಷಯಾವಾರು ಕಲಿಕೆಗೆ ‘ಕೈಪಿಡಿ’ಯನ್ನು ಪ್ರತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ರೂಪಿಸಿದೆ. ಆದರೆ, ‘ಇ–ಪ್ರತಿ’ಯಷ್ಟೇ ವಿದ್ಯಾರ್ಥಿಗಳಿಗೆ ತಲುಪಿದೆ.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಹಾಗೂ ಮೊಬೈಲ್‌ ರಹಿತರಿಗೆ ಕೈಪಿಡಿಗಳು ತಲುಪಿಲ್ಲ. ಕೇವಲ ಶಾಲಾ ಶಿಕ್ಷಕರಿಗೆ ಮಾತ್ರ ಹಂಚಲಾಗಿದೆ. ಗುಣಮಟ್ಟದಿಂದ ಕೂಡಿರುವ ಕೈಪಿಡಿಗಳು ವಿದ್ಯಾರ್ಥಿಗಳಿಗೂ ತಲುಪಬೇಕು ಎಂಬುದು ಜನಪ್ರತಿನಿಧಿಗಳು ಹಾಗೂ ಪೋಷಕರ ಒತ್ತಾಯ.

ಹುಣಸೂರಿನಲ್ಲಿ ‘ಸಂಪನ್ಮೂಲ ಕೈಪಿಡಿ’, ಮೈಸೂರು ಗ್ರಾಮಾಂತರ ವಲಯದಲ್ಲಿ ‘ಸಂಜೀವಿನಿ’, ಉತ್ತರ ವಲಯದಲ್ಲಿ ‘ಸುಗಮ’ ಸೇರಿದಂತೆ ಹೀಗೆ ಒಂದೊಂದು ತಾಲ್ಲೂಕಿನಲ್ಲಿ ಕೈಪಿಡಿಗಳಿಗೆ ಭಿನ್ನ ಹೆಸರಿಡಲಾಗಿದೆ. ಹುಣಸೂರಿನಲ್ಲಿ ಎಲ್ಲ 4,229 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಲಾಗಿದ್ದರೆ, ಮೈಸೂರು ಗ್ರಾಮಾಂತರ ವಲಯದಲ್ಲಿ ಶಿಕ್ಷಕರಿಗೆ ಮಾತ್ರವೇ ಕೈಪಿಡಿ ನೀಡಲಾಗಿದೆ.

ಪ್ರತಿ ವಿದ್ಯಾರ್ಥಿಗೂ ನೀಡಿ: ‘ಶಾಲೆಗೊಂದು ಕೈ‍‍ಪಿಡಿ ನೀಡುವುದರಿಂದ ಪರಿಣಾಮಕಾರಿ ಕಲಿಕೆ ಸಿಗುವುದಿಲ್ಲ. ಪ್ರತಿ ವಿದ್ಯಾರ್ಥಿಗೂ ಇದು ಲಭ್ಯವಾಗವೇಕು. ನಂತರ ಶಾಲಾ ಗ್ರಂಥಾಲಯದಲ್ಲಿ ಸಂಗ್ರಹಿಡಬೇಕು. ಅದು ಮುಂದಿನ ಸಾಲಿನ ವಿದ್ಯಾರ್ಥಿಗೆ ಉಪ‍ಯೋಗವಾಗುತ್ತದೆ’ ಎನ್ನುತ್ತಾರೆ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ.

‘ಶಿಕ್ಷಣ ಇಲಾಖೆಯ ವತಿಯಿಂದ ಮುದ್ರಣವಾಗಿಲ್ಲ. ದಾನಿಗಳ ಸಹಾಯದಿಂದ ಮುದ್ರಿಸಿ ಶಾಲೆಗಳಿಗೆ ಹಂಚಲಾಗುತ್ತಿದೆ. ಈಗಾಗಲೇ ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೈಪಿಡಿಯನ್ನು ಓದಿ, ಅಭ್ಯಾಸವನ್ನು ವಿದ್ಯಾರ್ಥಿಗಳು ‍ಪೂರ್ಣಗೊಳಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಕಳೆದ ತಿಂಗಳಿಂದಷ್ಟೇ ಹಂಚಿಕೆ ನಡೆದಿದೆ’ ಎನ್ನುತ್ತಾರೆ ಶಿಕ್ಷಕರು.

‘ಕಳೆದ ಬಾರಿ ಶೇ 89.75 ಫಲಿತಾಂಶವಷ್ಟೇ ಸಿಕ್ಕಿದೆ. ಅನುದಾನಿತ ಶಾಲೆಗಳು ನಿರೀಕ್ಷೆಯಷ್ಟು ಸಾಧನೆ ಮಾಡದಿರುವುದು ಕುಸಿತಕ್ಕೆ ಕಾರಣ ಎನ್ನಲಾಗಿತ್ತು. ವಿದ್ಯಾರ್ಥಿಗಳ ಸಾಮರ್ಥ್ಯದ ಆಧಾರದಲ್ಲಿ ಇದೀಗ ಕೈಪಿಡಿ ಕಲಿಕೆ ಹಾಗೂ ಪುನರಾವರ್ತನೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳುತ್ತಾರೆ.

‘ಕೈಪಿಡಿಯನ್ನು ಇದೇ ಮೊದಲ ಬಾರಿಗೆ ದಾನಿಗಳ ಸಹಾಯದಿಂದ ರೂಪಿಸಲಾಗಿದೆ. ತಡವಾಗಿದ್ದರೂ ಕೈಪಿಡಿಯ ಸಿದ್ಧತೆಗಾಗಿ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಶ್ರಮಿಸಿದ್ದಾರೆ. ಶಾಲಾ ಪಠ್ಯ ಬೋಧನೆಗೆ ಪೂರಕವಾಗಿ ಸಿದ್ಧಗೊಳಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್‌.ಕೆ.ಪಾಂಡು ಹೇಳಿದರು.

‘ಹುಣಸೂರಿನಲ್ಲಿ ಶಾಸಕರ ಧನ ಸಹಾಯದಿಂದ ಎಲ್ಲ ಮಕ್ಕಳಿಗೂ ಹಂಚಲಾಗಿದೆ. ಇತರೆಡೆ ಶಾಲೆಗಳಿಗೆ ಮಾತ್ರ ನೀಡಲಾಗಿದೆ. ಸಾಫ್ಟ್‌ಕಾಪಿಯ ಜೆರಾಕ್ಸ್‌ ಮಾಡಿಸಿ, ಕಲಿಕೆಗೆ ನೀಡಲಾಗಿದೆ. ಮೈಸೂರಿನಲ್ಲೂ ದಾನಿಗಳಿಂದ ಮುದ್ರಿಸಲಾಗಿದೆ’ ಎಂದರು.

ಮೈಸೂರು ಗ್ರಾಮಾಂತರ ವಲಯದ ಬಿಇಒ ಕಚೇರಿ ಹೊರತಂದಿರುವ ‘ಸಂಜೀವಿನಿ’ ಕೈಪಿಡಿ
ಮೈಸೂರು ಗ್ರಾಮಾಂತರ ವಲಯದ ಬಿಇಒ ಕಚೇರಿ ಹೊರತಂದಿರುವ ‘ಸಂಜೀವಿನಿ’ ಕೈಪಿಡಿ
ದಾನಿಗಳಿಂದ ಮುದ್ರಣ ವಿದ್ಯಾರ್ಥಿಗಳಿಗೆ ಇ–ಪ್ರತಿ ಎಲ್ಲರಿಗೂ ನೀಡಲು ಒತ್ತಾಯ
‘ಪುಸ್ತಕ ನೇರ ನೀಡಿದರೆ ಹೊರೆ’
‘ಎಲ್ಲ ಮಕ್ಕಳಿಗೆ ‍ಪುಸ್ತಕ ನೀಡಿದರೆ ಅವರಿಗೆ ಅಭ್ಯಾಸ ಮಾಡಿಸುವುದು ಕಷ್ಟ. ಈಗಾಗಲೇ ಪಠ್ಯ ಬೋಧನೆಯನ್ನೂ ಮಾಡಲಾಗಿರುತ್ತದೆ. ಪುಸ್ತಕ ನೇರವಾಗಿ ನೀಡಿದರೆ ಹೊರೆಯಾಗುತ್ತದೆ. ಆದ್ದರಿಂದ ಶಿಕ್ಷಕರಿಗೆ ಮಾತ್ರ ಕೈಪಿಡಿ ನೀಡಿ ಅಭ್ಯಾಸ ಮಾಡಿಸಲಾಗುತ್ತದೆ. ಇಲಾಖೆಯ ಅನುದಾನದಿಂದ ಇವುಗಳನ್ನು ಮುದ್ರಿಸಿಲ್ಲ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್‌.ಕೆ.ಪಾಂಡು ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದರು. ‘ಜಿಲ್ಲೆಯಲ್ಲಿ 40333 ಮಕ್ಕಳು ಮಾರ್ಚ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು ಕಲಿಕೆಯಲ್ಲಿ ಹಿಂದುಳಿದಿರುವ 9732 ಮಕ್ಕಳಿಗೆ ಕೈಪಿಡಿಯ ಸಹಾಯದಿಂದ ಅಭ್ಯಾಸ ಮಾಡಲಾಗುತ್ತಿದೆ. ಎಲ್ಲ ಶಿಕ್ಷಕರಿಗೂ ವಿಶೇಷ ಕಾಳಜಿ ವಹಿಸಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕೈಪಿಡಿಯಲ್ಲೇನಿದೆ?

  • ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಪುಸ್ತಕ

  • ವಿಷಯಾವಾರು ವಿಂಗಡಣೆ

  • ಪ್ರತ್ಯೇಕ ಮಾಧ್ಯಮದಲ್ಲಿ ಮುದ್ರಣ

  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸುಲಭರೂಪದ ಮಾಹಿತಿ

  • ಅಧ್ಯಯನ ಅಭ್ಯಾಸದಿಂದ ಶೇ 60 ಅಂಕ ಗಳಿಕೆಯ ನಿರೀಕ್ಷೆ

  • ವಿಷಯ ಗ್ರಹಿಕೆಯ ಜೊತೆಗೆ ಬರಹ ಕೌಶಲ ಸುಧಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT