ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು?: ಎಚ್‌.ಡಿ.ಕುಮಾರಸ್ವಾಮಿ

ಬಸ್‌ ನಿಲ್ದಾಣಕ್ಕೆ ವಿವಾದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ– ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 18 ನವೆಂಬರ್ 2022, 7:32 IST
ಅಕ್ಷರ ಗಾತ್ರ

ಮೈಸೂರು: ‘ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು? ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ. ಸಂಸದರು ಕಣ್ಣೀರು ಹಾಕಿಸಿರುವುದನ್ನು ಗಮನಿಸಿದ್ದೇನೆ.‌ ಇವರಿಗೆ ಮತ ನೀಡಿದ ಜನರ ಕತೆ ಏನು? ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಪಂಚರತ್ನ ಯಾತ್ರೆಗೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿ, ಪಕ್ಷದ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಸ್‌ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು,‘ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡಹುವ ಕೆಲಸ ಮಾಡಬೇಡಿ. ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ’ ಎಂದರು.

ಕೇಂದ್ರದಿಂದ ಅನ್ಯಾಯ: ‘ರಾಷ್ಟ್ರೀಯ ಪಕ್ಷಗಳು ರಾಜ್ಯದ ಪಾಲಿಕೆ ಮಾರಕ ಎನ್ನುವುದು ಪದೇಪದೇ ರುಜುವಾಗುತ್ತಿದೆ.ಪಿನಾಕಿನಿ ನದಿಯ ವಿಚಾರವಾಗಿ ತಕರಾರು ಆರಂಭವಾಗಿದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ನಿರ್ಲಕ್ಷ್ಯ ತೋರಿದೆ.
ನೀರಾವರಿ ವಿಚಾರವಾಗಿ ತೊಂದರೆಯಾಗಿದೆ. ಮೇಕೆದಾಟು ಯೋಜನೆಗೆ ಮೂರುವರೆ ವರ್ಷದ‌ ಹಿಂದೆಯೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಕಿಡಿಕಾರಿದರು.

‘ತುಂಗಭದ್ರಾ, ಕೃಷ್ಣ ನೀರಾವರಿ ಯೋಜನೆಗಳನ್ನ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ಕೊಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಾ ಬಂದಿದೆ. ಆದರೂ ಇದುವರೆಗೂ ತೀರ್ಮಾನ ಕೈಗೊಂಡಿಲ್ಲ.70 ವರ್ಷಗಳಿಂದಲೂ ಕರ್ನಾಟಕವನ್ನು ಎಲ್ಲ ಕೇಂದ್ರ ಸರ್ಕಾರಗಳು ಕಡೆಗಣಿಸಿವೆ‘ ಎಂದು ಹರಿಹಾಯ್ದರು.

ಪಟ್ಟಿ ಬಿಡುಗಡೆಗೆ ರೇವಣ್ಣ ತಕರಾರು: ಜೆಡಿಎಸ್‌ನ ಮೊದಲ ಹಂತದ ಪಟ್ಟಿ ಬಿಡುಗಡೆಗೆ ಎಚ್.ಡಿ.ರೇವಣ್ಣ ತಕರಾರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಶುಕ್ರವಾರ ಸಮಯ ಪ್ರಸಕ್ತವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ. 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು, ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್‌.ಡಿ‌ ದೇವೇಗೌಡರ ನೇತೃತ್ವದಲ್ಲಿ ಬಿಡುಗಡೆ ಮಾಡುತ್ತಾರೆ’ ಎಂದರು.‌

ಮಾಹಿತಿ ಸಂಗ್ರಹ– ಖಾಸಗಿ ಕಂಪನಿ ಮುಂದಿಟ್ಟಿಕೊಂಡು ಮತದಾರರ ಡೇಟಾ ಸಂಗ್ರಹ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ‘ಇದರಲ್ಲಿ ಕೆಲವು ತಪ್ಪುಗಳು ಆಗಿವೆ. ಸರ್ಕಾರದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ.ಸರ್ಕಾರಿ ನೌಕರರು ಎಂದು ಮನೆಗಳಿಗೆ ಭೇಟಿ ಕೊಟ್ಟಿರುವ ಮಾಹಿತಿ‌ ಇದೆ. ಸರ್ಕಾರದ ನಡವಳಿಕೆ ಪ್ರತಿಯೊಬ್ಬರಿಗೂ ಸಂಶಯ ಮೂಡುತ್ತದೆ.
ಇದರಿಂದ ಬಿಜೆಪಿಯವರು ದೊಡ್ಡ ಸಾಧನೆ ಮಾಡುತ್ತಾರೆ ಎಂಬ ಆತಂಕವಿಲ್ಲ. ಈ ಬಾರಿ ಬಿಜೆಪಿ ಏನೇ ಮಾಡಿದ್ರು ನಾಡಿನ ಜನರು ಬೇಸತ್ತು ಹೋಗಿದ್ದಾರೆ’ ಎಂದು ಕುಟುಕಿದರು.

ಮಾರ್ಚ್‌ನಲ್ಲಿ ಸಮಾರೋಪ: ‘ಮಾರ್ಚ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಪಂಚರತ್ನ ಸಮಾರೋಪ ಸಮಾರಂಭ ಮಾಡುತ್ತೇವೆ. 123 ಗುರಿ‌ಯಿಟ್ಟುಕೊಂಡು, ನಾವು ಹೊರಟಿದ್ದೇವೆ. ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣ ಆಗಬಹುದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಜನತಾ ಪರಿವಾರದಿಂದ ಹೋದವರೇ ಇದ್ದಾರೆ. ಮನಪರಿವರ್ತನೆಯಾಗಿ ಮತ್ತೆ ಪಕ್ಷಕ್ಕೆ ಬರಬಹುದು. ಬಂದಾಗ ಏನು ತೀರ್ಮಾನ ಮಾಡಬೇಕು ನೋಡೋಣ’ ಎಂದರು.

2018ರಲ್ಲಿ ಚಾಮುಂಡಿ ಬೆಟ್ಟದಿಂದಲೇ ‘ಕುಮಾರ ಪರ್ವ’ಕ್ಕೆ ಹೆಚ್‌ಡಿಕೆ ಚಾಲನೆ ಕೊಟ್ಟಿದ್ದರು. ಶುಕ್ರವಾರದ ಪೂಜೆ ಸಲ್ಲಿಕೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ, ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು,ತಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್‌ ಕುಮಾರ್‌, ಪಕ್ಷದ ಮುಖಂಡರಾದ ಅಪ್ಪಾಜಿ ಗೌಡ, ಜಿ.ಡಿ.ಹರೀಶ್‌ ಗೌಡ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT