ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ನಿವೇಶನಗಳ ಅಕ್ರಮ ಹಂಚಿಕೆ: ‘50:50’ ನಿಯಮವೇ ಅಧಿಕಾರಿಗಳಿಗೆ ಅಸ್ತ್ರ

ಬಗೆದಷ್ಟೂ ಬಯಲಾಗುತ್ತಿವೆ ಪ್ರಕರಣ
Published 2 ಜುಲೈ 2024, 21:37 IST
Last Updated 2 ಜುಲೈ 2024, 21:37 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಸರ್ಕಾರದ ಶೇ 50:50 ನಿಯಮವನ್ನೇ ಅಸ್ತ್ರವನ್ನಾಗಿಸಿಕೊಂಡ ಮುಡಾ ಅಧಿಕಾರಿಗಳು ಅರ್ಹರಲ್ಲದವರಿಗೂ ಕೋಟ್ಯಂತರ ರೂಪಾಯಿ ಮೌಲ್ಯದ ನಿವೇಶನಗಳನ್ನು ಹಂಚಿ ಅಕ್ರಮ ಎಸಗಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿರ್ಮಾಣವಾಗುವ ಬಡಾವಣೆಗಳಿಗೆ ಜಮೀನು ನೀಡಿದ ರೈತರಿಗೆ ಈ ಮೊದಲು ಶೇ 60:40ರ ಅನುಪಾತದಲ್ಲಿ ನಿವೇಶನಗಳನ್ನು ನೀಡಲಾಗುತ್ತಿತ್ತು. ಭೂಸ್ವಾಧೀನವಾದ ಜಮೀನಿಗೆ ಹಣದ ರೂಪದಲ್ಲಿ ಪರಿಹಾರ ನೀಡದ ಪಕ್ಷದಲ್ಲಿ, ಸಂತ್ರಸ್ತರಿಗೆ ಒಟ್ಟು ಅಭಿವೃದ್ಧಿಪಡಿಸಲಾದ ನಿವೇಶನಗಳ ಪೈಕಿ ಶೇ 40 ರಷ್ಟು ನಿವೇಶನ ಸಿಗುತ್ತಿತ್ತು. 2020ರಲ್ಲಿ ಬಿಜೆಪಿ ಸರ್ಕಾರ ಅದನ್ನು ಶೇ 50:50ರ ಅನುಪಾತಕ್ಕೆ ಮರುನಿಗದಿಪಡಿಸಿ, ಸಂತ್ರಸ್ತರಿಗೆ ಒಟ್ಟು ನಿವೇಶನದ ಶೇ 50ರಷ್ಟನ್ನು ಬಿಟ್ಟುಕೊಡುವ ನಿಯಮ ರೂಪಿಸಿತು.

2020ರ ನಂತರದಲ್ಲಿ ಹಂಚಿಕೆಯಾಗುವ ನಿವೇಶನಗಳಿಗೆ ಮಾತ್ರ ನಿಯಮ ಇರಬೇಕಿತ್ತು. ಆದರೆ ಮುಡಾ ಅಧಿಕಾರಿಗಳು 30–40 ವರ್ಷದ ಹಿಂದೆ ಜಮೀನು ಕೊಟ್ಟವರಿಗೂ ಅದೇ ನಿಯಮದ ಅಡಿ ನಿವೇಶನಗಳನ್ನು ಹಂಚಿಕೆ ಮಾಡಿ ಲಾಭ ಮಾಡಿಕೊಂಡಿದ್ದಾರೆ.

56 ವರ್ಷಗಳ ನಂತರ ನಿವೇಶನ ಹಂಚಿಕೆ!

1968ರಲ್ಲಿ ಮೈಸೂರು ತಾಲ್ಲೂಕಿನ ಕಸಬಾ ಹೋಬಳಿಯ ಮಾರಗೌಡನಹಳ್ಳಿಯ ಸರ್ವೆ ಸಂಖ್ಯೆ 57ರಲ್ಲಿ 4 ಎಕರೆ 17 ಗುಂಟೆ ಹಾಗೂ ಸರ್ವೆ ಸಂಖ್ಯೆ 77/2 ರಲ್ಲಿ 3 ಎಕರೆ 31 ಗುಂಟೆ ಸೇರಿದಂತೆ ಒಟ್ಟು 8 ಎಕರೆ 14 ಗುಂಟೆ ಜಮೀನನ್ನು ಪ್ರಾಧಿಕಾರವು ಗೋಕುಲಂ ಬಡಾವಣೆಗಾಗಿ ವಶಪಡಿಸಿಕೊಂಡಿತ್ತು.

ಆದರೆ ಭೂ ಪರಿಹಾರ ನೀಡಿರಲಿಲ್ಲ. ಅದಾದ 56 ವರ್ಷದ ಬಳಿಕ ಭೂಮಾಲೀಕರ ವಾರಸುದಾರರು ನೀಡಿದ ಪ್ರಮಾಣಪತ್ರದ ಆಧಾರದಲ್ಲಿ  ಬರೋಬ್ಬರಿ 98,205 ಚ.ಅಡಿ ಅಳತೆಯ ನಿವೇಶನವನ್ನು ನಗರದ ಪ್ರಮುಖ ಬಡಾವಣೆಯಲ್ಲಿ ಅವರಿಗೆ ಬಿಟ್ಟುಕೊಡಲು ಮುಡಾ ಆಯುಕ್ತರು 2024ರ ಜೂನ್‌ 15ರಂದು ಆದೇಶಿಸಿದ್ದಾರೆ. ಆ ನಿವೇಶನಗಳ ಮೌಲ್ಯ ಹತ್ತಾರು ಕೋಟಿಗಳನ್ನು ದಾಟಲಿದ್ದು, ಇಲ್ಲಿ ಅಕ್ರಮದ ವಾಸನೆ ಕಂಡುಬಂದಿದೆ.

ಮನವಿಗೆ ಮುನ್ನವೇ ಪರಿಹಾರ!

‘ಮೈಸೂರು ನಗರದ ಸರ್ವೆ ಸಂಖ್ಯೆ 86ರಲ್ಲಿ ಚಂದ್ರಶೇಖರ್‌ ಎಂಬುವರಿಗೆ ಸೇರಿದ ಒಟ್ಟು 7 ಎಕರೆ 3 ಗುಂಟೆ ಜಮೀನನ್ನು ಪ್ರಾಧಿಕಾರವು 1988ರಲ್ಲಿ ವಶಪಡಿಸಿಕೊಂಡಿದ್ದು, ಪರಿಹಾರ ನೀಡಿರಲಿಲ್ಲ. ಅದಕ್ಕೆ ಸರ್ಕಾರದ ಶೇ 50:50 ಯೋಜನೆ ಅಡಿ ಪರಿಹಾರ ನೀಡಬೇಕು ಎಂದು ಕೋರಿ ಚಂದ್ರಶೇಖರ್ ಪತ್ನಿ ಶಾಂತಮ್ಮ 2023ರ ಅಕ್ಟೋಬರ್ 20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

‘ಅವರು ಅರ್ಜಿ ಸಲ್ಲಿಸುವ 13 ದಿನ ಮುನ್ನವೇ, ಅಂದರೆ ಅ. 7ರಂದೇ ಮುಡಾ ಆಯುಕ್ತರು ಶಾಂತಮ್ಮ ಅವರಿಗೆ ಭೂಪರಿಹಾರವಾಗಿ ಒಟ್ಟು 81,670 ಚದರ ಅಡಿ ನಿವೇಶನ ನೀಡುವಂತೆ ಆದೇಶಿಸಿದ್ದಾರೆ. ಇದು ಅಕ್ರಮಕ್ಕೆ ಹಿಡಿದ ಕೈಗನ್ನಡಿ’ ಎಂದು ಆರೋಪಿಸುತ್ತಾರೆ ಮುಡಾ ಸದಸ್ಯರೂ ಆಗಿರುವ ಶಾಸಕ ಟಿ.ಎಸ್. ಶ್ರೀವತ್ಸ.

ಸಾಕಷ್ಟು ವಿಷಯಗಳನ್ನು ಮುಡಾ ಸಭೆಗಳಲ್ಲಿ ಚರ್ಚೆಗೇ ತರುತ್ತಿರಲಿಲ್ಲ. ನಾನು ಸದಸ್ಯನಾಗಿದ್ದರೂ ಮುಡಾದಲ್ಲಿ ಎಷ್ಟು ನಿವೇಶನಗಳನ್ನು ಯಾರು ಯಾರಿಗೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ನೀಡಿಲ್ಲ
–ಎಚ್‌. ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ
ಮುಡಾ ವ್ಯಾಪ್ತಿಯಲ್ಲಿ 5 ಸಾವಿರದಷ್ಟು ನಿವೇಶನಗಳ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ. ಸಮಗ್ರ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸಬೇಕು.
–ರಘು ಕೌಟಿಲ್ಯ, ಬಿಜೆಪಿ ಮುಖಂಡ
ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ಮುಡಾ ಕಾನೂನಾತ್ಮಕವಾಗಿ ಭೂಪರಿಹಾರದ ರೂಪದಲ್ಲಿ ನಿವೇಶನ ನೀಡಿದೆ. ಇದರಲ್ಲಿ ಯಾರೂ ಪ್ರಭಾವ ಬೀರಿಲ್ಲ.
–ಎಂ. ಲಕ್ಷ್ಮಣ, ಕಾಂಗ್ರೆಸ್ ವಕ್ತಾರ

ಪ್ರತಿಷ್ಠಿತ ಬಡಾವಣೆಗಳಲ್ಲಿ ಬದಲಿ ನಿವೇಶನ

10–20 ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾದ ಜಮೀನಿಗೆ ಪ್ರತಿಯಾಗಿ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ದುಬಾರಿ ಮೌಲ್ಯದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಅದರಲ್ಲೂ ಶೇ 50:50ರ ಅನುಪಾತದಲ್ಲಿ ನಿವೇಶನ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ 2005ರಲ್ಲಿ 3 ಎಕರೆ 16 ಗುಂಟೆ ಜಮೀನು ಖರೀದಿಸಿದ್ದರು. 2010ರಲ್ಲಿ ಅದನ್ನು ತಮ್ಮ ಸಹೋದರಿ ಸಿದ್ದರಾಮಯ್ಯರ ಪತ್ನಿ ಪಾರ್ವತಮ್ಮ ಅವರಿಗೆ ದಾನಪತ್ರವಾಗಿ ನೀಡಿದ್ದರು. ನಂತರದಲ್ಲಿ ಮುಡಾ ಈ ಜಮೀನನ್ನು ಸ್ವಾಧೀನಕ್ಕೆ ಪಡೆದು ಬಡಾವಣೆ ನಿರ್ಮಿಸಿತ್ತು. ಅದಕ್ಕೆ ಪರ್ಯಾಯವಾಗಿ ಮುಡಾ ನಗರದ ಪ್ರತಿಷ್ಠಿತ ಬಡಾವಣೆಯಾದ ವಿಜಯನಗರದಲ್ಲಿ ಒಟ್ಟು 38284 ಚದರಿ ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಪಾರ್ವತಮ್ಮ ಅವರಿಗೆ 2021ರಲ್ಲಿ ನೀಡಿದೆ. ಕೆಸರೆಗೆ ಹೋಲಿಸಿದರೆ ವಿಜಯನಗರದಲ್ಲಿ ನಿವೇಶನದ ಮಾರುಕಟ್ಟೆ ದರ ದುಪ್ಪಟ್ಟು ಇದೆ.

ಆಯುಕ್ತರಾಗಿ ರಘುನಂದನ್‌ ಅಧಿಕಾರ ಸ್ವೀಕಾರ
ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಎ.ಎನ್. ರಘುನಂದನ್ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರನ್ನಾಗಿ ಸರ್ಕಾರ ವರ್ಗಾಯಿಸಿದ್ದು ಮಂಗಳವಾರ ಸಂಜೆಯೇ ಅವರು ಮುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಕರ್ನಾಟಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ನಿಗಮದ ಪ್ರಧಾನ ವ್ಯವಸ್ಥಾಪಕ ವಿ.ಕೆ. ಪ್ರಸನ್ನಕುಮಾರ್ ಅವರನ್ನು ಮುಡಾ ಕಾರ್ಯದರ್ಶಿಯಾಗಿ ಸರ್ಕಾರ ವರ್ಗಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT