ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆಯಿಂದ ವಿದ್ಯಾರ್ಜನೆಗೆ ತೊಡಕಿಲ್ಲ: .ಪಟ್ನಾಯಕ್ ಅಭಿಮತ

ಭಾಷಾತಜ್ಞ ಪ್ರೊ.ಬಿ.ಎನ್.ಪಟ್ನಾಯಕ್ ಅಭಿಮತ
Last Updated 21 ಫೆಬ್ರುವರಿ 2023, 13:32 IST
ಅಕ್ಷರ ಗಾತ್ರ

ಮೈಸೂರು:‘ಮಾತೃಭಾಷೆಯು ವಿದ್ಯಾರ್ಜನೆಗೆ ತೊಡಕು ಎಂಬ ಭ್ರಮೆಯಿಂದ ಪೋಷಕರು ಹೊರಬರಬೇಕು’ ಎಂದು ಭಾಷಾತಜ್ಞ ಪ್ರೊ.ಬಿ.ಎನ್.ಪಟ್ನಾಯಕ್ ಹೇಳಿದರು.

ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನವು ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ಪಡೆಯುವ ಸ್ವಾತಂತ್ರ್ಯ ನೀಡಬೇಕು. ಇದರಿಂದ ಮಾನಸಿಕ ಬೆಳವಣಿಗೆ ಸಾಧ್ಯ’ ಎಂದರು.

‘ದೇಶದ ಆಡಳಿತ ಹಾಗೂ ವ್ಯಾವಹಾರಿಕ ಭಾಷೆಗಳಾದ ಇಂಗ್ಲಿಷ್‌ ಹಾಗೂ ಹಿಂದಿಗಿಂತ ಹೆಚ್ಚು ಆಪ್ತತೆಯು ಮಕ್ಕಳಿಗೆ ಮಾತೃಭಾಷಾ ಶಿಕ್ಷಣದಿಂದ ದೊರೆಯುತ್ತದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಭಾಷೆಯ ಬೆಳವಣಿಗೆಯನ್ನು ನಾವು ಒಪ್ಪಿಕೊಳ್ಳುವುದರ ಜೊತೆಗೆ ಪಾರಂಪರಿಕ ಹಾಗೂ ಪ್ರಾದೇಶಿಕ ಭಾಷೆ ಉಳಿಸಲು ಚಿಂತಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾಗದಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದರಿಂದ ಇಂಗ್ಲಿಷ್ ಮಾಧ್ಯಮಕ್ಕೆ ಮೊರೆ ಹೋಗುವ ನಿರ್ಧಾರ ತಪ್ಪು, ಅಲ್ಲಿ ಕಲಿಕೆಗೆ ಪೂರಕವಾದ ವಾತಾವರಣವಿದ್ದರೆ ಮಕ್ಕಳ ಬೆಳವಣಿಗೆ ಸಾಧ್ಯ, ಇದಕ್ಕೆ ಪೂರಕವಾದ ಅನೇಕ ಉದಾಹರಣೆಗಳು ನಮ್ಮ ನಡುವೆ ಇವೆ’ ಎಂದು ಪ್ರತಿಪಾದಿಸಿದರು.

‘ಮಹಾತ್ಮ ಗಾಂಧೀಜಿಯೂ ಮಾತೃಭಾಷಾ ಶಿಕ್ಷಣದ ಬಗ್ಗೆ ಒಲವು ಹೊಂದಿದ್ದರು. ಭಾಷಾವಾರು ಪ್ರಾಂತ್ಯಗಳ ವಿಚಾರದಲ್ಲಿ ಉದ್ವಿಗ್ನತೆ ಮೂಡಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾದ ನಡೆ. ಮಾತೃಭಾಷೆಯನ್ನು ಪ್ರೀತಿಸುವ ಜೊತೆಗೆ ಇತರೆ ಭಾಷೆಗಳನ್ನೂ ಗೌರವಿಸಬೇಕು’ ಎಂದು ಸಲಹೆ ನೀಡಿದರು.

‘ಮಾತೃ ಭಾಷೆಗೆ ಆದ್ಯತೆ ನೀಡದಿದ್ದರೆ, ಪ್ರತ್ಯೇಕತಾವಾದ ಮುನ್ನೆಲೆಗೆ ಬರುತ್ತದೆ ಎಂಬುದಕ್ಕೆ ಬಾಂಗ್ಲಾದೇಶದ ವಿಮೋಚನೆ ಉದಾಹರಣೆಯಾಗಿದೆ. ಸಾಂಸ್ಕೃತಿಕ ಭಾಷೆಯನ್ನು ಹಾಗೂ ಅದರ ಬಹುತ್ವವನ್ನು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಬುಡಕಟ್ಟು ಜನರ ಭಾಷೆಗಳು ನಶಿಸುವ ಅಪಾಯದಲ್ಲಿವೆ, ಅವರಿಗೆ ತಮ್ಮ ಮಾತೃ ಭಾಷೆಯ ಶಿಕ್ಷಣ ನೀಡಿದಾಗ ಭಾಷೆ ಬೆಳೆಯುತ್ತದೆ’ ಎಂದರು.

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಉಪ ನಿರ್ದೇಶಕ ಪ್ರೊ.ಸಿ.ವಿ.ಶಿವರಾಮಕೃಷ್ಣ, ಪ್ರೊ.ಡಿ.ಜಿ.ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT