ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನವರಿಗೆ ಬಿಜೆಪಿ, ಕಾಂಗ್ರೆಸ್‌ ಎರಡರ ಮೇಲೂ ಆಕ್ರೋಶ: ಎಚ್‌. ವಿಶ್ವನಾಥ್‌

Last Updated 22 ಆಗಸ್ಟ್ 2022, 8:25 IST
ಅಕ್ಷರ ಗಾತ್ರ

ಮೈಸೂರು: ‘ಕೊಡಗು ಜಿಲ್ಲೆಯ ಜನರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಮೇಲೆ ಆಕ್ರೋಶವಿದೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕೊಡಗು ಜಿಲ್ಲೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಆಗಬೇಕು. ಇದು ಕೊಡವರ ಬಹುದಿನಗಳ ಬೇಡಿಕೆಯೂ ಆಗಿದೆ. ಎರಡೂ ಪಕ್ಷದವರೂ ಪ್ರಾತಿನಿಧ್ಯ ನೀಡಿಲ್ಲ. ಇದು ಪ್ರಮುಖವಾಗಿ ಚರ್ಚೆ ಆಗಬೇಕಿದೆಯೇ ಹೊರತು, ಮೊಟ್ಟೆ, ಕೋಳಿ, ದೇವರು ಮೊದಲಾದ ವಿಷಯದ ಬಗ್ಗೆ ನಂತರ ಮಾತನಾಡೋಣ’ ಎಂದರು.

‘ಆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಕೊಡಗು ಹಿಂದೆ ಮಂಗಳೂರು ಕ್ಷೇತ್ರದೊಂದಿಗೆ ಸೇರಿತ್ತು. ಈಗ ಮೈಸೂರು ಕ್ಷೇತ್ರದೊಂದಿಗಿದೆ. ಈಶಾನ್ಯ ರಾಜ್ಯಗಳಲ್ಲಿ 3-4 ಲಕ್ಷ ಜನಸಂಖ್ಯೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಿವೆ. ಹೀಗಿರುವಾಗ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ಯಾಕಾಗಬಾರದು?’ ಎಂದು ಕೇಳಿದರು.

‘ಕೊಡಗು ಅತ್ಯುತ್ತಮ ಪ್ರವಾಸಿ ತಾಣ. ಮಳೆಯಿಂದ, ಭೂಕುಸಿತರಿಂದ ಇತ್ತೀಚೆಗೆ ಅಪಾರ ಹಾನಿ ಆಗಿದೆ. ಈ ಬಗ್ಗೆ ಚರ್ಚೆ ಆಗಬೇಕಲ್ಲವೇ’ ಎಂದು ‍‍ಪ್ರಶ್ನಿಸಿದರು.

‘ಜನರು ರಾಜಕೀಯ ನಾಯಕರ ಮೇಲೆ ಮೊಟ್ಟೆ, ಕಲ್ಲು, ಟೊಮೆಟೊ, ಸೆಗಣಿ ಎಸೆಯುವುದು ಸಹಜ. ಒಳ್ಳೆಯವರು ಇರುವ ರೀತಿಯಲ್ಲಿ ಪುಂಡ–ಪೋಕರಿಗಳೂ ಇರುತ್ತಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಆ.26ರಂದು ಹಮ್ಮಿಕೊಂಡಿರುವ ಕೊಡಗು ಚಲೋ ಬಗ್ಗೆ ಪುನರ್ ಅವಲೋಕನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಬೇಕಿದ್ದರೆ ವಿಧಾನಸಭೆಯಲ್ಲಿ ಅವಿಶ್ವಾಸ ಮಂಡಿಸಿ. ಮಡಿಕೇರಿ ಪಾದಯಾತ್ರೆ ಹಿಂಪಡೆಯಿರಿ. ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಅದಕ್ಕೆ ನೀವು ಹೊಣೆಯಾಗಬೇಡಿ’ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಟ್ಟರು.

‘ಮೊರಾರ್ಜಿ ದೇಸಾಯಿ ಅವರಿಗೆ ನಾಗಪುರದಲ್ಲಿ ಚಪ್ಪಲಿ ಎಸೆದಿದ್ದರು. ಇಂದಿರಾ ಗಾಂಧಿ ಅವರಿಗೆ ಕಲ್ಲು ಬಿದ್ದು ಮೂಗಿಗೆ ಗಾಯವಾಗಿತ್ತು. ದೇವರಾಜ ಅರಸು ಮೇಲೆ ಎಷ್ಟು ಬಾರಿ ಆಕ್ರಮಣ ನಡೆದಿತ್ತು. ಚಿದಂಬರಂ ಅವರಿಗೆ ಸುದ್ದಿಗೋಷ್ಠಿಯಲ್ಲಿ ಶೂ ತೋರಿಸಲಾಗಿತ್ತು’ ಎಂದು ನೆನಪಿಸಿದರು.

‘ಮೊಟ್ಟೆ ಎಸೆತ ವಿಚಾರ ರಾಷ್ಟ್ರೀಯ ಸುದ್ದಿ ಆಗಿದೆ. ಮಳೆ ಹಾನಿಯಿಂದ ಕೊಡಗು ಜಿಲ್ಲೆಯ ಜನರು ತೊಂದರೆ ಅನುಭವಿಸಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಮುತ್ತಿಗೆ ಹಾಕುವುದು ನಿಮ್ಮಂಥ ನಾಯಕರಿಗೆ ಶೋಭೆಯಲ್ಲ’ ಎಂದು ಸಿದ್ದರಾಮಯ್ಯಗೆ ತಿಳಿ ಹೇಳಿದರು.

‘ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಮೊಟ್ಟೆ ಎಸೆತ ಪ್ರಕರಣವನ್ನು ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರಂಥ ಮುತ್ಸದ್ದಿ ರಾಜಕಾರಣಿ ಮೇಲೆ ಮೊಟ್ಟೆ ಎಸೆದಿದ್ದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಿ ಎರಡೂ ಕಡೆಯವರ ಮನವೊಲಿಸಬೇಕು. ಕಾನೂನು–ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ಕೊಟ್ಟರು.

‘ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಟ ಮಾಡಿ. ನಿಮ್ಮ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ದೊಡ್ಡದು ಮಾಡಬೇಡಿ. ಇದು ಶಾಂತಿ–ಸುವ್ಯವಸ್ಥೆಯ ವಿಚಾರವೇ ಹೊರತು ಪಕ್ಷದದ್ದಲ್ಲ’ ಎಂದು ಸಿದ್ದರಾಮಯ್ಯ ಅವರನ್ನು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT