ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಕೆರೆಗಳೀಗ ಚರಂಡಿ ನೀರಿನ ತೊಟ್ಟಿಗಳು!

Published 27 ಜೂನ್ 2024, 6:00 IST
Last Updated 27 ಜೂನ್ 2024, 6:00 IST
ಅಕ್ಷರ ಗಾತ್ರ

ಮೈಸೂರು: ಪಾಲಿಕೆ, ಮುಡಾ, ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಜವಾಬ್ದಾರಿಯ ಹೊಯ್ದಾಟವು ನಗರದ ಹೊರವಲಯದ ಕೆರೆಗಳನ್ನು ತೊಟ್ಟಿಗಳನ್ನಾಗಿ ಮಾಡಿದೆ.

ಕುಕ್ಕರಹಳ್ಳಿ ಕೆರೆ, ದೇವನೂರು ಕೆರೆ, ಲಿಂಗಾಂಬುಧಿ ಕೆರೆಗಳಿಗೆ ಕಲುಷಿತ ಚರಂಡಿ ನೀರು ಹರಿಯುವುದನ್ನು ತಪ್ಪಿಸುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ. ವೇಗವಾಗಿ ನಗರವು ಬೆಳೆಯುತ್ತಿದ್ದು, ರಿಂಗ್‌ ರಸ್ತೆಯಾಚೆಗಿನ ಕೆರೆಗಳು, ಕಟ್ಟೆಗಳು ಚರಂಡಿ ನೀರಿನ ಸಂಗ್ರಹಾಗಾರವಾಗುತ್ತಿವೆ. ಮಳೆ ನೀರು ಸೇರುವುದು ಕಡಿಮೆಯಾಗಿ ಹಾವಸೆ, ಶೈವಲ ಬೆಳೆದಿವೆ. ಅಲ್ಲಿದ್ದ ಬಾನಾಡಿಗಳು ಮಾಯವಾಗಿವೆ!

ತಿಪ್ಪಯ್ಯನ ಕೆರೆಗೆ ಗಿರಿದರ್ಶಿನಿ ಬಡಾವಣೆ, ಪೊಲೀಸ್‌ ಬಡಾವಣೆ, ಆಲನಹಳ್ಳಿಯ ಒಳಚರಂಡಿ ನೀರು ರಾಜಕಾಲುವೆಯ ಮೂಲಕ ಸೇರುತ್ತಿದೆ. ಅದಲ್ಲದೆ, ಕೆರೆ ಸಮೀಪದಲ್ಲೇ ಮ್ಯಾನ್‌ಹೋಲ್‌ಗಳ ಬಾಯಿ ಕಳಚಿದ್ದು, ಹಂದಿಗಳ ಆವಾಸ ಸ್ಥಾನವಾಗಿದೆ.

ದಳವಾಯಿ ಕೆರೆ, ವರುಣ, ಶೆಟ್ಟಿಕೆರೆ, ವರಕೋಡು, ಸಿಂಧುವಳ್ಳಿ, ಕಾಮನಕೆರೆ ಹುಂಡಿಯ ದೊಡ್ಡಕೆರೆ, ಹೆಬ್ಬಾಳ ಕೆರೆ, ಬೋಗಾದಿ ಕೆರೆಗಳು ಹಾಗೂ ಇವುಗಳ ಜೊತೆ ಕಟ್ಟೆ–ಕುಂಟೆಗಳಿಗೆ ಮಲಿನ ನೀರು ಸೇರುತ್ತಿದೆ. ಹೊಸ ಬಡಾವಣೆಗಳಿಂದ ಚರಂಡಿ ನೀರು ಸೇರಿದರೆ, ಸೀವೆಜ್ ಫಾರಂನಿಂದ ಬರುವ ಕೊಳಚೆನೀರು ದಳವಾಯಿ ಕೆರೆ ಸೇರುತ್ತಿದೆ.

ಭವಿಷ್ಯದಲ್ಲಿ ನಗರವು ನಂಜನಗೂಡನ್ನೂ ಒಳಗೊಂಡಂತೆ 276 ಚದರ ಕಿ.ಮೀ ವ್ಯಾಪಿಸಲಿದ್ದು, 106 ಕೆರೆ–ಕಟ್ಟೆ–ಕುಂಟೆಗಳಲ್ಲಿ ಈಗಾಗಲೇ 37 ಮಾಯವಾಗಿವೆ. 69 ಜಲಮೂಲಗಳಷ್ಟೇ ಉಳಿದಿವೆ. ನಗರ ಹಾಗೂ ಸುತ್ತಮುತ್ತ 28 ಕೆರೆ, 31 ಕಟ್ಟೆ, 14 ಕುಂಟೆಗಳಿವೆ. ಇಲ್ಲೆಲ್ಲೂ ನೀರಿನ ಸಂಸ್ಕರಣೆ ಸಮರ್ಪಕವಾಗಿ ನಡೆದಿಲ್ಲ ಎನ್ನುತ್ತಾರೆ ಪರಿಸರವಾದಿಗಳು.

‘ಕೆರೆಗಳನ್ನು ಉಳಿಸುವ ಬಗ್ಗೆ ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ಯು (ಇಎಂಪಿಆರ್‌ಐ) ಹಲವು ವರ್ಷಗಳ ಹಿಂದೆಯೇ ವರದಿ (ಮೈಸೂರು– ನಂಜನಗೂಡು ಯೋಜನಾ ಪ್ರದೇಶದಲ್ಲಿ ಜಲಮೂಲಗಳ ಸುಸ್ಥಿರ ಸಂರಕ್ಷಣೆಗೆ ಕಾರ್ಯತಂತ್ರ) ಸಿದ್ಧಪಡಿಸಿ, ಪಾಲಿಕೆ ಹಾಗೂ ಮುಡಾಕ್ಕೆ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಗಳ ಜೊತೆಗೆ 3 ಎಕರೆ ವಿಸ್ತೀರ್ಣದ ಕಟ್ಟೆಗಳು, 1 ಎಕರೆ ವಿಸ್ತೀರ್ಣದ ಕುಂಟೆಗಳು ತೀವ್ರ ಅಪಾಯದಲ್ಲಿವೆ. ಚಾಮುಂಡಿ ಬೆಟ್ಟದ ಸುತ್ತಲಿನ ಜಲಮೂಲಗಳು, ರಿಂಗ್‌ ರಸ್ತೆಯ ಹೊಂದಿಕೊಂಡಂತಿದ್ದ ಹಳ್ಳ, ಜೌಗುಗಳಲ್ಲಿ ಚರಂಡಿ ನೀರು ಹಾಗೂ ಕಟ್ಟಡ ತ್ಯಾಜ್ಯ ತುಂಬುತ್ತಿದೆ. ತಿಪ್ಪಯ್ಯನ ಕೆರೆ ಮೇಲಿದ್ದ ಚಾಮುಂಡಿ ಬೆಟ್ಟದ ತಪ್ಪಲಿನ ಸಾತಿ ಕೆರೆ ಮುಚ್ಚಿಹೋಗಿದೆ’ ಎಂದರು.

ವರುಣ ಕೆರೆಗೆ ಚರಂಡಿ ನೀರು ಸೇರುತ್ತಿರುವುದರಿಂದ ಹಾವಸೆ– ಶೈವಲ ಬೆಳೆಯುತ್ತಿದೆ
ವರುಣ ಕೆರೆಗೆ ಚರಂಡಿ ನೀರು ಸೇರುತ್ತಿರುವುದರಿಂದ ಹಾವಸೆ– ಶೈವಲ ಬೆಳೆಯುತ್ತಿದೆ

‘ಮಳೆ ನೀರು ಹರಿವು ಕಡಿಮೆಯಾಗಿದೆ’

‘ಕೆರೆಯ ನೀರು ಬಳಕೆಯಾಗುತ್ತಿದ್ದರೆ ಸಮಸ್ಯೆಯಾಗದು. ನಗರದ ಹೊರವಲಯದ ಕೆರೆಗಳ ನೀರನ್ನು ಮೊದಲು ವ್ಯವಸಾಯಕ್ಕೆ ಬಳಸಲಾಗುತ್ತಿತ್ತು. ಈಗ ಚರಂಡಿ ನೀರು ಸೇರುವ ಪ್ರಮಾಣ ಹೆಚ್ಚಾಗಿ ಕೆರೆಗೆ ಮಳೆ ನೀರಿನ ಹರಿವು ಕಡಿಮೆಯಾಗುತ್ತಿದೆ. ಹೀಗಾಗಿ ಕೆರೆಯಲ್ಲಿ ಮಾಲಿನ್ಯಕಾರಕಗಳು ಹೆಚ್ಚಿವೆ’ ಎಂದು ಪರಿಸರ ತಜ್ಞ ಪ್ರೊ.ಯದುಪತಿ ಪುಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡಾವಣೆಗಳು ವಿಸ್ತಾರವಾಗುತ್ತಿರುವುದರಿಂದ ಚರಂಡಿ ನೀರನ್ನು ಸಂಸ್ಕರಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಕಡಿಮೆ ಪ್ರಮಾಣದಲ್ಲಿ ಒಳಚರಂಡಿ ನೀರು ಸೇರುತ್ತಿದ್ದರೆ ಪ್ರಾಕೃತಿಕವಾಗಿಯೇ ಸಂಸ್ಕರಿತಗೊಳ್ಳುತ್ತದೆ. ಹೆಚ್ಚಾದರೆ ಕೆರೆ ಒಡಲು ಹಾಳಾಗುತ್ತದೆ. ರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿದ್ದರೆ ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಳ್ಳದಿದ್ದರೆ ಕೆರೆಗಳು ಅಸ್ತಿತ್ವ ಕಳೆದುಕೊಂಡು ಕೊಳಚೆ ನೀರಿನ ತೊಟ್ಟಿಗಳಾಗಲಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಎಸ್‌ಟಿಪಿ ಅಳವಡಿಕೆಗೆ ವಿರೋಧ’

‘ತಿಪ್ಪಯ್ಯನ ಕೆರೆಗೆ ಸೇರುತ್ತಿದ್ದ ಒಳಚರಂಡಿಗೆ ಎಸ್‌ಟಿಪಿ ಅಳವಡಿಸಲು ಮುಂದಾದರೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ₹11 ಕೋಟಿ ವೆಚ್ಚದ ಸಂಸ್ಕರಿಸುವ ಯೋಜನೆ ತಯಾರಿಸಿ ಅನುಮೋದನೆ ಕೊಡಲಾಗಿದೆ’ ಎಂದು ಮುಡಾ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಮೃಗಾಲಯ ಪ್ರಾಧಿಕಾರವು ಕೆರೆ ನಿರ್ವಹಣೆ ಮಾಡುತ್ತಿದೆ. ಜವಾಬ್ದಾರಿಯನ್ನು ಮುಡಾ ಅಧೀನಕ್ಕೆ ಒಳಪಡಿಸಿದ್ದರೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು. 20 ವರ್ಷದ ಹಿಂದೆ ಅಭಿವೃದ್ಧಿ ಪಡಿಸಿದ್ದ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅವುಗಳ ದುರಸ್ತಿ ಮಾಡಲು ಡೆವಲಪರ್‌ಗಳಿಗೆ ಸೂಚಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT