ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ 4ಜಿ, 5ಜಿ ಸೇವೆ ಆರಂಭಿಸಲಿ: ನೌಕರರ ಒಕ್ಕೂಟದಿಂದ ಒತ್ತಾಯ

ನಾನ್‌ ಎಕ್ಸಿಕ್ಯೂಟಿವ್‌ ನೌಕರರ ಒಕ್ಕೂಟದಿಂದ ಒತ್ತಾಯ
Published 28 ನವೆಂಬರ್ 2023, 16:44 IST
Last Updated 28 ನವೆಂಬರ್ 2023, 16:44 IST
ಅಕ್ಷರ ಗಾತ್ರ

ಮೈಸೂರು: ಬಿಎಸ್‌ಎನ್‌ಎಲ್‌ 4ಜಿ, 5ಜಿ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಕಾರ್ಯನಿರ್ವಾಹಕೇತರ ಒಕ್ಕೂಟದ ಸದಸ್ಯರು ಜಯಲಕ್ಷ್ಮಿಪುರಂ ಕಚೇರಿ ಮುಂಭಾಗ ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ಒಕ್ಕೂಟದ ಸಂಚಾಲಕ ಕೆ.ಪುಟ್ಟಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರದ ಭಾರತ್‌ ಸಂಚಾರ್‌ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ದೇಶದಾದ್ಯಂತ 4ಜಿ ಸೇವೆ ನೀಡಲು ಸಿದ್ಧವಾಗಿದೆ. ಆದರೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ ಈಗಾಗಲೇ ಸೇವೆ ಆರಂಭಿಸಿ 5ಜಿ ಸೇವೆ ನೀಡುತ್ತಿವೆ. ಕೇಂದ್ರದ ಇಚ್ಛಾಶಕ್ತಿ ಕೊರತೆಯಿಂದ ಬಿಎಸ್‌ಎನ್‌ಎಲ್‌ 4ಜಿ ಸೇವೆ ನೀಡಲು ಹೆಣಗಾಡುತ್ತಿದೆ’ ಎಂದು ದೂರಿದರು.

‘2022 ಮತ್ತು 2023ರಲ್ಲಿ ಹಲವು ಬಾರಿ 4ಜಿ ಆರಂಭಕ್ಕೆ ಸಿದ್ದತೆ ನಡೆಸಿತ್ತು, ಆದರೆ ಅದು ಸಾಧ್ಯವಾಗಿಲ್ಲ. ಪ್ರಶ್ನಿಸಿದಾಗ ಪ್ರತೀ ಬಾರಿ 18 ತಿಂಗಳ ಕಾಲಾವಕಾಶ ಕೇಳುತ್ತಿದ್ದಾರೆ. 4ಜಿ ಕೊರತೆಯಿಂದಾಗಿ ಈ ಆರ್ಥಿಕ ವರ್ಷದಲ್ಲಿ ಅನೇಕ ಚಂದಾದಾರರನ್ನು ಬಿಎಸ್‌ಎನ್‌ಎಲ್‌ ಕಳೆದುಕೊಂಡಿದೆ. ಆದಾಗ್ಯೂ ಆಡಳಿತ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ತಿಳಿಸಿದರು.

‘ನಾನ್‌ ಎಕ್ಸಿಕ್ಯೂಟಿವ್‌ಗಳಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 3ನೇ ವೇತನ ಪರಿಷ್ಕರಣೆ ಹಾಗೂ ಬಡ್ತಿ ನೀತಿ ಜಾರಿಯಾಗಬೇಕು. ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್‌ಅನ್ನು ಜನರು ಅವಲಂಬಿಸಿದ್ದಾರೆ ಎಂದು ನಂಬಲಾಗಿದೆ. ಆದರೆ ಕ್ರಮೇಣ ಚಂದಾದಾರರ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ’ ಎಂದು ಆತಂಕ ವ್ಯಕ್ತಪಡಿದರು.

‘5ಜಿ ಯುಗ ಚಾಲ್ತಿಯಲ್ಲಿರುವಾಗ ನಮ್ಮಲ್ಲಿ 4ಜಿ ಸೇವೆಯೂ ಇಲ್ಲದಿರುವುದು ವಿಷಾದನೀಯ. ಡಿಜಿಟಲ್‌ ಯುಗದಲ್ಲಿ ಶಿಕ್ಷಣ ಹಾಗೂ ಉದ್ಯೋಗ ಹೀಗೆ ಎಲ್ಲಾ ಕ್ಷೇತ್ರಕ್ಕೆ ಇಂಟರ್‌ನೆಟ್‌ ಅಗತ್ಯವಾಗಿರುವಾಗ ಗ್ರಾಹಕರು ಬಿಎಸ್‌ಎನ್‌ಎಲ್ ನೀಡುವ 3ಜಿಯಲ್ಲಿ ಅಷ್ಟೂ ಕೆಲಸ ನಿಭಾಯಿಸಲು ಹೇಗೆ ಸಾಧ್ಯ. ಈ ಬಗ್ಗೆ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು 4ಜಿ, 5ಜಿ ಸೇವೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ನಾಗೇಂದ್ರ, ಯತೀರಾಜ್‌, ಎನ್‌.ಕೆ.ಶಿವಣ್ಣ, ಜೈಶೀಲನ್‌, ಮಾಳವೇಶ್‌ ಕುಮಾರ್‌, ಶ್ರೀಕಾಂತ್‌.ಎನ್‌ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT