ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ, ದ್ವೇಷದ ಹೆಬ್ಬಾವು ನಮ್ಮನ್ನು ನುಂಗದಿರಲಿ: ಸಾಹಿತಿ ಜಯಂತ್ ಕಾಯ್ಕಿಣಿ

Published 1 ಜುಲೈ 2024, 14:30 IST
Last Updated 1 ಜುಲೈ 2024, 14:30 IST
ಅಕ್ಷರ ಗಾತ್ರ

ಮೈಸೂರು: ‘ಜಾತಿ, ಧರ್ಮ, ಅಸೂಯೆ, ದ್ವೇಷದಂತಹ ಹೆಬ್ಬಾವು ನಮ್ಮನ್ನು ನುಂಗಲು ‌ಬಿಡಬಾರದು. ಅದು ನುಂಗಿಬಿಟ್ಟರೆ ನಾವೆಲ್ಲರೂ ಶಿಲಾಯುಗಕ್ಕೆ ಹೋಗಬೇಕಾಗುತ್ತದೆ’ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಎಚ್ಚರಿಸಿದರು.

ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಜೆಎಸ್ಎಸ್‌ ಡಯಲ್‌ ಬುಕ್‌ ಕ್ಲಬ್‌ನ 7ನೇ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸುಶಿಕ್ಷಿತ ಹಾಗೂ ಪ್ರಜ್ಞಾವಂತರಾದ ನಾವು ದ್ವೇಷ ಹರಡುವುದನ್ನು ಪ್ರೋತ್ಸಾಹಿಸಬಾರದು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು. ಆಗ ಸಮಾನತೆ ಬರುತ್ತದೆ. ಪ್ರೀತಿಯಿಂದ ನೋಡಿದರೆ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಜೀವನ ಪ್ರೀತಿಯೂ ಬಹಳ ಮುಖ್ಯವಾಗುತ್ತದೆ. ಎಲ್ಲರನ್ನೂ ಮನುಷ್ಯರನ್ನಾಗಿ ನೋಡಬೇಕು’ ಎಂದು ಹೇಳಿದರು.

ಗ್ರಂಥಾಲಯ ಅತಿಕ್ರಮಿಸಿದ ಜಿಮ್‌

‘ಪ್ರಸ್ತುತ ದಿನಗಳಲ್ಲಿ ಬುಕ್ ಎಂದರೆ ಫೇಸ್‌ಬುಕ್‌, ಪಾಸ್‌ ಬುಕ್ ಅಥವಾ ಚೆಕ್ ಬುಕ್ ಎಂಬಂತಾಗಿ ಹೋಗಿದೆ. ಹಿಂದೆ ಗ್ರಂಥಾಲಯಗಳಿದ್ದ ಜಾಗವನ್ನು ಜಿಮ್‌ಗಳು ಆಕ್ರಮಿಸಿಕೊಂಡಿವೆ. ಇದು ಅಪಾಯಕಾರಿಯಾದುದು.‌ ಜೀವನದ ಪರೀಕ್ಷೆಗೆ ತಯಾರಾಗಲು ಇರುವ ಪಠ್ಯಪುಸ್ತಕವೇ ಸಾಹಿತ್ಯ. ‌ಆ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗುವುದಿಲ್ಲ. ಸಾಹಿತ್ಯವನ್ನು ಓದಿಕೊಂಡವನು ಜೀವನದ ಪರೀಕ್ಷೆಯಲ್ಲಿ ಪಾಸಾಗಬಹುದು. ಇದಕ್ಕಾಗಿ ಮನೆಗಳಲ್ಲಿ ಪುಸ್ತಕಗಳನ್ನು ಇಡಬೇಕು; ಓದಬೇಕು’ ಎಂದು ಸಲಹೆ ನೀಡಿದರು.

‘ವೈದ್ಯಕೀಯ ವಿಜ್ಞಾನ ಹಾಗೂ ಸಾಹಿತ್ಯ ಎರಡೂ ಬೇರೆ ಬೇರೆಯಲ್ಲ. ಎರಡೂ ವ್ಯಕ್ತಿಯ ನೋವು ನಿವಾರಣೆ ಮಾಡುವುದು ಹಾಗೂ ಮನುಷ್ಯನನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ’ ಎಂದು ವ್ಯಾಖ್ಯಾನಿಸಿದರು.

‘ಯಾವ ಜ್ಞಾನ ಅಹಂಕಾರ ಪಡುತ್ತದೆಯೋ ಅದು ಜ್ಞಾನವೇ ಆಗುವುದಿಲ್ಲ. ಯಾರಿಗೆ ಅಹಂಕಾರ ಬರುವುದಿಲ್ಲವೋ ಅವರೇ ಜ್ಞಾನಿ’ ಎಂದು ಪ್ರತಿಪಾದಿಸಿದರು.

ಹೃದಯವನ್ನು ಸಣ್ಣದು ಮಾಡಿಕೊಳ್ಳಬೇಕೇಕೆ?:

‘ಶೇಖರಿಸಿಟ್ಟುಕೊಳ್ಳುವುದಕ್ಕಿಂತ, ಇತರರಿಗೆ ಹಂಚಿ ಖುಷಿಪಡಬೇಕು. ನಮಗೆಲ್ಲರಿಗೂ ದೊರೆತಿರುವ ವಿಶಾಲವಾದ ಹೃದಯವನ್ನು ನಾವ್ಯಾಕೆ ಜಾತಿ, ಧರ್ಮ, ವರ್ಗವೆಂಬ ಸೀಮಿತ ಮನಸ್ಥಿತಿ ಕಾರಣಕ್ಕೆ ಸಣ್ಣದಾಗಿ ಮಾಡಿಕೊಳ್ಳಬೇಕು?’ ಎಂದು ಕೇಳಿದರು.

‘ಸರಳವಾಗಿರುವುದು ಬಹಳ ಸುಂದರವಾದುದು.‌ ಅದರಲ್ಲಿ ಖುಷಿ ‌ಪಡಬೇಕು. ಸಾಮಾಜಿಕ ಋಣ ನಮ್ಮೆಲ್ಲರ ಮೇಲೂ ಇದೆ. ನಮ್ಮ ಜೀವನದ ಹಿಂದೆ ನಾನಾ ಮತ, ಜಾತಿ ಹಾಗೂ ಧರ್ಮದವರ ಪರಿಶ್ರಮದ ಋಣವಿದೆ. ಇದನ್ನು ಎಲ್ಲರೂ ಅರಿಯಬೇಕು’ ಎಂದರು.

ಜಯಂತ್ ಅವರ ‘ಅನಾರ್ಕಲಿ ಸೇಫ್ಟಿ ಪಿನ್’, ‘ಚಾರ್‌ಮಿನಾರ್’ ಹಾಗೂ ‘ನೋ ಪ್ರಸೆಂಟ್ಸ್ ಪ್ಲೀಸ್’ ಕುರಿತು ಆಸ್ಪತ್ರೆಯ ವೈದ್ಯರು ಅಭಿಪ್ರಾಯ ಹಂಚಿಕೊಂಡರು.

‘ಜನರು ಹೆಚ್ಚಿದಷ್ಟು ಸಾಂಬಾರು ನೀರಾಗುವುದಿಲ್ಲವೇ?’

‘ಹದಿಹರೆಯದಲ್ಲಿ ಇದ್ದಾಗ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಆಗ ಜೀವನಪ್ರೀತಿಯೂ ಬಹಳ ಇರುತ್ತದೆ. ಹಾಗಾಗಿಯೇ ಯೌವ್ವನದಲ್ಲಿ ಕೇಳಿದ ಹಾಡುಗಳು ಯಾವಾಗಲೂ ನೆನಪಿರುತ್ತವೆ; ಆ ದಿನಗಳನ್ನೂ ನೆನಪಿಗೆ ತರುತ್ತವೆ. ಹಿಂದೆ ಸಿನಿಮಾಗಳು ಬಿಡುಗಡೆ ಆಗುವ ಪ್ರಮಾಣ ಕಡಿಮೆ ಇತ್ತು. ಈಗ ಜಾಸ್ತಿ ಬರುತ್ತಿವೆ. ಇದರಿಂದಾಗಿಯೂ ಗುಣಮಟ್ಟದ ಹಾಡುಗಳು ಕಡಿಮೆ ಆಗುತ್ತಿವೆ ಎನ್ನಬಹುದು. ಮದುವೆ ಮನೆಯಲ್ಲಿ ಜನ ಹೆಚ್ಚಾದಷ್ಟೂ ಸಾಂಬಾರು ನೀರಿನಂತಾಗುತ್ತದೆ ಅಲ್ಲವೇ? ಹಾಗೆಯೇ ಇದೂ ಆಗಿದೆ’ ಎಂದು ಜಯಂತ್‌ ಕಾಯ್ಕಿಣಿ ಸಂವಾದದಲ್ಲಿ ಪ್ರತಿಕ್ರಿಯಿಸಿದರು.

‘ಸಾಹಿತ್ಯ ಅಥವಾ ದಿನಪತ್ರಿಕೆಯನ್ನೂ ಓದದ ಹೊಸ ತಲೆಮಾರು ಸಿನಿಮಾ ಮಾಡಲು ಬರುತ್ತಿರುವುದರಿಂದಾಗಿ ಚಲನಚಿತ್ರಗಳ ಗುಣಮಟ್ಟ ಕುಸಿಯುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT