ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದಪುರ | ತೂಕದಲ್ಲಿ ಮೋಸ: ರಾಗಿ ವಶಕ್ಕೆ ಪಡೆದ ಸ್ಥಳೀಯರು

Published 28 ಮಾರ್ಚ್ 2024, 15:57 IST
Last Updated 28 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಬೆಟ್ಟದಪುರ: ಇಲ್ಲಿನ ಕೌಲನಹಳ್ಳಿ ಗ್ರಾಮದಲ್ಲಿ ರಾಗಿ ಖರೀದಿ ಮಾಡಲು ಬಂದ ವ್ಯಾಪಾರಸ್ಥ ಹಾಗೂ ದಲ್ಲಾಳಿ ತೂಕದಲ್ಲಿ ಮೋಸ ಮಾಡುತ್ತಿರುವುದು ತಿಳಿದ ರೈತರು ಸ್ಥಳದಲ್ಲಿ ಪತ್ತೆ ಹಚ್ಚಿ 82 ಕ್ವಿಂಟಲ್ ರಾಗಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಈ ವ್ಯಾಪಾರಿ ಹಾಗೂ ದಳ್ಳಾಳಿ ಅಕ್ಕಪಕ್ಕದ ಗ್ರಾಮಗಳಲ್ಲಿ ಒಂದು ಕ್ವಿಂಟಲ್ ಗೆ ₹3,200 ರಿಂದ ₹3,500 ವರೆಗೆ ಹಣ ನೀಡಿ ರಾಗಿಯನ್ನು ಖರೀದಿ ಮಾಡಿದ್ದರು. ಇವರು ಒಂದು ಕ್ವಿಂಟಾಲಿಗೆ 30 ರಿಂದ 35 ಕೆಜಿಯಷ್ಟು ರೈತರಿಗೆ ಮೋಸ ಮಾಡುತ್ತಿರುವುದು ಕಂಡುಬಂದಿದೆ.

ವ್ಯಾಪಾರಿ ಹಾಗೂ ದಲ್ಲಾಳಿ ಲಾರಿಯಲ್ಲಿ ಲೋಡ್ ಮಾಡಿದ್ದ 65 ಕ್ವಿಂಟಲ್ ರಾಗಿಯನ್ನು ಮತ್ತೊಮ್ಮೆ ಬೇರೆ ತೂಕದ ಯಂತ್ರದಲ್ಲಿ ಪರೀಕ್ಷಿಸಿದಾಗ 82 ಕ್ವಿಂಟಲ್ ರಾಗಿ ಇರುವುದು ಗೊತ್ತಾಗಿದೆ, ಇದರಿಂದ ಆಕ್ರೋಶಗೊಂಡ ರೈತರು ಎಲ್ಲ ರಾಗಿಯನ್ನು ಹಿಂಪಡೆದಿದ್ದಾರೆ.

ಕೌಲನಹಳ್ಳಿ ಗ್ರಾಮದ ರೈತ ಸುರೇಶ್ ಮಾತನಾಡಿ, ‘ನಾನು 10 ಕ್ವಿಂಟಲ್ ರಾಗಿಯನ್ನು ತೂಕ ಮಾಡಿ ಮನೆಯಲ್ಲಿ ಇಟ್ಟುಕೊಂಡಿದ್ದೆ. ಇವರಿಗೆ ಮಾರಾಟ ಮಾಡಿದಾಗ ನನಗೆ 6.50 ಕ್ವಿಂಟಲ್ ಮಾತ್ರ ತೂಕವನ್ನು ತೋರಿಸುತ್ತಿದ್ದರು. ವ್ಯಾಪಾರಿ ಬಳಿ ಕೇಳಿದಾಗ ಯಾರಿಗೂ ಹೇಳಬೇಡ 10 ಕ್ವಿಂಟಲ್ ಹಣವನ್ನು ನೀಡುತ್ತೇನೆ ಎಂದು ನನಗೆ ಬಾಯಿ ಮುಚ್ಚಿಸಲು ಪ್ರಯತ್ನ ಮಾಡಿದರು. ಇದಕ್ಕೆ ನಾನು ಒಪ್ಪದೆ ಗ್ರಾಮಸ್ಥರಿಗೆ ಮಾಹಿತಿ ನೀಡಿದಾಗ ಇವರು ತೂಕದಲ್ಲಿ ಮಾಡುತ್ತಿರುವ ಮೋಸ ತಿಳಿಯಿತು’ ಎಂದು ಹೇಳಿದರು.

ಆನಿವಾಳು ಯುವ ಮುಖಂಡ ಸಂತೋಷ್ ಮಾತನಾಡಿ, ‘ತೂಕದ ಯಂತ್ರದಲ್ಲಿ ರಿಮೋಟ್ ಅಳವಡಿಸಿಕೊಂಡು ಒಂದು ಚೀಲದಲ್ಲಿ 60 ರಿಂದ 65 ಕೆಜಿಗೆ ಮಾತ್ರ ನಿಗದಿ ಮಾಡುತ್ತಾರೆ. ತೂಕ ಮಾಡುವಾಗ ತುಂಬಾ ನಾಜೂಕಾಗಿ ರೈತರನ್ನು ಮಾತನಾಡಿಸಿ ಅವರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ’ ಎಂದು ಆರೋಪಿಸಿದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಖರೀದಿಸಿದ ರಾಗಿಯನ್ನು ಹಿಂಪಡೆಯಲು ತೀರ್ಮಾನಿಸಿ, ಹಿಂಪಡೆದ ರಾಗಿಯನ್ನು ಮಾರಾಟ ಮಾಡಿ ತೂಕದಲ್ಲಿ ಮೋಸ ಹೋಗಿದ್ದ ರೈತರಿಗೆ ಉಳಿಕೆ ಹಣವನ್ನು ನೀಡುವುದಾಗಿ ಇತ್ಯರ್ಥ ಮಾಡಲಾಯಿತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲು ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT