ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರೊಂದಿಗಿದ್ದು ಸಮಸ್ಯೆ ಪರಿಹರಿಸುವೆ: ಬಿಜೆಪಿ ಅಭ್ಯರ್ಥಿ ಯದುವೀರ್

ವಿವಿಧೆಡೆ ಪ್ರಮುಖರ ಸಭೆ ನಡೆಸಿದ ಬಿಜೆಪಿ ಅಭ್ಯರ್ಥಿ ಯದುವೀರ್
Published 1 ಏಪ್ರಿಲ್ 2024, 4:37 IST
Last Updated 1 ಏಪ್ರಿಲ್ 2024, 4:37 IST
ಅಕ್ಷರ ಗಾತ್ರ

ಮೈಸೂರು: ‘ಜನರ ಜೊತೆಗಿದ್ದು ಅವರ ಸಮಸ್ಯೆ ಪರಿಹಾರಕ್ಕೆ ಶ್ರಮಿಸುವೆ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಚುನಾವಣಾ ಪ್ರಚಾರಾರ್ಥ ಇಲ್ಲಿನ ನಜರಬಾದ್‌ನ ನಿಮಿಷಾಂಬ ಸಮುದಾಯ ಭವನದಲ್ಲಿ ಭಾನುವಾರ ಜಟ್ಟಿ ಸಮಾಜದ ಪ್ರಮುಖರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಮಹಾರಾಜ, ಯುವರಾಜ ಎಂಬುದು ನನ್ನಲ್ಲಿಲ್ಲ. ದೇಶದ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಲು ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಮೈಸೂರಿನ ಹಿರಿಮೆ ಹೆಚ್ಚಾಗುವಂತೆ ಕೆಲಸ ಮಾಡಲು ನನಗೆ ಅವಕಾಶ ಕೊಡಬೇಕು’ ಎಂದು ಕೋರಿದರು.

‘ಅರಮನೆಗೂ– ಜಟ್ಟಿ ಸಮುದಾಯಕ್ಕೂ ನಂಟಿದೆ. ಈ ಸಮುದಾಯವು ಮೈಸೂರು ಸಂಸ್ಥಾನದ ಹಿತಕ್ಕಾಗಿ ನಿಂತಿತ್ತು. ಈಗ, ದೇಶಕ್ಕಾಗಿ ಮೋದಿ ಜತೆಗೆ ನಿಂತು ಕೆಲಸ ಮಾಡಬೇಕು’ ಎಂದರು.

ಗೌರವ ಹೆಚ್ಚಿಸಿ: ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಪಕ್ಷದ ಕೇಂದ್ರದ ನಾಯಕತ್ವ ಯದುವೀರ್‌ ಅವರನ್ನು ಒಪ್ಪಿಸಿ ಚುನಾವಣೆಗೆ ಕರೆತಂದಿದೆ. ಅವರು ಅರಮನೆಯಿಂದ ಹೊರಗೆ ಬಂದು ಎಲ್ಲರೊಂದಿಗೂ ಬೆರೆಯುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಸಂಸದರಾಗಿ ಅಯ್ಕೆಯಾದರೆ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲಿದ್ದಾರೆ. ಮೋದಿ ಹೇಳಿರುವ 400 ಸೀಟಿನ ಗುರಿಯಲ್ಲಿ ಮೈಸೂರು ಮೊದಲನೇ ಜಯವಾಗಬೇಕು. ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಕೋರಿದರು.

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೌಟಿಲ್ಯ ರಘು, ‘ಮೈಸೂರಿನ ಗೌರವ ಮತ್ತು ದೇಶವನ್ನು ಉಳಿಸಲು ಬಿಜೆಪಿ ಗೆಲ್ಲಿಸಬೇಕು’ ಎಂದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ‘ಯದುವೀರ್‌ ಅವರನ್ನು ಬೆಂಬಲಿಸಲು ಜಟ್ಟಿ ಸಮುದಾಯ ನಿರ್ಧರಿಸಿರುವುದು ದೊಡ್ಡ ಶಕ್ತಿ ಬಂದಂತಾಗಿದೆ. ಇಡೀ ದೇಶವೀಗ ಮೈಸೂರು ಕ್ಷೇತ್ರದ ಕಡೆಗೆ ನೋಡುತ್ತಿದ್ದು, ಬಿಜೆಪಿ ಪರವಾದ ವಾತಾವರಣ ಇದೆ’ ಎಂದು ಹೇಳಿದರು.

ಮಾಜಿ ಮೇಯರ್ ಸಂದೇಶ್‌ ಸ್ವಾಮಿ ಮಾತನಾಡಿ, ‘ಮೈಸೂರು ಭಾಗಕ್ಕೆ ಮಹಾರಾಜರ ಕೊಡುಗೆ ಅಪಾರವಾಗಿದೆ’ ಎಂದು ಸ್ಮರಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ಮಾತನಾಡಿದರು. ಮಾಜಿ ಮೇಯರ್‌ ಶಿವಕುಮಾರ್, ಮುಖಂಡ ಎಂ.ಸತೀಶ್, ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಗಿರಿಧರ್, ವಕ್ತಾರ ಕೆ.ವಸಂತಕುವಾರ್ ಪಾಲ್ಗೊಂಡಿದ್ದರು.

ನಂತರ ಯದುವೀರ್ ಅವರು ವಿಜಯನಗರದ ಸಪ್ತ ಮಾತೃಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿವಿಧ ಸಮಾಜಗಳ ಪ್ರಮುಖರ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT